ಮಂಗಳವಾರ, ಮೇ 18, 2021
29 °C
ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು

ಲಸಿಕೆ ಖಾಲಿ: ಕೋವಿಡ್ ಹೆಚ್ಚುತ್ತಿದ್ದಂತೆ ಲಸಿಕೆಗಾಗಿ ಆಸ್ಪತ್ರೆಗಳಲ್ಲಿ ಜನಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗಳತ್ತ ಜನ ಮುಖ ಮಾಡಿದ್ದು, ವಿವಿಧೆಡೆ ಜನಜಂಗುಳಿ ನಿರ್ಮಾಣವಾಗುತ್ತಿದೆ. ಲಸಿಕೆ ಬಂದ ಒಂದೆರಡು ದಿನದೊಳಗೆ ಖಾಲಿಯಾಗುತ್ತಿದೆ. ಪ್ರಸ್ತುತ ಲಸಿಕೆ ಖಾಲಿಯಾಗಿ ಎರಡು ದಿನವಾಗಿದೆ. ಇದರಿಂದಾಗಿ ಅನೇಕರು ನಿರಾಸೆಯಿಂದ ಮನೆಗೆ ಮರಳುವಂತಾಗಿದೆ.

ವಾರಿಯರ್‌ಗಳ ನಂತರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಸಾರ್ವಜನಿಕವಾಗಿ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಆದರೆ, ಆರಂಭದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದ್ದ ವದಂತಿ ಕಾರಣಕ್ಕೆ ಲಸಿಕೆ ಹಾಕಿಸಿಕೊಳ್ಳಲು ಅನೇಕರು ಹಿಂದೇಟು ಹಾಕಿದರು. ಅದರ ಮಹತ್ವ ಅರಿವಾದ ನಂತರ ಉತ್ತಮ ಬೆಂಬಲ ದೊರೆಯುತ್ತಿದ್ದು, ಬೇಡಿಕೆಯೂ ಹೆಚ್ಚಾಗುತ್ತಿದೆ.

ಕೋವಿಡ್‌ ಅನ್ನು ಸಮರ್ಥವಾಗಿ ಎದುರಿಸಲು ಲಸಿಕೆ ಹಾಕಿಸಿಕೊಳ್ಳಿ ಎಂಬುದಾಗಿ ಮಾರ್ಚ್‌ನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಾಗೃತಿ ಮೂಡಿಸುವುದರ ಜತೆಗೆ ಮನವಿ ಮಾಡಿದ್ದರು. ಆದರೆ, ಈ ಅವಧಿಯಲ್ಲಿ ಹಾಕಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ ಇತ್ತು. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಹತ್ತಿರದಲ್ಲೇ ನಗರ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಬಹುತೇಕರು ಹಿಂದೇಟು ಹಾಕಿದ್ದರು.

ಏಪ್ರಿಲ್ ಮೊದಲ ವಾರದವರೆಗೂ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ನಿತ್ಯ ಎರಡಂಕಿಗೆ ಇಳಿದಿತ್ತು. ಬೆರಳೆಣಿಕೆಯಷ್ಟು, ಹೆಚ್ಚು ಎಂದರೆ 20 ಪ್ರಕರಣ ಕೂಡ ದಾಟುತ್ತಿರಲಿಲ್ಲ. ಎರಡನೇ ವಾರದ ನಂತರ ಕೋವಿಡ್‌ ಶರವೇಗದಲ್ಲಿ ಹರಡುತ್ತಿದ್ದು, ಎಚ್ಚೆತ್ತ ಹಲವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈಗ ಲಸಿಕೆ ಬೇಕೆಂದರು ಸಿಗುತ್ತಿಲ್ಲ. ಒಂದು ವೇಳೆ ಕೆಲವೆಡೆ ಸಿಕ್ಕರು ಸರತಿಯಲ್ಲಿ ಗಂಟೆಗಟ್ಟಲೇ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ವ್ಯಾಕ್ಸಿನ್ ಬಂದ ಎರಡು ದಿನದೊಳಗೆ ಖಾಲಿಯಾಗುತ್ತಿದೆ. ಏಪ್ರಿಲ್‌ 28ರಂದು 8ಸಾವಿರ ಡೋಸ್‌ ಬಂದಿತ್ತು. ಲಸಿಕಾ ಕೇಂದ್ರಗಳ ಬಳಿ ಜನ ಮುಗಿಬಿದ್ದಿದ್ದರಿಂದ ಎರಡೇ ದಿನದಲ್ಲಿ ಖಾಲಿಯಾಗಿದೆ. ಮೇ 1ರಂದು ಲಸಿಕೆ ಅಗತ್ಯವಿದೆ ಎಂಬುದಾಗಿ ಇಲಾಖೆಯೂ ಸರ್ಕಾರ ಮತ್ತು ಕೇಂದ್ರ ಕಚೇರಿಗೆ ಪತ್ರ ವ್ಯವಹಾರ ನಡೆಸಿದೆ.

ಸರ್ಕಾರ ಆಯಾ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಶೇ 60ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಬೇಕು ಎಂಬುದಾಗಿ ಗುರಿ ನಿಗದಿ ಮಾಡಿದೆ. ಜಿಲ್ಲೆಯ ಜನಸಂಖ್ಯೆ 18 ಲಕ್ಷಕ್ಕೂ ಹೆಚ್ಚಿದ್ದು, ಕನಿಷ್ಠ 9.5 ಲಕ್ಷದಿಂದ 10 ಲಕ್ಷ ಜನರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಗುರಿ ಇಟ್ಟುಕೊಂಡಿದೆ. ಅದಕ್ಕಾಗಿ ಸಮುದಾಯದವರನ್ನು ಸಂಪರ್ಕಿಸಿ ಲಸಿಕೆ ಹಾಕಲು ಮುಂದಾಗಿದೆ. ಇದರಿಂದಾಗಿಯೂ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 100 ಲಸಿಕೆ ಹಂಚಿಕೆಯಾಗುತ್ತಿದ್ದು, ಈಗ 200ಕ್ಕೂ ಹೆಚ್ಚು ಜನ ಲಸಿಕೆ ಪಡೆಯಲು ಬರುತ್ತಿರುವುದರಿಂದ ಲಸಿಕೆ ಪೂರೈಕೆಯಾದ ದಿನವೇ ಖಾಲಿಯಾಗುತ್ತಿವೆ. ಜಿಲ್ಲೆಯಿಂದ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗೂ ಲಸಿಕೆ ರವಾನೆಯಾಗಿದೆ.

ಜನವರಿ 14ರಿಂದ ಏಪ್ರಿಲ್ 21ರ ಒಳಗೆ ಕೆಲ ದಿನಗಳಲ್ಲಿ ಜಿಲ್ಲೆಗೆ 11 ಸಾವಿರ, 50 ಸಾವಿರ, 39 ಸಾವಿರ, 35 ಸಾವಿರ, 8 ಸಾವಿರ, 6 ಸಾವಿರ ಕೋವಿಶೀಲ್ಡ್‌ ಡೋಸ್‌ಗಳು ಬಂದಿವೆ. ಕಳೆದ ಒಂದು ವಾರದಿಂದ 5 ಸಾವಿರದಿಂದ 8ಸಾವಿರದ ಒಳಗೆ ಬರುತ್ತಿರುವ ಕಾರಣ ಹಾಗೂ ಹಾಕಿಸಿಕೊಳ್ಳಲು ಆಸಕ್ತಿ ಹೆಚ್ಚುತ್ತಿರುವುದರಿಂದ ಲಸಿಕೆಗೆ ಅಭಾವ ಉಂಟಾಗಿದೆ.

ನಿತ್ಯ 12 ಸಾವಿರ ಡೋಸ್ ಅಗತ್ಯ
‘ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಕೆಲ ತಿಂಗಳವರೆಗೂ ನಿತ್ಯ 12 ಸಾವಿರ ಡೋಸ್‌ ಲಸಿಕೆ ಅಗತ್ಯವಿದೆ. 6 ಸಾವಿರ, 8 ಸಾವಿರ ಡೋಸ್ ಕಳುಹಿಸಿದರೆ ಸಾಕಾಗುವುದಿಲ್ಲ. ಇದನ್ನು ಇಲಾಖೆಯ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೊದಲಿಗಿಂತ ಪ್ರಸ್ತುತ ದಿನಗಳಲ್ಲಿ ನಮ್ಮ ನಿರೀಕ್ಷೆ ಮೀರುತ್ತಿದೆ. ಕನಿಷ್ಠ ದಿನಕ್ಕೆ 10 ಸಾವಿರ ಡೋಸ್‌ ಆದರೂ ಕೆಲ ದಿನಗಳವರೆಗೂ ಕಳುಹಿಸಿಕೊಡಿ ಎಂಬುದಾಗಿ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಅವರು.

ಅಂಕಿ–ಅಂಶ
* 2,00,820: ಕೋವಿಶೀಲ್ಡ್‌ ಲಸಿಕೆ ಪೂರೈಕೆ, ಖಾಲಿ
* 29,100: ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆ, ಖಾಲಿ
2,30,000: ಈವರೆಗೂ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡವರು

ಆಧಾರ: ಆರೋಗ್ಯ ಇಲಾಖೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು