ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಕಾಡುತ್ತಿದೆ ಬರ..ಮೇವೂ ಸಿಗದ ಸ್ಥಿತಿ..

Published 29 ಅಕ್ಟೋಬರ್ 2023, 7:47 IST
Last Updated 29 ಅಕ್ಟೋಬರ್ 2023, 7:47 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ನನಗೀಗ 59 ವರ್ಷ. ನನ್ನ ನೆನಪಲ್ಲಿ ಇಷ್ಟರ ಮಟ್ಟಿಗೆ ಬೆಳೆ ಕೈಕೊಟ್ಟಿದ್ದು ಕಂಡಿಲ್ಲ. ಬಿತ್ತನೆ ಮಾಡಿದ್ದೇ ಕೊನೆ. ಮತ್ತೆ ಒಂದು ಸಾರಿಯೂ ಮಳೆ ತಿರುಗಿ ನೋಡಲಿಲ್ಲ. ದನ, ಕರುಗಳನ್ನು ಹೇಗೆ ಬದುಕಿಸಿಕೊಳ್ಳಬೇಕು? ಮುಂದೆ ಇನ್ನೂ ಏನೇನು ಕಾದೈತೋ ತಿಳಿಯುತ್ತಿಲ್ಲ. ದೇವರೇ ಕಾಪಾಡಬೇಕು’... ಹೀಗೆಂದು ನಿಟ್ಟುಸಿರುಬಿಟ್ಟಿದ್ದು ನಾಗಸಮುದ್ರದ ಮಾರಕ್ಕ.

ಹಲವು ವರ್ಷಗಳಿಂದ ಮಳೆ ಕೈಕೊಡುತ್ತಿರುವ ಕಾರಣ ತಾಲ್ಲೂಕು ಶಾಶ್ವತ ಬರಪೀಡಿತ ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೆ ಈ ವರ್ಷ ಇದನ್ನೂ ಮೀರುವಷ್ಟು ಬರ ಆವರಿಸಿಕೊಳ್ಳುವ ಲಕ್ಷಣ ಇದೆ. ಕುಟುಂಬ ಮತ್ತು ಜಾನುವಾರುಗಳನ್ನು ಹೇಗೆ ಕಾಪಾಡಬೇಕು ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ ರೈತರು.

ತಾಲ್ಲೂಕಿನಲ್ಲಿ ಮುಂಗಾರು ಖುಷ್ಕಿ ಬೆಳೆಯಾಗಿ ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿದಲ್ಲಿ ಸಜ್ಜೆ, ರಾಗಿ, ತೊಗರಿ, ನವಣೆ, ಸೂರ್ಯಕಾಂತಿ ಬಿತ್ತುತ್ತಾರೆ. ಈ ವರ್ಷ ಜುಲೈ 2ನೇ ವಾರದಲ್ಲಿ ಬಿದ್ದ ತುಂತುರು ಮಳೆಗೆ ಬಿತ್ತನೆ ಮಾಡಲಾಯಿತು.

ನಂತರ ಜಿಟಿ, ಜಿಟಿ ಮಳೆಗೆ ಗಿಡ ಹುಟ್ಟುವಾಗ ಆಗಸ್ಟ್‌ ತಿಂಗಳಿನಲ್ಲಿ ಶೇ 92ರಷ್ಟು ವಾಡಿಕೆ ಮಳೆ ಕೈಕೊಟಿದ್ದರಿಂದ ಬೆಳವಣಿಗೆ ಕುಂಠಿತವಾಗಿ ಬೆಳೆ ಕೈತಪ್ಪುವ ಹಾದಿಯಲ್ಲಿ ಸಾಗಿತು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಒಟ್ಟು 29,000 ಹೆಕ್ಟೇರ್ ಕೃಷಿ ಪ್ರದೇಶ ಪೈಕಿ ಈ ಬಾರಿ 21,500 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಪ್ರತಿ ಕೆ.ಜಿ.ಗೆ ₹ 130-₹140ರಂತೆ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಖರ್ಚು, ಕೂಲಿ, ಕಳೆ ತೆಗೆಸಿದ್ದು ಸೇರಿ ಪ್ರತಿ ಎಕರೆಗೆ ₹ 35,000ಕ್ಕೂ ಹೆಚ್ಚು ಖರ್ಚಾಗಿದೆ. ಶೇ 90ಕ್ಕೂ ಹೆಚ್ಚು ನಷ್ಟವಾಗಿದೆ ಎಂದು ವರದಿ ಸಲ್ಲಿಸಲಾಗಿದೆ ಎಂದು ತಾಂತ್ರಿಕ ಕೃಷಿ ಅಧಿಕಾರಿ ಗಿರೀಶ್‌ ಹೇಳಿದರು.

ಮಳೆ ಕೈಕೊಟ್ಟು ಗಿಡ ಬೆಳೆದಿಲ್ಲ. ಕಾಯಿ ಕಟ್ಟದೇ ಪೂರ್ತಿ ಕೈತಪ್ಪಿದೆ. ಕೆಲ ವರ್ಷ ಬಳ್ಳಿಯಾದರೂ ಸಿಗುತ್ತಿತ್ತು. ಇದರಿಂದ ಮೇವಿನ ಸಮಸ್ಯೆ ಇರಲಿಲ್ಲ. ಆದರೆ ಈ ಬಾರಿ ಮೇವನ್ನು ಹುಳು ತಿನ್ನುತ್ತಿದ್ದು, ಕಟಾವು ಮಾಡಲು ಆಗದ ಸ್ಥಿತಿ ಇದೆ. ಮೇವು ಸಿಗುವುದು ಅನುಮಾನವಿದೆ. ಕೆಲವರು ಕುರಿ, ಮೇಕೆಗೆ ತಿನ್ನಲು ಬಿಡುತ್ತಿದ್ದಾರೆ ಎಂದು ಕೊಂಡ್ಲಹಳ್ಳಿಯ ರೈತ ಕೆ. ಮಂಜುನಾಥ್ ಹೇಳಿದರು.

3 ವರ್ಷ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ಹೆಚ್ಚಳವಾಗಿ ಕುಡಿಯುವ ನೀರಿನ ಸಮಸ್ಯೆ ಇರಲಿಲ್ಲ. ರಂಗಯ್ಯನದುರ್ಗ ಜಲಾಶಯ ಸೇರಿದಂತೆ ಎಲ್ಲಾ ಕೆರೆಗಳು ತುಂಬಿದ್ದವು. ರೇಷ್ಮೆ, ಟೊಮ್ಯಾಟೊಗೆ ಹೆಚ್ಚಿನ ದರ ಸಿಕ್ಕಿದ್ದರಿಂದ ತೋಟ ಮಾಡುವವರ ಸಂಖ್ಯೆ ಹೆಚ್ಚಿದೆ. ನೂರಾರು ಹೊಸ ಕೊಳವೆಬಾವಿ ಕೊರೆಯಿಸಲಾಗಿದ್ದು, ಮಳೆ ಕೈಕೊಟ್ಟಿರುವ ಕಾರಣ ಅಂತರ್ಜಲ ಬತ್ತಲು ಆರಂಭವಾಗಿದೆ. ಕೆಲ ತೋಟಗಳಲ್ಲಿ ಅರ್ಧದಷ್ಟು ನೀರು ಕಡಿಮೆಯಾಗಿದೆ. ವಿದ್ಯುತ್ ಕೊರತೆಯಿಂದಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಬಿಸಿಲಿನ ಝಳಕ್ಕೆ ಗಿಡಗಳು ಸ್ಪಂದಿಸುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ

3 ವರ್ಷದಿಂದ ದೂರವಾಗಿದ್ದ ಕುಡಿಯವ ನೀರಿನ ಸಮಸ್ಯೆ ಈ ವರ್ಷ ಬೇಸಿಗೆ ಮುನ್ನವೇ ಆರಂಭವಾಗುವ ನಿರೀಕ್ಷೆಯಿದೆ. ಪಟ್ಟಣಕ್ಕೆ ಆಸರೆಯಾಗಿದ್ದ ರಂಗಯ್ಯನದುರ್ಗ ಜಲಾಶಯ ಬತ್ತಿದೆ. ಕಸಬಾದಲ್ಲಿ ಹೆಚ್ಚಿನ ಸಮಸ್ಯೆಯಾಗುವ ಸಾಧ್ಯತೆಯಿದೆ. 400 ಅಡಿ ಆಸುಪಾಸಿನಲ್ಲಿದ್ದ ಅಂತರ್ಜಲ ಮಟ್ಟ 700 ಅಡಿಗೆ ಕುಸಿತವಾಗಿದೆ. ಅಲ್ಲಲ್ಲಿ ಹೊಸ ಕೊಳವೆಬಾವಿ ಕೊರೆಸುವ ಸದ್ದು ಆರಂಭವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯ.

ಕೊನೆಯಾಗುತ್ತಿಲ್ಲ ಬರಪೀಡಿತ ತಾಲ್ಲೂಕು ಪಟ್ಟ 7 ಎಕರೆಯಲ್ಲಿ ₹ 2.50 ಲಕ್ಷ ಖರ್ಚು ಮಾಡಿ ಶೇಂಗಾ ಬಿತ್ತಿದ್ದು, ಸಂಪೂರ್ಣ ನಷ್ಟವಾಗಿದೆ. ಫಸಲ್ ಬಿಮಾ ವಿಮೆ, ಸರ್ಕಾರದ ಪರಿಹಾರ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಅಧಿಕಾರಿಗಳು ಗಮನಹರಿಸಬೇಕು
.ಸಿ.ಒ. ನಾಗೇಶ್, ರೈತ, ಮುತ್ತಿಗಾರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT