ಗುರುವಾರ , ಅಕ್ಟೋಬರ್ 6, 2022
22 °C
ಎಂಬಿಎ ಕಲಿತರೂ ಸ್ವಯಂ ಉದ್ಯೋಗದತ್ತ ಒಲವು

ಹೊಸದುರ್ಗ: ಹೈನುಗಾರಿಕೆಯಲ್ಲಿ ಯಶ ಕಂಡ ಪದವೀಧರ ದಂಪತಿ

ಶ್ವೇತಾ ಜಿ. Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಪದವಿ ಮುಗಿದ ಬಳಿಕ ನಿತ್ಯ ಕೆಲಸಕ್ಕಾಗಿ ಅಲೆದಾಡುವ, ಕಲಿಕೆಗೆ ತಕ್ಕ ಉದ್ಯೋಗ ದೊರೆಯಲಿಲ್ಲ ಎಂದು ಕೊರಗುವವರ ನಡುವೆ ಸ್ವಯಂ ಉದ್ಯೋಗದೊಂದಿಗೆ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ತೋರಿಸಿಕೊಡುವ ಮೂಲಕ ತಾಲ್ಲೂಕಿನ ಕೆಲ್ಲೋಡು ಗ್ರಾಮದ ಮುಕೇಶ್ ಕುಮಾರ್‌ ಹಾಗೂ ಗೀತಾ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ.

ಎಂಬಿಎ ಪದವೀಧರರಾಗಿರುವ ಮುಖೇಶ್ ಹಸು ಸಾಕಣೆ ಮೂಲಕ ಯಶಸ್ಸು ಸಾಧಿಸಿದ್ದು, ವರ್ಷಕ್ಕೆ ₹ 12ಲಕ್ಷದಿಂದ ₹ 15 ಲಕ್ಷ ಲಾಭ ಪಡೆಯುತ್ತಿದ್ದಾರೆ. ತಾಯಿಯ ತವರೂರು ಬಾಗೂರಿನಲ್ಲಿರುವ ಹಸುಗಳು ಜೊತೆ ಒಡನಾಟ ಹೊಂದಿದ್ದ ಮುಕೇಶ್‌, ಹಸು ಸಾಕಣೆ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ, ತಮ್ಮ ತಂದೆ ತಾಯಿಯವರ ಆಶಯದಂತೆ ಪದವಿ ನಂತರ ದುಬೈನ ಯುನೈಟೆಡ್‌ ಅರಬ್ ಬ್ಯಾಂಕ್‌ನಲ್ಲಿ ವ್ಯಾಪಾರ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಈ ಕೆಲಸ ಮನಸ್ಸಿಗೆ ಹಿಡಿಸದ ಕಾರಣ ಕೃಷಿಯಲ್ಲಿ ಸಾಧನೆ ಮಾಡುವ ಹಂಬಲದಿಂದ ಕೆಲಸ ಬಿಟ್ಟು ಬಂದು 4 ಹಸು ಕೊಂಡು ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ ಆರಂಭಿಸಿದ್ದಾರೆ.

‘ಏಳು ವರ್ಷಗಳ ಕಾಲ ಬ್ಯಾಂಕ್‌ನಲ್ಲಿ ಕೆಲಸ ಮಾಡಿ ಕೂಡಿಟ್ಟ ಹಣದಲ್ಲಿ ಹೈನುಗಾರಿಕೆ ಆರಂಭಿಸಿದೆ. 2016ರಲ್ಲಿ ಕೆಲ್ಲೋಡಿನಲ್ಲಿ ಜಮೀನು ಖರೀದಿಸಿ 4 ಎಚ್.ಎಫ್ ತಳಿಯ ಹಸುಗಳನ್ನು ಖರೀದಿಸಿದ್ದೆ. ಪ್ರಸ್ತುತ ಎಚ್.ಎಫ್, ಜೆರ್ಸಿ, ಪುಂಗನೂರು ಮತ್ತು ದೇಶೀ ತಳಿಯ 36 ಹಸುಗಳಿದ್ದು, ದಿನಕ್ಕೆ 350 ಲೀಟರ್ ಹಾಲು ಕರೆಯುತ್ತೇವೆ. ತಿಂಗಳಿಗೆ ₹ 3.5 ಲಕ್ಷ ಆದಾಯ ಗಳಿಸುತ್ತಿದ್ದೇವೆ. ನವೆಂಬರ್
ಹಾಗೂ ಡಿಸೆಂಬರ್‌ನಲ್ಲಿ ಮೇವು ಚೆನ್ನಾಗಿ ಲಭ್ಯವಾಗುವ ಕಾರಣ 550 ಲೀ ಹಾಲು ಕರೆಯುತ್ತೇವೆ’ ಎಂದು ಅವರು
ಹೇಳಿದರು.

‘ರೈತರಿಂದ ಮೇವು ಖರೀದಿಸಿ ರಸಮೇವು ಘಟಕ ಆರಂಭಿಸಲಾಗಿದೆ. ಸುತ್ತಲಿನ ರೈತರಿಗೆ ಅವಶ್ಯವಿದ್ದಲ್ಲಿ ಮೇವು ನೀಡಲಾಗುತ್ತಿದೆ. ನಮ್ಮಲ್ಲಿರುವ ಹಸುಗಳನ್ನು ಕಟ್ಟಿ ಹಾಕಲ್ಲ. ಎಳೆದಾಡುವುದಿಲ್ಲ. ಮೇವು ಮತ್ತು ನೀರನ್ನು ಅವುಗಳ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲಾಗಿದೆ. ಒಂದು ಹಸು ಒಂದು ಬಾರಿಗೆ 27 ಲೀಟರ್ ಹಾಲು ಕೊಡುತ್ತದೆ. ಸದ್ಯ ಕೆಲ್ಲೋಡು ಡೈರಿಗೆ ಹಾಲು ಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮದೇ ಡೈರಿ ಆರಂಭಿಸುವ ಯೋಚನೆ ಇದೆ. ನಮ್ಮದೇ ಬ್ರ್ಯಾಂಡ್‌ ಇರುವ ಹಾಲಿನ ಪ್ಯಾಕೆಟ್‌ ತಯಾರಿಸಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ. ನಾಲ್ಕು ಜನರು ಕೆಲಸ ಮಾಡುತ್ತಾರೆ. ಯಂತ್ರಗಳ ಸಹಾಯವನ್ನೂ ಪಡೆದುಕೊಂಡಿದ್ದೇವೆ’ ಎನ್ನುತ್ತಾರೆ ಮುಕೇಶ್ ಅವರ ಪತ್ನಿ, ಎಂಬಿಎ ಪದವೀಧರೆ ಗೀತಾ.

***

ಹಣಕಾಸಿನ ತೊಂದರೆ ಇರುವವರು ಬ್ಯಾಂಕ್‌ನಲ್ಲಿ ಮುದ್ರಾ ಯೋಜನೆಯ ಸೌಲಭ್ಯ ಪಡೆದು ಹೈನುಗಾರಿಕೆ ಆರಂಭಿಸಬಹುದು. ಸರ್ಕಾರ ಹಾಲಿನ ದರ ಹೆಚ್ಚಿಸಿದರೆ ಹೈನೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ.
-ಮುಕೇಶ್ ಕುಮಾರ್

ಬೆಂಗಳೂರು, ಮೈಸೂರು, ನೆಲಮಂಗಲ, ಹೊಸದುರ್ಗದಲ್ಲಿ ನಡೆದ ಅಧಿಕ ಹಾಲು ಕರೆಯುವ ಹಸುಗಳ ಸ್ಪರ್ಧೆಯಲ್ಲೂ ಭಾಗವಹಿಸಿರುವ ನಮ್ಮ ಹಸುಗಳು ಪ್ರಶಸ್ತಿಗೆ ಪಾತ್ರವಾಗಿವೆ.
-ಗೀತಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು