ಶುಕ್ರವಾರ, ಜುಲೈ 30, 2021
20 °C
12 ಕಾರ್ಮಿಕರು ಬಿಡುಗಡೆ, ಒಬ್ಬರಿಗೆ ಉಡುಪಿಯಲ್ಲಿ ಚಿಕಿತ್ಸೆ

ಜಿಲ್ಲೆಯ ಕೋವಿಡ್‌ ರೋಗಿಗಳೆಲ್ಲ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌–19ಕಾಣಿಸಿಕೊಂಡಿದ್ದ 40 ರೋಗಿಗಳಲ್ಲಿ 39 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬ ಬಾಲಕಿ ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಳ್ಳಕೆರೆಯ ಕೋವಿಡ್ ಹೆಲ್ತ್‌ ಕೇರ್ ಸೆಂಟರ್‌ನಲ್ಲಿದ್ದ 12 ಕಾರ್ಮಿಕರನ್ನು ಬುಧವಾರ ಬಿಡುಗಡೆ ಮಾಡಲಾಯಿತು. ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಎಲ್ಲ ರೋಗಿಗಳು ಈಗಾಗಲೇ ಗುಣಮುಖರಾಗಿದ್ದಾರೆ. ಇದು ಕೋಟೆ ನಾಡಿನ ಜನರಲ್ಲಿ ಸಂತಸ ಉಂಟು ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲೆ ಭರವಸೆ ಹುಟ್ಟಿಸಿದೆ.

ಕೋಟೆನಾಡಿನಲ್ಲಿ ಲಾಕ್‌ಡೌನ್‌ಗೂ ಮೊದಲೇ ಸೋಂಕು ಕಾಣಿಸಿಕೊಂಡಿತ್ತು. ವಿದೇಶದಿಂದ ಮರಳಿದ 37 ವರ್ಷದ ಮಹಿಳೆಗೆ ಸೋಂಕು ಅಂಟಿದ್ದು ಮಾರ್ಚ್‌ 24ರಂದು ಖಚಿತವಾಗಿತ್ತು. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿತ್ತು. ಭೀಮಸಮುದ್ರದ ಸುತ್ತ ಹೈಅಲರ್ಟ್‌ ಘೋಷಣೆ ಮಾಡಿ ಸಾವಿರಾರು ಜನರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಮಹಿಳೆ ಗುಣಮುಖರಾದ ಬಳಿಕ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು.

ಗುಜರಾತಿನ ಅಹಮದಾಬಾದಿನಿಂದ ಮೇ 5ಕ್ಕೆ ಮರಳಿದ ತಬ್ಲಿಗಿ ಜಮಾತ್‌ನ 15 ಸದಸ್ಯರ ಪೈಕಿ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಿಕ್ಕಗೊಂಡನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಎಲ್ಲರನ್ನು ಪರಿಶೀಲಿಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮೇ 8ಕ್ಕೆ ಕೆಲವರಲ್ಲಿ ಸೋಂಕು ಪತ್ತೆಯಾಗಿತ್ತು. ಇವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ನಡುವೆ ಹೊಳಲ್ಕೆರೆ ತಾಲ್ಲೂಕಿನ ಬಾಲಕಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಬಾಲಕಿ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಾಲಕಿಗೆ ಸೋಂಕು ಎಲ್ಲಿ ತಗುಲಿದೆ ಎಂಬುದು ಈವರೆಗೆ ನಿಖರವಾಗಿ ಗೊತ್ತಾಗಿಲ್ಲ. ಬಾಲಕಿ ಇನ್ನೂ ಸೋಂಕಿನಿಂದ ಮುಕ್ತಿ ಹೊಂದಿಲ್ಲ.

ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಕಾರ್ಮಿಕರು ಪರಶುರಾಂಪುರ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಮೇ 15ರಂದು ಪತ್ತೆಯಾಗಿದ್ದರು. ಕಂಟೇನರ್‌ನಲ್ಲಿ ಹೊರಟಿದ್ದ ಇವರನ್ನು ಕ್ವಾರಂಟೈನ್‌ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಹಲವರಲ್ಲಿ ಸೋಂಕು ಪತ್ತೆಯಾಗಿತ್ತು. ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳದೇ ಇರುವುದರಿಂದ ಚಳ್ಳಕೆರೆಯ ಬಿಸಿಎಂ ಹಾಸ್ಟೆಲ್‌ನಲ್ಲೇ ಚಿಕಿತ್ಸೆ ನೀಡಲಾಗಿತ್ತು. ಇದಕ್ಕೆ ಪ್ರಬಲ ವಿರೋಧ ವ್ಯಕ್ತವಾದರೂ ಜಿಲ್ಲಾಡಳಿತ ಮಣಿದಿರಲಿಲ್ಲ. ಈಗ ಎಲ್ಲ ರೋಗಿಗಳು ಗುಣಮುಖರಾಗಿ ಉತ್ತರಪ್ರದೇಶಕ್ಕೆ ಮರಳುತ್ತಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ನಾಲ್ಕು ಮಂದಿ ಮೇ 23ರಂದು ಗುಣಮುಖರಾಗಿದ್ದರು. ಮೇ 30ಕ್ಕೆ ಮತ್ತೆ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಆ ಬಳಿಕ ಕೋವಿಡ್‌ ರೋಗದಿಂದ ಗುಣಮುಖರಾಗುವ ಪ್ರಮಾಣ ಹೆಚ್ಚಾಯಿತು. ಜೂನ್‌ 4ರಂದು 14 ಜನ, ಜೂನ್‌ 9ರಂದು 4 ಹಾಗೂ ಜೂನ್‌ 10ರಂದು 12 ಜನರು ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು