ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋವಿಡ್‌ ಕೇರ್‌ ಸೆಂಟರ್‌ ಭಾಗಶಃ ಸ್ಥಗಿತ

ಕೊರೊನಾ ಸೋಂಕಿತರ ಗುಣಮುಖ ಪ್ರಮಾಣ ಶೇ 96ಕ್ಕೆ ಏರಿಕೆ
Last Updated 9 ನವೆಂಬರ್ 2020, 15:45 IST
ಅಕ್ಷರ ಗಾತ್ರ

ಚಿತ್ರದುರ್ಗ: ರೋಗ ಲಕ್ಷಣ ಉಲ್ಬಣಗೊಳ್ಳದ ಕೊರೊನಾ ಸೋಂಕಿತರನ್ನು ಉಪಚರಿಸುತ್ತಿದ್ದ ಜಿಲ್ಲೆಯ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಕೆಲವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿರುವುದು ಈ ಬದಲಾವಣೆಗೆ ಕಾರಣವಾಗಿದೆ.

ಜಿಲ್ಲಾ ಕೋವಿಡ್‌ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆ ಸೇರಿ 38 ಸ್ಥಳಗಳಲ್ಲಿ ಕೋವಿಡ್‌ಗೆ ಚಿಕಿತ್ಸೆ ಲಭ್ಯವಿದೆ. ಕೋವಿಡ್‌ ಚಿಕಿತ್ಸಾ ಕೇಂದ್ರಗಳನ್ನು ಬಲಪಡಿಸಲಾಗಿದೆ. ಸೋಂಕು ಹೆಚ್ಚಾದ ಸಂದರ್ಭದಲ್ಲಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ದಿನ ಕಳೆದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 512 ಸಕ್ರಿಯ ಪ್ರಕರಣಗಳಿವೆ. ನಿತ್ಯ ನೂರಕ್ಕೂ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕೊರೊನಾ ವಾರಿಯರ್‌ಗಳ ಮೇಲಿನ ಒತ್ತಡ ಕೊಂಚ ಕಡಿಮೆಯಾದಂತೆ ಕಾಣುತ್ತಿದೆ.

‘ನಿತ್ಯ ಸರಾಸರಿ ಎರಡು ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೆಚ್ಚು ಜನರನ್ನು ಪರೀಕ್ಷೆ ಮಾಡಿದಂತೆ ಸೋಂಕು ಹರಡುವುದು ಕಡಿಮೆಯಾಗುತ್ತಿದೆ. ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಮಾದರಿ ಪಡೆದು ಪರೀಕ್ಷಿಸಲಾಗುತ್ತಿದೆ. ಸೋಂಕು ಹರಡುವುದು ತಡೆಯಲು ಇದು ಪರಿಣಾಮಕಾರಿ ಕ್ರಮವಾಗಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ.

ಸೋಂಕು ಇರುವವರನ್ನು ತಕ್ಷಣ ಪ್ರತ್ಯೇಕಿಸುವುದರಿಂದ ಮತ್ತೊಬ್ಬರಿಗೆ ಅಂಟುವುದು ಕಡಿಮೆಯಾಗಿದೆ ಎಂಬುದು ಆರೋಗ್ಯ ಇಲಾಖೆ ವಿಶ್ಲೇಷಣೆ. ಪರೀಕ್ಷೆಗೆ ಒಳಪಟ್ಟ ಮಾದರಿಗಳಲ್ಲಿ ಶೇ 2.5ರಷ್ಟು ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸೋಂಕಿನ ದರ ಶೇ 11ರಷ್ಟಿತ್ತು. ಗುಣಮುಖರಾಗುವವರ ಪ್ರಮಾಣ 96ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ 0.45 ಇಳಿಕೆಯಾಗಿದೆ.

‘ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ 1,180 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈಗ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಯಲ್ಲಿ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇವರಕೊಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ 100 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರ ಸಮೀಪ ಇದ್ದ ಇತರ ಕೋವಿಡ್‌ ಕೇರ್‌ ಕೇಂದ್ರಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಅಗತ್ಯ ಇದ್ದಾಗ ಮತ್ತೆ ಬಳಸಿಕೊಳ್ಳಲಾಗುತ್ತದೆ’ ಎಂದು ಫಾಲಾಕ್ಷ ಮಾಹಿತಿ ನೀಡಿದರು.

‘ಚಳಿಗಾಲದಲ್ಲಿ ಕೊರೊನಾ ಸೋಂಕು ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ಇದೆ. ಸೋಂಕಿತರಿಗೂ ಮತ್ತೊಮ್ಮೆ ಅಂಟುವ ಆತಂಕವೂ ಇದೆ. ಇದಕ್ಕೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಸಕ್ರಿಯ ಪ್ರಕರಣ ಕಡಿಮೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT