ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿವಿಲಾಸ ಅಣೆಕಟ್ಟೆ ಕೆಳಭಾಗ ಅಭಿವೃದ್ಧಿಗೆ ಆಗ್ರಹ

ಒಂಬತ್ತು ವರ್ಷ ಕಳೆದರೂ ಮುಗಿಯದ ಅಭಿವೃದ್ಧಿ ಕಾಮಗಾರಿ
Published 18 ಮೇ 2023, 23:30 IST
Last Updated 18 ಮೇ 2023, 23:30 IST
ಅಕ್ಷರ ಗಾತ್ರ

ಹಿರಿಯೂರು: ವಾಣಿವಿಲಾಸ ಅಣೆಕಟ್ಟೆಯ ಕೆಳಭಾಗದ ವಿಶಾಲವಾದ ಪ್ರದೇಶದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಒದಗಿಸಲು ₹ 5 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ಕಾಮಗಾರಿ ಒಂಭತ್ತು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ.

ಪ್ರವಾಸಿಗರಿಗೆ ವಿಶ್ರಾಂತಿಧಾಮ, ಉದ್ಯಾನ, ಪ್ರವಾಸಿ ಮಂದಿರ, ಹೈಟೆಕ್ ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗೆ 2014ರಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಶಂಕುಸ್ಥಾಪನೆ ನೆರವೇರಿಸಿದ್ದರು. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವಂತೆ ನಿರ್ಮಿತಿ ಕೇಂದ್ರಕ್ಕೆ ತಾಕೀತು ಮಾಡಲಾಗಿತ್ತು. ಆದರೆ, ಒಂಭತ್ತು ವರ್ಷಗಳು ಕಳೆದರೂ ನಿರ್ಮಿತಿ ಕೇಂದ್ರದವರು ಕಾಮಗಾರಿ ಪೂರ್ಣಗೊಳಿಸದಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಮಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಡಿ ನೀರಿನ ಹರಿವಿನಿಂದ ವಾಣಿವಿಲಾಸ ಜಲಾಶಯ ಹಿಂದಿನ ವರ್ಷ ಕೋಡಿ ಬೀಳುವ ಮೂಲಕ ದಾಖಲೆ ನಿರ್ಮಿಸಿದೆ. ವಾಣಿವಿಲಾಸ ಅಣೆಕಟ್ಟೆ ಹಾಗೂ ಕಣಿವೆ ಮಾರಮ್ಮ ದೇವಿಯ ದರ್ಶನಕ್ಕೆ ನಿತ್ಯ ನೂರಾರು ಪ್ರವಾಸಿಗರು, ಭಕ್ತರು ಬಂದು ಹೋಗುತ್ತಾರೆ. ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಎರಡು ಉದ್ಯಾನಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ನಿರ್ವಹಣೆ ಇಲ್ಲದೆ ಸೊರಗಿವೆ ಎಂದು ವಾಣಿವಿಲಾಸಪುರದ ಎಸ್.ಎಸ್. ರಂಗಪ್ಪ ಬೇಸರ ವ್ಯಕ್ತಪಡಿಸಿದರು.

ನಿರ್ಮಿತಿ ಕೇಂದ್ರಕ್ಕೆ ಪತ್ರ: ನಿರ್ಮಿತಿ ಕೇಂದ್ರ ಅಭಿವೃದ್ಧಿಪಡಿಸಿರುವ ಉದ್ಯಾನದ ಆವರಣದ ತುಂಬ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿವೆ. ಹೈಟೆಕ್ ಶೌಚಾಲಯ ಹಾಳಾಗತೊಡಗಿದೆ. ಪ್ರವಾಸಿಮಂದಿರದ ಕೋಣೆಗಳ ನೆಲಹಾಸಿನ ಟೈಲ್ಸ್‌ಗಳು ಒಡೆದು ಹೋಗಿವೆ. ಚಾವಣಿಗೆ ಹೊದಿಸಿದ್ದ ಹೆಂಚುಗಳು ಗಾಳಿಗೆ ಹಾರಿಹೋಗಿವೆ. ಐದಾರು ವರ್ಷದ ಹಿಂದೆ ಬಳಿಸಿದ್ದ ಬಣ್ಣ ಮಾಸಿದೆ. ಇಡೀ ಕಟ್ಟಡ ಅವ್ಯವಸ್ಥೆಯ ಆಗರವಾಗಿದ್ದಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿದೆ. ಇದೆಲ್ಲವನ್ನೂ ಸರಿಪಡಿಸಿ ಹಸ್ತಾಂತರಿಸುವಂತೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕೆಲವು ದಿನಗಳ ಮುಂಚೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಜಿಲ್ಲಾಧಿಕಾರಿ ಅವರೇ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿದ್ದು, ಸಿಬ್ಬಂದಿ ಮೇಲೆ ಒತ್ತಡ ತಂದು ಸದರಿ ಸ್ಥಳವನ್ನು ಯೋಜಿತ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ದೊಡ್ಡ ಆಲದ ಮರದ ಕೆಳಗೆ ಹಾಕಿರುವ ಸಿಮೆಂಟ್ ಬೆಂಚುಗಳು.
ದೊಡ್ಡ ಆಲದ ಮರದ ಕೆಳಗೆ ಹಾಕಿರುವ ಸಿಮೆಂಟ್ ಬೆಂಚುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT