ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಬಿತ್ತನೆ ನಂತರ ಮಳೆ ಮಾಯ: ಆತಂಕದಲ್ಲಿ ಶೇಂಗಾ ಬೆಳೆಗಾರರು

Published 17 ಆಗಸ್ಟ್ 2023, 7:34 IST
Last Updated 17 ಆಗಸ್ಟ್ 2023, 7:34 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಶೇಂಗಾ ತೀವ್ರ ಮಳೆ ಕೊರತೆಯಿಂದಾಗಿ ಬಾಡುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ.

20 ದಿನಗಳ ಹಿಂದೆ ಸೋನೆ ಮಳೆಗೆ ಬಹುತೇಕ ಕಡೆ ಬಿತ್ತನೆ ಮಾಡಲಾಗಿತ್ತು. ಹದ ಮಳೆಯಾದರೆ ಗಿಡ ಬೆಳೆಯುತ್ತದೆ ಎಂಬ ಧೈರ್ಯದಿಂದ ಬಹುತೇಕ ರೈತರು ಬಿತ್ತನೆ ಮಾಡಿದ್ದರು. ಆದರೆ, ಸಣ್ಣ ಪ್ರಮಾಣದ ಮಳೆಯೂ ಬಾರದ ಪರಿಣಾಮ ಬೆಳೆ ಕೈತಪ್ಪುವ ಆತಂಕ ಎದುರಾಗಿದೆ.

ತಾಲ್ಲೂಕಿನಲ್ಲಿ 22 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಬಹುತೇಕವಾಗಿ ಗಿಡ ಹುಟ್ಟಿ ಎಲೆ ಬಿಡುವ ಹಂತದಲ್ಲಿದೆ. ಮಳೆ ಬಾರದ ಜತೆಗೆ ಬಿಸಿಲು ಹೆಚ್ಚಿರುವುದು ಗಿಡಗಳು ಬಾಡಲು ಒತ್ತು ನೀಡಿದೆ. ತುರ್ತಾಗಿ ಮಳೆ ಬೇಕಾಗಿದ್ದು, ವಾರದೊಳಗೆ ಮಳೆ ಬಂದಲ್ಲಿ ಬೆಳೆ ಉಳಿಯಲಿದೆ ಎಂದು ಕೃಷಿ ಅಧಿಕಾರಿ ಗಿರೀಶ್ ತಿಳಿಸಿದರು.

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷ ದುಬಾರಿ ಬೆಲೆಗೆ ಶೇಂಗಾ ಬೀಜ ಕೊಂಡು ಬಿತ್ತನೆ ಮಾಡಿದ್ದೆವು. ಸರಾಸರಿ ಪ್ರತಿ ಕೆ.ಜಿ. ಬೀಜಕ್ಕೆ ₹ 120ರಿಂದ ₹ 140 ಇದ್ದು, ಎಕರೆಗೆ ಬಿತ್ತನೆ ಖರ್ಚು, ಗೊಬ್ಬರ, ಕೂಲಿ ವೆಚ್ಚ ಸೇರಿ ₹ 20 ಸಾವಿರಕ್ಕೂ ಹೆಚ್ಚು ವ್ಯಯ ಮಾಡಲಾಗಿದೆ. ಈಗ ಮಳೆ ಕೈಕೊಟ್ಟಿರುವುದು ತೀವ್ರ ಆತಂಕ ಮೂಡಿಸಿದೆ ಎಂದು ಮೊಗಲಹಳ್ಳಿಯ ರೈತ ಮಲ್ಲಿಕಾರ್ಜುನಪ್ಪ ತಿಳಿಸಿದರು.

ಕೊನೆ ಹಂತದಲ್ಲಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ಈಗ ತಾನೇ ಗಿಡಗಳು ಮೊಳಕೆಯೊಡೆಯುತ್ತಿವೆ. ದಿನೇ, ದಿನೇ ಬಿಸಿಲು ಹೆಚ್ಚಳವಾಗುತ್ತಿದೆ. ಮಳೆಯೂ ಇಲ್ಲದ ಪರಿಣಾಮ ಝಳಕ್ಕೆ ಗಿಡಗಳು ಬಾಡುತ್ತಿವೆ. ತುರ್ತಾಗಿ ಮಳೆ ಬಾರದಿದ್ದಲ್ಲಿ ಹಾಕಿರುವ ಪೂರ್ತಿ ಬಂಡವಾಳ ನಷ್ಟವಾಗಲಿದೆ. ಪ್ರತಿವರ್ಷ ಗಣೇಶ ಹಬ್ಬದ ವೇಳೆಗೆ ಮಳೆ ಕೈ ಕೊಡುತ್ತಿತ್ತು. ಆಗ ಗಿಡಗಳು ಸ್ಪಲ್ಪ ಬೆಳವಣಿಗೆ ಕಂಡಿರುತ್ತಿದ್ದವು. ಇದರಿಂದ ಕೆಲಕಾಲ ಸುಧಾರಿಸಿಕೊಳ್ಳುತ್ತಿದ್ದವು. ಈ ವರ್ಷದ ಸ್ಥಿತಿ ತೀರಾ ಭಿನ್ನವಾಗಿದೆ ಎಂದರು.

ಈ ಭಾಗದಲ್ಲಿ ಜಾನುವಾರು, ಮೇಕೆ ಸಾಕಣೆ ಹೆಚ್ಚಿದೆ. ಬೆಳೆಯಿಂದ ಮೇವೂ ಸಿಗುತ್ತದೆ ಎಂದು ಹೆಚ್ಚು ಶೇಂಗಾ ಬಿತ್ತನೆ ಮಾಡಲಾಗಿತ್ತು. ವಾರದಲ್ಲಿ ಮಳೆ ಬಾರದಿದ್ದಲ್ಲಿ ಮೇವಿಗೂ ಸಂಚಕಾರ ಉಂಟಾಗಲಿದೆ ಎಂದು ಕುರಿ ಸಾಕಣೆದಾರ ಪಾಲಯ್ಯ ಅಳಲು ತೋಡಿಕೊಂಡರು.

ವಿ.ಸಿ. ಉಮೇಶ್
ವಿ.ಸಿ. ಉಮೇಶ್
ಹನುಮಂತಪ್ಪ
ಹನುಮಂತಪ್ಪ
ಎರಡು ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದು ಬಿತ್ತನೆ ನಂತರ ಒಮ್ಮೆಯೂ ಮಳೆ ಬಂದಿಲ್ಲ. ತಕ್ಷಣ ಮಳೆ ಬಾರದಿದ್ದಲ್ಲಿ ಬೆಳೆ ಆಸೆ ಕೈ ಬಿಡಬೇಕಾಗುತ್ತದೆ.
ಹನುಮಂತಪ್ಪ ರೈತ ರಾಯಾಪುರ
ಈ ವರ್ಷ 11584 ರೈತರು ಫಸಲ್ ಬಿಮಾ ವಿಮೆ ಮಾಡಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 3 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.
ವಿ.ಸಿ. ಉಮೇಶ್ ಕೃಷಿ ತಾಲ್ಲೂಕು ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT