ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕ್ಷೇತ್ರ | ಆಸೆ, ಆಮಿಷ, ಆತಿಥ್ಯಕ್ಕೆ ಮರುಳಾಗಬೇಡಿ: ಎನ್‌.ಈ.ನಟರಾಜ್‌

ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್‌.ಈ.ನಟರಾಜ ಕೋರಿಕೆ
Published 30 ಮೇ 2024, 15:56 IST
Last Updated 30 ಮೇ 2024, 15:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಸೆ, ಆಮಿಷ, ಆತಿಥ್ಯಕ್ಕೆ ಮರುಳಾಗದೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಹೋರಾಟ ಮಾಡುವವರನ್ನು ಬೆಂಬಲಿಸಬೇಕು ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್‌.ಈ.ನಟರಾಜ್‌ ಕೋರಿಕೊಂಡರು.

‘ಶಿಕ್ಷಕರ ಕ್ಷೇತ್ರದ ಮತದಾರರನ್ನು ಸೆಳೆಯಲು ಅನೇಕರು ಅಡ್ಡದಾರಿ ತುಳಿದಿದ್ದಾರೆ. ನಾಗರಿಕ ಸಮಾಜ ನಾಚುವಂತಹ ಪ್ರಯತ್ನಗಳು ನಡೆಯುತ್ತಿವೆ. ಮತದಾರರಿಗೆ ಸೀರೆ, ವಾಚ್‌ ಹಂಚುವ ಹಾಗೂ ಕ್ಯೂಆರ್‌ ಕೋಡ್‌ ನೀಡಿ ಏನನ್ನೋ ವರ್ಗಾವಣೆ ಮಾಡುವ ಹುನ್ನಾರಗಳ ಬಗ್ಗೆ ಶಿಕ್ಷಕರು ಬೇಸರಗೊಂಡಿದ್ದಾರೆ. ಇಂತಹ ಅಭ್ಯರ್ಥಿಗಳ ಬದಲು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿರುವವರನ್ನು ಆಯ್ಕೆ ಮಾಡಿ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.

‘ಶಿಕ್ಷಣ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ನಾನು, ದಾವಣಗೆರೆಯಲ್ಲಿ ನೆಲೆ ಕಂಡುಕೊಂಡಿದ್ದೇನೆ. ಅವಳಿ ಜಿಲ್ಲೆಯೂ ಸೇರಿ ರಾಜ್ಯದ ಎಲ್ಲೆಡೆ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದೇನೆ. ನನ್ನ ಹೋರಾಟ ವಿಧಾನಸೌಧದವರೆಗೆ ತಲುಪಿವೆ. ವಿಧಾನಸೌಧದ ಒಳಗೆ ಈ ವಿಚಾರಗಳನ್ನು ತೆಗೆದುಕೊಂಡು ಹೋಗಲು ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ಹೇಳಿದರು.

‘ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಶಿಕ್ಷಕರ ವೇತನ ಕರ್ನಾಟಕದಲ್ಲಿ ಕಡಿಮೆ ಇದೆ. ತೆಲಂಗಾಣ ಹಾಗೂ ಕೇರಳದಲ್ಲಿ ಶಿಕ್ಷಕರ ಘನತೆಗೆ ತಕ್ಕಂತೆ ಸಂಬಳ ನೀಡಲಾಗುತ್ತಿದೆ. ಈ ಎರಡು ರಾಜ್ಯಗಳಿಗಿಂತ ಕರ್ನಾಟಕದ ಆದಾಯ ಹೆಚ್ಚು. ಆದರೂ ಶಿಕ್ಷಕರಿಗೆ ಸರಿಯಾದ ವೇತನ ನೀಡಲು ಯಾವ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ. ಸರ್ಕಾರಿ ಶಾಲೆಗಳು ಕಳೆಗುಂದಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಎದುರು ಪೈಪೋಟಿ ನೀಡದ ನಿತ್ರಾಣ ಸ್ಥಿತಿಗೆ ತಲುಪಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷೇತರ ಅಭ್ಯರ್ಥಿ ಬೆಂಬಲಿಗರಾದ ಇಕ್ಬಾಲ್‌ ಬಾಷಾ, ಡಿ.ಎಸ್‌.ನಾಗರಾಜ್‌ ಇದ್ದರು.

Quote - ಒಂದು ಚಿಕ್ಕ ಉಡುಗೊರೆ ಪವಿತ್ರ ಮತ ಕಿತ್ತುಕೊಳ್ಳುತ್ತಿದೆ. ಆಮಿಷಕ್ಕೆ ಬಲಿಯಾಗದೇ ಮತ ನೀಡಿದರೆ ಅಡ್ಡದಾರಿ ತುಳಿದ ಅಭ್ಯರ್ಥಿಗಳು ಪಾಠ ಕಲಿಯುತ್ತಾರೆ. ಎನ್‌.ಈ.ನಟರಾಜ ಪಕ್ಷೇತರ ಅಭ್ಯರ್ಥಿ ಆಗ್ನೇಯ ಶಿಕ್ಷಕರ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT