ಹೊಳಲ್ಕೆರೆ: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.
ಕಾಲೇಜಿನಲ್ಲಿ ಶನಿವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೆಡ್‌ಕ್ರಾಸ್, ರೇಂಜರ್ಸ್ ಹಾಗೂ ರೋವರ್ಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘2008ರಲ್ಲಿ ನಾನು ಇಲ್ಲಿಗೆ ಶಾಸಕನಾಗಿ ಬಂದಾಗ ತಾಲ್ಲೂಕು ಕೇಂದ್ರವಾದರೂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇರಲಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಮುಖ ರಸ್ತೆಯ ಪಕ್ಕದಲ್ಲೇ ಬೃಹತ್ ಕಾಲೇಜು ಕಟ್ಟಡ ನಿರ್ಮಿಸಿದೆ. ಈಗ ಕಾಲೇಜಿನಲ್ಲಿ 800 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿರುವುದು ಸಂತಸ ತಂದಿದೆ. ವಿದ್ಯಾರ್ಥಿನಿಯರು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾರೆ. ಈಚೆಗೆ ನಡೆದ ಐಎಎಸ್ ಪರೀಕ್ಷೆಯಲ್ಲಿ ಶೇ 68ರಷ್ಟು ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.
‘ಇಲ್ಲಿನ ಆವರಣದಲ್ಲಿ ಎಲ್‌ಕೆಜಿಯಿಂದ ಪದವಿಯವರೆಗೆ ಶಿಕ್ಷಣ ನೀಡಲಾಗುತ್ತಿದ್ದು, 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ನನ್ನ ಅನುದಾನದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೂ ಬಸ್ ಸೌಲಭ್ಯ ಒದಗಿಸಿದ್ದೇನೆ. ಕಾಲೇಜು ಪಕ್ಕದಲ್ಲಿ ಒಳಾಂಗಣ ಕ್ರೀಡಾಂಗಣ, ಹೊರಾಂಗಣ ಕ್ರೀಡಾಂಗಣ, ಮತ್ತೊಂದು ಭಾಗದಲ್ಲಿ ಈಜುಕೊಳ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯ ಒದಗಿಸಿದ್ದು, ಈ ಬಾರಿಯ ಪರೀಕ್ಷೆಯಲ್ಲಿ ಕನಿಷ್ಠ ನಾಲ್ಕು ರ‍್ಯಾಂಕ್ ಗಳಿಸಬೇಕು’ ಎಂದು ಸಲಹೆ ನೀಡಿದರು.
‘ಕಾಲೇಜಿಗೆ ಈ ಬಾರಿ ಬಿ++ ಮಾನ್ಯತೆ ದೊರೆತಿದ್ದು, ಎ ಗ್ರೇಡ್ ಪಡೆಯುವತ್ತ ಗುರಿ ಹೊಂದಿದ್ದೇವೆ. ಕಾಲೇಜಿಗೆ ಅಗತ್ಯ ಇರುವ ಶೌಚಾಲಯ, ಹೆಚ್ಚುವರಿ ಕೊಠಡಿಗಳು, ಕ್ಯಾಂಟೀನ್, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಡಿ.ಆರ್. ಹನುಮಂತರಾಯ ಮನವಿ ಮಾಡಿದರು.
ಶೇ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪುರಸಭೆ ಸದಸ್ಯ ಆರ್.ಎ.ಅಶೋಕ್, ಬಸವರಾಜ ಯಾದವ್, ಮರುಳಸಿದ್ದಪ್ಪ, ಡಾ.ಎಚ್.ಎಲ್. ಪ್ರವೀಣ್ ಕುಮಾರ್, ಡಾ.ಎಲ್. ರಮೇಶ್, ಇ. ದೇವರಾಜು, ಡಾ.ರಾಜಕುಮಾರ್, ಕರಿಸಿದ್ದಯ್ಯ ಒಡೆಯರ್, ಡಾ.ಗಿರೀಶ್ ನಾಯಕ, ಡಾ.ಚೇತನ್, ಡಾ.ವಿಜಯ ಕುಮಾರ್, ಉಪನ್ಯಾಸಕರು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.