ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು, ಶ್ರೀಗಂಧಗಳ ಮಧ್ಯೆ ಮಾರಿಗೋಲ್ಡ್ ಚೆಲುವು

ಕೋಡಿಹಳ್ಳಿಯ ಯುವ ರೈತ ರವಿಚಂದ್ರ ಯಶೋಗಾಥೆ
Last Updated 19 ಆಗಸ್ಟ್ 2021, 3:15 IST
ಅಕ್ಷರ ಗಾತ್ರ

ಶ್ರೀರಾಂಪುರ: ‘ಕೃಷಿಯಲ್ಲಿ ಏರುಪೇರುಗಳು ಸಹಜ. ಆದರೂ ಪ್ರಯತ್ನ ಬಿಡಬಾರದು. ಯೋಜನಾಬದ್ಧವಾಗಿ ತೊಡಗಿಕೊಂಡಲ್ಲಿ ಮಾತ್ರ ಕೃಷಿ ಲಾಭದಾಯಕವಾಗಲಿದೆ’

–ಇದು ಹೋಬಳಿಯ ಕೋಡಿಹಳ್ಳಿ ಗ್ರಾಮದ ಯುವ ರೈತ ರವಿಚಂದ್ರ ಅವರ ಅನುಭವ.

ಸದಾ ಕ್ರಿಯಾಶೀಲರಾಗಿರುವ ರವಿಚಂದ್ರ ಅವರು ಇರುವ ಎರಡು ಎಕರೆ ಜಮೀನಿನಲ್ಲಿ ತೆಂಗು, ಶ್ರೀಗಂಧದ ಮಧ್ಯೆ 4 ಅಡಿ ಅಂತರದಲ್ಲಿ ಸಾಲು ಮಾಡಿ ಮಾರಿಗೋಲ್ಡ್ ಬೆಳೆದಿದ್ದಾರೆ. 3 ತಿಂಗಳವರೆಗೂ ಸಸಿಗಳನ್ನು ಪೋಷಣೆ ಮಾಡಿ ಈಗಾಗಲೇ ಒಂದು ಬಾರಿ ಹೂಗಳನ್ನು ಕಟಾವು ಮಾಡಿದ್ದಾರೆ. ಪ್ರತಿ 10 ದಿನಗಳಿಗೊಮ್ಮೆ ಇನ್ನೂ 2 ತಿಂಗಳವರೆಗೆ ಹೂಗಳನ್ನು ಬಿಡಿಸಿ ಮಾರಾಟ ಮಾಡಬಹುದು.

‘ಬೆಲೆ ಈಗ ಕಡಿಮೆ ಇದ್ದರೂ ಶ್ರಾವಣ ಮಾಸಕ್ಕೆ ಹೂವಿನ ದರ ಒಂದು ಕೆ.ಜಿ.ಗೆ ₹100 ರಿಂದ ₹150ರವರೆಗೆ ಇರುತ್ತದೆ. ಆಗ ನಮಗೆ ಉತ್ತಮ ಲಾಭ ಸಿಗುತ್ತದೆ. ನಿರಂತರವಾಗಿ ಮಳೆ ಬಂದಲ್ಲಿ ಹೂವಿನ ಸಸಿಗಳಿಗೆ ರೋಗ ಬರುತ್ತದೆ. ಆಗ 3-4 ದಿನಗಳಿಗೊಮ್ಮೆ ಔಷಧ ಸಿಂಪಡಿಸಬೆಕು’ ಎಂದು ಸಲಹೆ ನೀಡುತ್ತಾರೆ.

90 ತೆಂಗಿನ ಮರಗಳು, 650 ಶ್ರೀಗಂಧದ ಸಸಿಗಳ ಮಧ್ಯೆ ಸುಮಾರು 10,000 ಮಾರಿಗೋಲ್ಡ್ ಬೆಳೆದಿದ್ದು, ಗಂಧದ ಗಿಡಕ್ಕೆ ಪ್ರೋತ್ಸಾಹದಾಯಕವಾಗಿ ಅದರ ಬುಡಗಳಲ್ಲಿ ಒಂದೊಂದು ತೊಗರಿ ಹಾಕಲಾಗಿದೆ. ಕುರಿ ಸಾಕಿರುವುದರಿಂದ ಕುರಿಗಳ ಆಹಾರಕ್ಕಾಗಿ ಮಧ್ಯದಲ್ಲಿ ಸೊಗಸೆ ಸಸಿಗಳನ್ನು
ಬೆಳೆಸಲಾಗಿದೆ.

‘ಈ ಹಿಂದೆ ಅಡಿಕೆ ಹಾಕಿದ್ದೆ. ಆದರೆ ಸತತ ಬರಗಾಲದಿಂದ ಕೊಳವೆಬಾವಿಯಲ್ಲಿ ನೀರು ಬರಲಿಲ್ಲ. ಇದರಿಂದಾಗಿ ಅಡಿಕೆ ಸಂಪೂರ್ಣ ಒಣಗಿ ಹೋಯಿತು. ರೈತರು ಕೈಚೆಲ್ಲಿ ಕುಳಿತರೆ ಏನೂ ಆಗುವುದಿಲ್ಲ. ಕಡಿಮೆ ಜಮೀನಿನಲ್ಲೇ ಉತ್ತಮವಾಗಿ ನೀರು ಬರುವ ಕೊಳವೆ ಬಾವಿ ಇದ್ದರೆ ಸಾಕು. ಕೃಷಿಯಲ್ಲಿ ತೊಡಗಿಕೊಂಡರೆ ಭೂಮಿತಾಯಿ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ’ ಎನ್ನುತ್ತಾರೆ ಯುವ ರೈತ ರವಿಚಂದ್ರ.

ಹೈನುಗಾರಿಕೆ, ಕುರಿ ಸಾಕಣೆಯಲ್ಲೂ ಯಶಸ್ಸು

‘ಕೃಷಿಯ ಜೊತೆಗೆ ತೋಟದಲ್ಲೇ 3 ಹಸುಗಳು, 3 ಕರುಗಳನ್ನು ಸಾಕಿದ್ದಾರೆ. 2 ಹಸುಗಳಿಂದ 20 ಲೀಟರ್ ಹಾಲು ಮಾರಾಟ ಮಾಡಲಾಗುತ್ತದೆ. 4 ತಿಂಗಳ ಹಿಂದೆ ₹ 1 ಲಕ್ಷ ಬಂಡವಾಳ ಹಾಕಿ 15 ನಾಟಿ ಕುರಿ ಹಾಗೂ 10 ಬನ್ನೂರು ಕುರಿ ಮರಿಗಳನ್ನು ತಂದು ಸಾಕುತ್ತಿದ್ದಾರೆ. ಈಗಾಗಲೇ ಇವುಗಳು ಬೆಳೆದು ನಿಂತಿದ್ದು, ಇನ್ನು ಒಂದೆರಡು ತಿಂಗಳಲ್ಲಿ ಮಾರಾಟಕ್ಕೆ ಬರುತ್ತವೆ. ಒಂದು ಕುರಿ ಕಡಿಮೆ ಅಂದರೂ ₹ 8 ಸಾವಿರದಿಂದ ₹ 10 ಸಾವಿರಗಳವರೆಗೆ ಮಾರಾಟವಾಗುತ್ತವೆ’ ಎನ್ನುತ್ತಾರೆ ರವಿಚಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT