ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡದ ವಾತಾವರಣ; ಬೆಳೆಗಳಿಗೆ ಕೀಟಬಾಧೆ

Last Updated 5 ಡಿಸೆಂಬರ್ 2020, 3:34 IST
ಅಕ್ಷರ ಗಾತ್ರ

ಹೊಸದುರ್ಗ: ಸುಮಾರು ವಾರದಿಂದ ಮೋಡಕವಿದ ವಾತಾವರಣ ಇರುವುದರಿಂದ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನ ಬೆಳೆಗಳಿಗೆ ರೋಗ ಹಾಗೂ ಕೀಟಬಾಧೆ ಕಾಣಿಸಿದ್ದು, ಅನ್ನದಾತರು ಚಿಂತೆಗೀಡಾಗಿದ್ದಾರೆ.

ಸರಣಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆ ಬರುವಷ್ಟು ಮೋಡಕವಿದಿರುತ್ತದೆ. ಹಲವೆಡೆ ತುಂತುರು ಮಳೆಯಾಗಿದೆ. ಆಗಾಗ ಶೀತಗಾಳಿಯೂ ಬೀಸುತ್ತಿದ್ದು, ಕೆಲವೆಡೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಇದರಿಂದ ಹಿಂಗಾರು ಹಂಗಾಮಿನ ಕಡಲೆಕಾಳು, ಅಕ್ಕಡಿ ಬೆಳೆಗಳಾದ ಅವರೆ, ತೊಗರಿ ಹಾಗೂ ತರಕಾರಿ, ಹೂವು ಬೆಳೆಗಳಿಗೆ ಶಿಲೀಂದ್ರ ರೋಗಬಾಧೆ ಹಾಗೂ ಹುಳುಕಾಟ ಹೆಚ್ಚಾಗಿದೆ.

ವಾಯುಭಾರ ಕುಸಿತಕ್ಕಿಂತ ಮೊದಲು ಐದಾರು ದಿನ ಮಾಗಿ ಚಳಿ ಬಿರುಸುಗೊಂಡಿತ್ತು. ಅವರೆ, ತೊಗರಿ, ಹುರುಳಿ, ಕಡಲೆ ಬೆಳೆಗಳಲ್ಲಿ ಹೂವು ಅರಳಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಜಮೀನಿನಲ್ಲಿ ತೇವಾಂಶವಿತ್ತು. ಇದರಿಂದ ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ಈ ಬಾರಿ ಉತ್ತಮ ಇಳುವರಿ ಬರಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಈಗ ಕೆಲವೆಡೆ ಬೆಳೆಗಳಿಗೆ ಬೂದುರೋಗ, ಕಾಯಿಕೊರಕ ಕೀಟಬಾಧೆ ಕಾಣಿಸಿಕೊಂಡಿರುವುದರಿಂದ ಇಳುವರಿ ಕುಸಿತವಾಗುವ ಆತಂಕ ರೈತರಿಗೆ ಎದುರಾಗಿದೆ.

‘ಅವರೆ, ತೊಗರಿ ಕಾಯಿಕಟ್ಟಲು ಚಳಿಗಾಲ ಸೂಕ್ತವಾಗಿದ್ದು, ಹೂವು ಬಂದ ನಂತರ ಶುಭ್ರ ವಾತಾವರಣ ಇರಬೇಕು. ಆಗ ಮಾತ್ರ ಬಳ್ಳಿಗಳಲ್ಲಿ ಉದ್ದನೆಯ ಹೂವಿನ ಗೊನೆಗಳಾಗುತ್ತವೆ. ಹೂವು ಬಿಟ್ಟ ನಂತರ ವಾರಗಟ್ಟಲೇ ಮೋಡಕವಿದ್ದರೆ, ತುಂತುರು ಮಳೆ ಬಂದರೆ ಹೂ ಬೀಳುತ್ತವೆ.
ಇದರಿಂದ ಬೆಳೆಯ ಬೆಳವಣಿಗೆ ಕುಂಟಿತವಾಗುತ್ತದೆ. ಹೂವು ಉದುರುವುದರಿಂದ ಅಕ್ಕಡಿ ಬೆಳೆಗಳಿಗೆ ಹಾನಿಯಾಗುತ್ತದೆ’ ಎನ್ನುತ್ತಾರೆ ರೈತ ಹನುಮಂತಪ್ಪ.

‘ಹಲವೆಡೆ ಅವರೆ, ತೊಗರಿ, ಹುರುಳಿ, ಕಡಲೆ, ಔಡಲು ಬೆಳೆಗಳಲ್ಲಿ ಉದ್ದನೆಯ ಹೂವಿನ ಗೊನೆಗಳು ಹೊಡೆಬಿಚ್ಚಿವೆ. ಈ ಬೆಳೆಗಳ ಆದಾಯ ನಿರೀಕ್ಷೆಯಲ್ಲಿರುವ ರೈತರು ಕಾಯಿಕೊರಕ ಕೀಟ ಹಾಗೂ ರೋಗಬಾಧೆ ನಿಯಂತ್ರಣಕ್ಕೆ ಕಾರ್ಬನ್‌ ಡೈಜಮ್‌, ಅಸಿಫೇಟ್‌, ಮೈಕ್ರೋಅಮಿನೋ, ಪ್ರೊಫೆನೋಫಾಸ್‌, ಎಮೆಮೆಕ್ಟಿನ್‌ ಬೆಂಜೋಯೇಟ್‌ ಔಷಧಗಳನ್ನು ಸಿಂಪಡಿಸುತ್ತಿದ್ದಾರೆ. ರೈತರು ಇಲಾಖೆ ಅಧಿಕಾರಿಗಳ ಸಲಹೆ ಪಡೆದು, ರೋಗ ಹಾಗೂ ಕೀಟ ಲಕ್ಷಣ ಗಮನಿಸಿ ಔಷಧ ಸಿಂಪಡಿಸಬೇಕು’ ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಬಿ.ಎನ್‌.ವೆಂಕಟೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT