ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಗೊಂದಲ ಮೂಡಿಸಿದ ಹೊಸ ಮಾರ್ಗಸೂಚಿ

ವಾರಾಂತ್ಯದ ಲಾಕ್‌ಡೌನ್‌ಗೆ ತಳಮಳ, ರಾತ್ರಿ ಕರ್ಫ್ಯೂ ಅನುಷ್ಠಾನ
Last Updated 21 ಏಪ್ರಿಲ್ 2021, 17:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ವಿಧಿಸಿ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಹಲವು ಗೊಂದಲ ಮೂಡಿಸಿದೆ. ವಾರಾಂತ್ಯ ಹಾಗೂ ಇತರ ದಿನಗಳಲ್ಲಿ ಯಾವ ಸೇವೆ ಲಭ್ಯವಾಗಲಿವೆ, ಯಾವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ.

ಇದರ ನಡುವೆಯೇ ಬುಧವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಂಡಿದೆ. ರಾತ್ರಿ 9ರಿಂದ ಬೆಳಿಗ್ಗೆ 6ರವರೆಗಿನ ಕರ್ಫ್ಯೂಗೆ ಇಡೀ ದಿನ ಪೊಲೀಸರು ಸಿದ್ಧತೆ ನಡೆಸಿದರು. ವಾಣಿಜ್ಯ ಮಳಿಗೆಗಳು ಸಂಜೆಯ ಹೊತ್ತಿಗೆ ಬಾಗಿಲು ಮುಚ್ಚಿದವು. 9ರ ಬಳಿಕ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಜಿಲ್ಲೆಯ ಹಲವೆಡೆ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಕೆರೆ ಗ್ರಾಮದ ಕಾಲಭೈರವೇಶ್ವರ ಜಾತಾ ಮಹೋತ್ಸವ ರದ್ದುಪಡಿಸಲಾಗಿದೆ. ಸಂತೆಗಳನ್ನು ವಿಶಾಲ ಮೈದಾನಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಲವು ದೇಗುಲಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಂದಿನಂತೆ ಪೂಜಾ ಕೈಂಕರ್ಯಗಳು ಮಾತ್ರ ನಡೆಯುತ್ತಿವೆ.

ಸರ್ಕಾರದ ಹೊಸ ಮಾರ್ಗಸೂಚಿಯ ಅನ್ವಯ ಚಿತ್ರಮಂದಿರಗಳು ಬಾಗಿಲು ಹಾಕಿವೆ. ಶಾಪಿಂಗ್‌ ಮಾಲ್‌ಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೆಚ್ಚು ಜನರು ಸೇರುವ ವಾಣಿಜ್ಯ ಕಟ್ಟಡಗಳಿಗೆ ಭೇಟಿ ನೀಡಿದ ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್‌ ಧರಿಸುವಂತೆ, ಅಂತರ ಕಾಪಾಡಿಕೊಳ್ಳುವಂತೆ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದರು.

ಚಿತ್ರದುರ್ಗ ನಗರಸಭೆಯ ಅಧಿಕಾರಿಗಳು ಬುಧವಾರ ಬೆಳಿಗ್ಗೆಯೇ ಬೀದಿಗೆ ಇಳಿದು ಮಾರ್ಗಸೂಚಿ ಪಾಲಿಸುವಂತೆ ಅಂಗಡಿಯ ಮಾಲೀಕರಿಗೆ ತಾಕೀತು ಮಾಡಿದರು. ಬಿ.ಡಿ.ರಸ್ತೆಯ ಜಿಲ್ಲಾ ಆಸ್ಪತ್ರೆಯ ಸಮೀಪದ ಹೋಟೆಲ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಿಗೆ ಭೇಟಿ ನೀಡಿ ಬಾಗಿಲು ಹಾಕಿಸಿದ್ದಾರೆ. ಹೋಟೆಲ್‌ನಲ್ಲಿ ಸೇವೆ ಒದಗಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಹೋಟೆಲ್‌ ಮಾಲೀಕರು ಹಾಗೂ ಸಿಬ್ಬಂದಿಯ ನಡುವೆ ವಾಗ್ವಾದವೂ ನಡೆದಿದೆ.

ಯಾವುದಕ್ಕೆ ಎಷ್ಟು ನಿರ್ಬಂಧ, ಯಾವ ಸೇವೆಗೆ ಅವಕಾಶವಿದೆ ಎಂಬುದರ ಬಗ್ಗೆ ನಗರಸಭೆಯ ಅಧಿಕಾರಿಗಳಿಗೂ ಸ್ಪಷ್ಟತೆ ಇಲ್ಲ. ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್‌ಡೌನ್ ಬಗ್ಗೆಯೂ ಜನರಲ್ಲಿ ಹಲವು ಗೊಂದಲಗಳಿವೆ. ಈ ವಿಚಾರದಲ್ಲಿ ಜಿಲ್ಲಾಡಳಿತದಿಂದ ಇನ್ನೂ ಸ್ಪಷ್ಟ ನಿರ್ದೇಶನ ಹೊರಬಿದ್ದಿಲ್ಲ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರ ಮಿತಿಯನ್ನು 50ಕ್ಕೆ ಇಳಿಕೆ ಮಾಡಿರುವುದು ತಳಮಳ ಸೃಷ್ಟಿಸಿದೆ.

ಮಾಸ್ಕ್‌ ಧರಿಸದೇ ಸಂಚರಿಸುತ್ತಿದ್ದ 240 ಜನರಿಗೆ ನಗರಸಭೆ ದಂಡ ವಿಧಿಸಿದ್ದು, ₹ 24 ಸಾವಿರ ವಸೂಲಿ ಮಾಡಿದೆ. ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ. ಮಾಸ್ಕ್ ಧರಿಸದವರಿಗೆ ₹ 100 ಹಾಗೂ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ಚಟುವಟಿಕೆಯಲ್ಲಿ ತೊಡಗುವ ವ್ಯಾಪಾರಸ್ಥರಿಗೆ ₹ 500 ದಂಡ ವಿಧಿಸಲಾಗುತ್ತಿದೆ.

107 ಜನರಿಗೆ ಕೋವಿಡ್

ಜಿಲ್ಲೆಯಲ್ಲಿ ಬುಧವಾರ107 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 16,140 ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 32, ಚಳ್ಳಕೆರೆ 9, ಹಿರಿಯೂರು 20, ಹೊಳಲ್ಕೆರೆ 11, ಹೊಸದುರ್ಗ 15, ಮೊಳಕಾಲ್ಮುರು ತಾಲ್ಲೂಕಿನಲ್ಲಿ 7 ಹಾಗೂ ಹೊರ ಜಿಲ್ಲೆಯ 13 ಪ್ರಕರಣಗಳು ಪತ್ತೆಯಾಗಿವೆ. ಬುಧವಾರ ಒಟ್ಟು 2,561 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು.

ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಬುಧವಾರ 18 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 15,462 ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. 70 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ತಿಳಿಸಿದ್ದಾರೆ.

ಮಾರುಕಟ್ಟೆ ಆಗಲಿರುವ ಮೈದಾನ

ಜನಜಂಗುಳಿ ಇರುವ ತರಕಾರಿ ಮಾರುಕಟ್ಟೆಯನ್ನು ಮೈದಾನಗಳಿಗೆ ಸ್ಥಳಾಂತರಿಸುವ ಸಿದ್ಧತೆ ನಡೆಯುತ್ತಿದೆ. ಎರಡು ದಿನಗಳಲ್ಲಿ ತರಕಾರಿ ಮಾರುಕಟ್ಟೆ ಸಂಪೂರ್ಣವಾಗಿ ಸ್ಥಳಾಂತರವಾಗುವ ಸಾಧ್ಯತೆ ಇದೆ.

ವಿಜ್ಞಾನ ಕಾಲೇಜು ಆವರಣದಲ್ಲಿರುವ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ 200 ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ. ನಿತ್ಯ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ತರಕಾರಿ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಬಸ್‌ ನಿಲ್ದಾಣ ಸಮೀಪದ ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.

ಸಂತೆಹೊಂಡ ಸಮೀಪದ ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳನ್ನು ಎಪಿಎಂಸಿ ಬಳಿ ಹಳೆಯ ಮಾರುಕಟ್ಟೆಗೆ ಸ್ಥಳಾಂತರಿಸಲಾಗುತ್ತಿದೆ. ಇಲ್ಲಿ 30 ರಿಂದ 40 ಸ್ಟಾಲ್‌ ಹಾಕಿಕೊಳ್ಳಲು ಅವಕಾಶವಿದೆ. ಬೀದಿ ಸುತ್ತಿ ತರಕಾರಿ ಮಾರಾಟ ಮಾಡುವ ತಳ್ಳುವ ಗಾಡಿಯವರು ಕೂಡ ಇದೇ ಮಾರುಕಟ್ಟೆಯಲ್ಲಿ ಖರೀದಿಸುವಂತೆ ಸೂಚನೆ ನೀಡಲಾಗಿದೆ.

‘ತ್ಯಾಗರಾಜ ಬೀದಿಯ ಮಾರುಕಟ್ಟೆಯ ವ್ಯಾಪಾರಿಗಳಿಗೆ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಅವಕಾಶ ಕಲ್ಪಿಸಲು ನಗರಸಭೆ ನಿರ್ಧರಿಸಿದೆ. ಜಿಲ್ಲಾ ಕ್ರೀಡಾಂಗಣ ಮುಂಭಾಗ, ಜೆಸಿಆರ್‌ ಬಡಾವಣೆಯ ಮಾರುಕಟ್ಟೆ ಸ್ಥಳ ಬದಲಾವಣೆ ಇಲ್ಲ’ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT