ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಶೀತ ಗಾಳಿ; ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳ

ಜಿಲ್ಲೆಯ 253 ಮಂದಿಯಲ್ಲಿ ಡೆಂಗಿ ಪತ್ತೆ, ರೋಗಿಗಳಿಂದ ಭರ್ತಿಯಾದ ಆಸ್ಪತ್ರೆಗಳು
Published 3 ಜುಲೈ 2024, 6:49 IST
Last Updated 3 ಜುಲೈ 2024, 6:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಶೀತ ಗಾಳಿ, ತುಂತುರು ಮಳೆ, ಮೋಡ ಮುಚ್ಚಿದ ವಾತಾವರಣದಿಂದಾಗಿ ಜನರಿಗೆ ಅನಾರೋಗ್ಯ ಕಾಡುತ್ತಿದೆ. ಈಚೆಗೆ ಡೆಂಗಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿವೆ.

ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳು, ವೃದ್ಧರಿಗೆ ಶೀತಜ್ವರ ಹೆಚ್ಚುತ್ತಿದೆ. ವಾರಕ್ಕಿಂತಲೂ ಹೆಚ್ಚು ದಿನ ಕಾಡುವ ಜ್ವರ ಡೆಂಗಿಯಾಗಿ ಪತ್ತೆಯಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಕಳೆದ 6 ತಿಂಗಳಿಂದ ಜಿಲ್ಲೆಯಾದ್ಯಂತ 253 ಮಂದಿಯಲ್ಲಿ ಡೆಂಗಿ ಪತ್ತೆಯಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೀತ ವಾತಾವರಣದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಡೆಂಗಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೂನ್‌ ತಿಂಗಳೊಂದರಲ್ಲೇ ಜಿಲ್ಲೆಯಲ್ಲಿ 55 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಖಾಸಗಿ, ಸರ್ಕಾರಿ ರಕ್ತ ಪರೀಕ್ಷಾ ಪ್ರಯೋಗಾಲಯಗಳಿಗೆ ಕಾರ್ಯದೊತ್ತಡ ಹೆಚ್ಚಾಗಿದೆ.

ಜನವರಿಯಿಂದ ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಮಂದಿಗೆ ರಕ್ತ ಪರೀಕ್ಷೆ ಮಾಡಿಸಲಾಗಿದ್ದು, ಬಹುತೇಕ ಮಂದಿಯಲ್ಲಿ ಡೆಂಗಿ ಪತ್ತೆಯಾಗಿದೆ. ವೈರಲ್‌ ಜ್ವರಪೀಡಿತರಲ್ಲಿ ಡೆಂಗಿ ಪತ್ತೆಯಾಗುತ್ತಿದ್ದು, ಜನರು ಆರೋಗ್ಯದ ಬಗ್ಗೆ ಕಾಳಜಿ ಮಾಡುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಮಲೇರಿಯಾ ಪತ್ತೆಯಾಗಿಲ್ಲ.

‘ಡೆಂಗಿ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಸೂಕ್ತ ಸಮಯದಲ್ಲಿ ಕಡ್ಡಾಯವಾಗಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಡೆಂಗಿಗೆ ನಿಗದಿತ ಚಿಕಿತ್ಸಾ ಪದ್ಧತಿಯಾಗಲೀ, ಔಷಧಿಯಾಗಲೀ ಇಲ್ಲ. ರೋಗ ಲಕ್ಷಣದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ರೋಗದ ತೀವ್ರತೆ ಹೆಚ್ಚಾದರೆ ರೋಗಿಗಳ ಪ್ರಾಣಕ್ಕೂ ಕುತ್ತು ಬರಬಹುದು’ ಎಂದು ತಜ್ಞ ವೈದ್ಯ  ಬಿ.ಮಂಜುನಾಥ್‌ ಹೇಳಿದರು.

ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ: ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಳ್ಳಿಗಳಿಗೆ ತೆರಳಿ ಲಾರ್ವಾ ಸರ್ವೆ ಕೆಲಸ ಮಾಡುತ್ತಿದ್ದಾರೆ. ಸೊಳ್ಳೆಗಳು ಉತ್ಪತ್ತಿಯಾಗುವ ಮೊದಲೇ ಅವುಗಳ ಮೊಟ್ಟೆಗಳನ್ನು ನಾಶ ಮಾಡುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮೊದಲ ಹಾಗೂ 3ನೇ ಶುಕ್ರವಾರಗಳನ್ನು ಲಾರ್ವಾ ಸರ್ವೆಗಾಗಿ ನಿಗದಿ ಮಾಡಿಕೊಳ್ಳಲಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಕಸ ಸಂಗ್ರಹ ಸಿಬ್ಬಂದಿಯನ್ನೂ ಜಾಗೃತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಕಸ ಸಂಗ್ರಹ ವಾಹನಗಳಲ್ಲಿ ಡೆಂಗಿ, ಮಲೇರಿಯಾ ಜಾಗೃತಿ ಸಂದೇಶವುಳ್ಳ ಧ್ವನಿ ಮುದ್ರಣವನ್ನು (ಆಡಿಯೊ ಜಿಂಗಲ್‌) ಪ್ರಸಾರ ಮಾಡಲಾಗುತ್ತಿದೆ.

‘ಡೆಂಗಿ ಹರಡುವ ಏಡಿಸ್‌ ಈಜಿಪ್ಟೈ ಸೊಳ್ಳೆಗಳು ಹೆಚ್ಚಾಗಿ ಕಂಡುಬರುತ್ತಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೊಳೆಗೇರಿ, ಶ್ರಮಿಕರು ವಾಸಿಸುವ ಬಡಾವಣೆಗಳಲ್ಲಿ ಜಾಗೃತಿಗೆ ಒತ್ತು ನೀಡಲಾಗಿದೆ. ಗ್ರಾಮಗಳನ್ನು ಗುರುತಿಸಿ ತಂಡಗಳ ಮೂಲಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಮನೆಯ ಸುತ್ತಮುತ್ತ ಇರುವ ಗುಂಡಿಗಳು, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಡೆಂಗಿ ಪ್ರಕರಣ ಸಂಖ್ಯೆ

ತಾಲ್ಲೂಕು;ಪ್ರಕರಣ

ಚಿತ್ರದುರ್ಗ;179

ಚಳ್ಳಕೆರೆ;30

ಹಿರಿಯೂರು;17

ಹೊಳಲ್ಕೆರೆ;17

ಹೊಸದುರ್ಗ;06

ಮೊಳಕಾಲ್ಮುರು;04

ಒಟ್ಟು;253

Highlights - ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳ ಸಂಖ್ಯೆ ಜಿಲ್ಲೆಯಾದ್ಯಂತ ಮಲೇರಿಯಾ ನಿಯಂತ್ರಣ 1, 3ನೇ ಶುಕ್ರವಾರ ಜಾಗೃತಿ ಕಾರ್ಯಕ್ರಮ

Quote - ‘ಸಮುದಾಯದ ಸಹಕಾರದೊಂದಿಗೆ ಡೆಂಗಿ ನಿಯಂತ್ರಿಸಿ’ ಎಂಬುದು ಈ ಬಾರಿ ಡೆಂಗಿ ದಿನದ ಘೋಷವಾಕ್ಯವಾಗಿದೆ. ಅದರಂತೆ ಜನರೊಂದಿಗೆ ಸೇರಿ ರೋಗ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ ಡಾ.ಕಾಶಿ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣಾಧಿಕಾರಿ

Cut-off box - ಮಕ್ಕಳ ಆರೋಗ್ಯ ಜೋಪಾನ ಹವಾಮಾನ ವೈಪರೀತ್ಯದ ನಡುವೆ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಪೋಷಕರಿಗೆ ಸವಾಲಾಗಿದೆ. ಶೀತ ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ತಜ್ಞರ ಬಳಿ ತಪಾಸಣೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ನಗರದ ತಾಯಿ– ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ‘ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನೇ ಕುಡಿಸಬೇಕು. 2–3 ದಿನಗಳ ನಂತರವೂ ಜ್ವರ ಬಿಡದಿದ್ದರೆ ತಪ್ಪದೇ ಎನ್‌ಎಸ್‌ಐ– ಆಂಟಿಜೆನ್‌ ಪರೀಕ್ಷೆ ಮಾಡಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಮಾಡಲಾಗುತ್ತದೆ’ ಎಂದು ಮಕ್ಕಳ ತಜ್ಞ ಸದಾನಂದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT