ಸೋಮವಾರ, ಜುಲೈ 26, 2021
26 °C
ಅನುಭವ ಹಂಚಿಕೊಂಡ ಕೋವಿಡ್ ಆಸ್ಪತ್ರೆಯ ವೈದ್ಯ ಡಾ.ಸತೀಶ್

ಚಿತ್ರದುರ್ಗ | ವೈದ್ಯರ ಶ್ರಮಕ್ಕೆ ಸಂದ ಜಯ

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಾದ 14 ಜನ ಸೋಂಕಿನಿಂದ ಮುಕ್ತರಾಗಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ನೀಡಿ ಅವರೆಲ್ಲರನ್ನೂ ಗುಣಪಡಿಸಿದ್ದೇವೆ. ಎಲ್ಲರೂ ಮನೆಗೆ ಮರಳಿದ್ದಾರೆ. ಇದು ವೈದ್ಯಕೀಯ ಸಿಬ್ಬಂದಿ ತಂಡಕ್ಕೆ ಸಂದ ಜಯವಾಗಿದೆ...’

‘ಕೋವಿಡ್-19’ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋಟೆನಾಡಿನ ‘ಕೊರೊನಾ ವಾರಿಯರ್’ ಜಿಲ್ಲಾ ಆಸ್ಪತ್ರೆಯ ಫಿಜಿಷಿಯನ್ ಡಾ. ಸತೀಶ್‌ ಅವರ ಮಾತಿದು. ಸೋಂಕಿತರನ್ನು ಗುಣಪಡಿಸಲು ಕೈಗೊಂಡ ಕ್ರಮಗಳ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಕೊರೊನಾ ಸೋಂಕಿತರನ್ನು ಗುಣಪಡಿಸಲು ಆಸಕ್ತಿ ತೋರಿದ ಮೊದಲ ತಂಡದಲ್ಲಿ ನಾನೂ ಒಬ್ಬ. ಜಿಲ್ಲಾ ಆಸ್ಪತ್ರೆಯಲ್ಲಿನ ನನ್ನ ಕರ್ತವ್ಯ ಪರಿಗಣಿಸಿ ಆರೋಗ್ಯ ಇಲಾಖೆ ನನ್ನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ

ನಿಯೋಜಿಸಿತು. ಗುಜರಾತಿನ ಅಹಮದಾಬಾದಿನಿಂದ ಬಂದ ತಬ್ಲಿಗಿ‌ ಜಮಾತ್‌ ಸದಸ್ಯರಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದಾಗ ನನಗೂ ಭೀತಿ ಇತ್ತು. ವೈದ್ಯ ವೃತ್ತಿಯಲ್ಲಿರುವ ಕಾರಣ ಚಿಕಿತ್ಸೆ ನೀಡಲು ಹಿಂಜರಿಯದೇ ಧೈರ್ಯ ತಂದುಕೊಂಡು ಚಿಕಿತ್ಸೆ ನೀಡಲು ಮುಂದಾದೆ’ ಎಂದು ತಿಳಿಸಿದರು.

‘ನಮ್ಮ ತಂಡದಲ್ಲಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ತಿಮ್ಮೇಗೌಡ, ಶಸ್ತ್ರಚಿಕಿತ್ಸಕ ಡಾ. ಸಾಲಿಮಂಜಪ್ಪ, ಅರವಳಿಕೆ ತಜ್ಞೆ ಡಾ. ಕಮಲಾ, ಮೂವರು ಸ್ಟಾಫ್‌ ನರ್ಸ್, ಇಬ್ಬರು ಕ್ಷ-ಕಿರಣ ತಜ್ಞರು, ಲ್ಯಾಬ್‌ ಟೆಕ್ನಿಷಿಯನ್ ಮುರುಳಿ, ನಾಲ್ವರು ಗ್ರೂಪ್‌ ‘ಡಿ’ ನೌಕರರು ಇದ್ದರು. ಪಾಳಿ ಪದ್ಧತಿಯಲ್ಲಿ ನಿತ್ಯ ಎಲ್ಲರೂ ಕರ್ತವ್ಯ ನಿರ್ವಹಿಸಿದ್ದಾರೆ. ಆತಂಕದ ನಡುವೆಯೂ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿದ ಪರಿಣಾಮ ದಾಖಲಾದ ಎಲ್ಲರೂ ಗುಣಮುಖರಾಗಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಸೋಂಕಿನಿಂದ ಚಿಕಿತ್ಸೆಗೆ ದಾಖಲಾದ ಕೆಲವರಲ್ಲಿ ತುಂಬಾ ಆತಂಕ ಇತ್ತು. ನಾವೆಲ್ಲರೂ ಧೈರ್ಯ ತುಂಬಿದ ನಂತರ ಭೀತಿಯಿಂದ ಹೊರಬಂದರು. ಮೊದಲು ದಾಖಲಾದ ಆರು ಜನರೊಂದಿಗೆ ತಂದೆ ಹಾಗೂ ಮೂರು ವರ್ಷದ ಮಗು ಇತ್ತು. ಅವರಿಬ್ಬರನ್ನು ಪ್ರತ್ಯೇಕವಾಗಿ ಇರಿಸಲಾಯಿತು. ಮಗು ಸೇರಿ ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಸೋಂಕಿತರು, ಚಿಕಿತ್ಸೆ ನೀಡುತ್ತಿದ್ದ ತಂಡದಲ್ಲಿದ್ದ ಆತ್ಮವಿಶ್ವಾಸಕ್ಕೆ ಉತ್ತಮ ಫಲ ಸಿಕ್ಕಿದೆ’ ಎಂದು ವಿವರಿಸಿದರು.

‘ಚಿಕಿತ್ಸೆ ನೀಡಲು ನಾವಿದ್ದರೂ 12 ದಿನ ಒಬ್ಬರೇ ಆಸ್ಪತ್ರೆಯಲ್ಲಿ ಇರುವುದು ಸುಲಭದ ಮಾತಲ್ಲ. ನಿತ್ಯ ಎಲ್ಲರಿಗೂ ಜ್ವರ, ರಕ್ತದೊತ್ತಡ ಪರೀಕ್ಷೆ ಎರಡು ಬಾರಿ ಮಾಡಲಾಗುತ್ತಿತ್ತು. ಆರೈಕೆಯ ಜತೆ ಪ್ರೀತಿ, ವಿಶ್ವಾಸದಿಂದ ಮಾತನಾಡಿಸಿ ಹಂತ ಹಂತವಾಗಿ ಭಯದ ವಾತಾವರಣ ದೂರ ಮಾಡಿದೆವು. ವೈದ್ಯ ವೃತ್ತಿಯಲ್ಲಿರುವವರ ಮೇಲೂ ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಹೆಚ್ಚಾಗಿದೆ’ ಎಂದು ಹೇಳಿದರು.

‘ಮೊದಲ ತಂಡದ ನಂತರ ಜಿಲ್ಲಾ ಆಸ್ಪತ್ರೆಯ ಎರಡು, ಮೂರನೇ ತಂಡವೂ ಚಿಕಿತ್ಸೆ ಮುಂದುವರೆಸಿತು. ದಾಖಲಾದ ಒಟ್ಟು 14 ಜನರೂ ಗುಣಮುಖರಾಗಿದ್ದು, ಯುದ್ಧೋಪಾದಿಯಲ್ಲಿ ಪ್ರತಿಯೊಬ್ಬರು ಶ್ರಮಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಪಿಐ ಕಿಟ್‌; ಎಲ್ಲಿಲ್ಲದ ಕಿರಿಕಿರಿ
‘ಬೇಸಿಗೆ ಅವಧಿಯಲ್ಲಿ ಮಾಮೂಲಿ ಬಟ್ಟೆ ಧರಿಸಿದರೂ ಬೆವರುತ್ತೇವೆ. ಇನ್ನೂ ಸ್ವಯಂ ರಕ್ಷಣೆಗಾಗಿ ಪಿಪಿಐ ಕಿಟ್‌ ಧರಿಸಿದಾಗ ಎಲ್ಲಿಲ್ಲದ ಕಿರಿಕಿರಿ ಉಂಟಾಯಿತು. ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನವೂ ಹೆಚ್ಚಿತ್ತು. ಆಸ್ಪತ್ರೆ ಪ್ರವೇಶಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಇದನ್ನು ಧರಿಸಲೇಬೇಕಿತ್ತು’ ಎಂದು ಡಾ. ಸತೀಶ್ ಹೇಳಿದರು.

‘ಬೆಳಿಗ್ಗೆ ತಿಂಡಿ, ನೀರು ಸೇವಿಸಿದರೆ ರಾತ್ರಿ ಸ್ನಾನ ಮಾಡಿದ ನಂತರವೇ ಊಟ. ಪಿಪಿಇ ಕಿಟ್‌ ಅನ್ನು 6ರಿಂದ 8ಗಂಟೆ ಧರಿಸುತ್ತಿದ್ದರಿಂದ ವಿಪರೀತ ಬೆವರು ಹೊರಬರುತ್ತಿತ್ತು. ಕಿಟ್ ದರ ಹೆಚ್ಚಿರುವ ಕಾರಣ ಪದೇ ಪದೇ ಬಿಚ್ಚುವಂತಿರಲಿಲ್ಲ. ಮೂತ್ರ ವಿಸರ್ಜನೆಗೂ ಕಷ್ಟವಾಯಿತು. ಇವೆಲ್ಲವನ್ನೂ ವೈದ್ಯರು, ನರ್ಸ್‌ಗಳು, ಸಿಬ್ಬಂದಿ ಸಹಿಸಿಕೊಂಡೆ ಚಿಕಿತ್ಸೆ ನೀಡಿದ್ದೇವೆ’ ಎಂದು ಅವರು ಸಮಸ್ಯೆಯನ್ನು ಬಿಚ್ಚಿಟ್ಟರು.

‘ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಗುತ್ತಿಗೆ ಆಧಾರದ ನೇಮಕಾತಿಗೆ ಯಾವೊಬ್ಬ ವೈದ್ಯರೂ ಸೇವೆಗೆ ಮುಂದೆ ಬರಲಿಲ್ಲ. ಕೊನೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ನಿಯೋಜಿಸಲಾಯಿತು. ಒಂದು ವಾರದ ಚಿಕಿತ್ಸೆ ನೀಡಿದ ನಂತರ ನಮ್ಮ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದೇವೆ. ನೆಗೆಟಿವ್ ಬಂದಿದ್ದರಿಂದ 14 ದಿನ ಗೃಹ ಕ್ವಾರಂಟೈನ್‌ಗೂ ಒಳಗಾಗಿದ್ದೇವೆ’ ಎಂದು ಡಾ. ಸತೀಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು