ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜಿಲ್ಲೆಯಲ್ಲಿ ವಾರಾಂತ್ಯ ಸಂಪೂರ್ಣ ಲಾಕ್‌ಡೌನ್‌

ನಿಯಂತ್ರಣಕ್ಕೆ ಸಿಗುತ್ತಿಲ್ಲ ಕೊರೊನಾ ಸೋಂಕು
Last Updated 21 ಮೇ 2021, 16:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ವಾರಾಂತ್ಯದ ಎರಡು ದಿನ ಸಂಪೂರ್ಣ ಲಾಕ್‌ಡೌನ್‌ ಮಾಡಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಅಗತ್ಯ ಸೇವೆ ಹೊರತುಪಡಿಸಿ ಶನಿವಾರ ಮತ್ತು ಭಾನುವಾರ ಎಲ್ಲ ಚಟುವಟಿಕೆಗೆ ನಿರ್ಬಂಧ ವಿಧಿಸಲಾಗಿದೆ.

ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಏಪ್ರಿಲ್‌ ಕೊನೆಯ ವಾರದಿಂದ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೋವಿಡ್ ಪ್ರಕರಣ ಇಳಿಮುಖವಾಗುತ್ತಿಲ್ಲ. ಹೀಗಾಗಿ, ಸಂಪೂರ್ಣ ಲಾಕ್‌ಡೌನ್‌ ಮಾಡುವ ಅಧಿಕಾರವನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ನೀಡಿದೆ. ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಜಿಲ್ಲಾಧಿಕಾರಿ ಶುಕ್ರವಾರ ಸಂಜೆ ಘೋಷಣೆ ಮಾಡಿದ್ದಾರೆ.

‘ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುತ್ತಿದೆ. ಒಂದು ವಾರದಿಂದ ಪಾಸಿಟಿವ್‌ ಪ್ರರಕಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದ ಆದೇಶದ ಜೊತೆಗೆ ಹೆಚ್ಚುವರಿ ನಿರ್ಬಂಧಗಳನ್ನು ಜಿಲ್ಲೆಯಲ್ಲಿ ವಿಧಿಸಲಾಗುತ್ತಿದೆ. ಇದರೊಂದಿಗೆ ನಿಷೇಧಾಜ್ಞೆ ಕೂಡ ಅನುಷ್ಠಾನಗೊಂಡಿದೆ. ಸರ್ಕಾರದ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಈ ಆದೇಶವು ಶನಿವಾರ ಬೆಳಿಗ್ಗೆ 10ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಮಾತ್ರ ಎಂದು ಉಲ್ಲೇಖಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಶನಿವಾರ ಬೆಳಿಗ್ಗೆ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ವೈದ್ಯಕೀಯ ಅಗತ್ಯಗಳಾದ ಆಸ್ಪತ್ರೆ, ಔಷಧ ಅಂಗಡಿ, ಪೆಟ್ರೋಲ್‌ ಬಂಕ್‌, ಹಾಲಿನ ಬೂತ್‌ಗಳು ತೆರೆಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮನೆ ಬಾಗಿಲಿಗೆ ತರಕಾರಿ, ದಿನಸಿ, ದಿನತ್ರಿಕೆ ವಿತರಣೆ ತಲುಪಿಸಲು, ಇ–ಕಾಮರ್ಸ್‌, ಹೋಟೆಲ್‌ ಪಾರ್ಸಲ್‌ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಲಾಕ್‌ಡೌನ್‌ ಅನುಷ್ಠಾನಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಅನಗತ್ಯವಾಗಿ ಹೊರಗೆ ಬರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಸಂಚಾರ ನಿಯಂತ್ರಣಕ್ಕೆ ಹಲವು ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ವಾಹನ ಸಂಚಾರದ ಮೇಲೆ ನಿಗಾ ಇಡಲು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ವೈದ್ಯಕೀಯ ಚಿಕಿತ್ಸೆ, ಅಗತ್ಯ ಸೇವೆ, ಸರ್ಕಾರಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ.

21 ಕಪ್ಪು ಶಿಲೀಂದ್ರ ಪ್ರಕರಣ

ಜಿಲ್ಲೆಯಲ್ಲಿ ಕಪ್ಪು ಶಿಲೀಂದ್ರ ಪ್ರಕರಣ ದಾಂಗುಡಿ ಇಟ್ಟಿದ್ದು, ಈವರೆಗೆ ಒಟ್ಟು 21 ಪ್ರಕರಣಗಳು ಪತ್ತೆಯಾಗಿವೆ. ಡಾ.ಪ್ರಹ್ಲಾದ್‌ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿದೆ.

ಕಪ್ಪು ಶಿಲೀಂದ್ರ ಕಾಣಿಸಿಕೊಂಡ ಬಹುತೇಕರು ಕೋವಿಡ್‌ಗೆ ಚಿಕಿತ್ಸೆ ಪಡೆದವರು. ತೀವ್ರ ಮಧುಮೇಹದಿಂದ ಬಳಲುತ್ತಿದ್ದ ರೋಗಿಗಳನ್ನು ಇದು ಬಾಧಿಸಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಚಳ್ಳಕೆರೆ ರಸ್ತೆಯಲ್ಲಿರುವ ಡಾ.ಪ್ರಹ್ಲಾದ್‌ ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಕಪ್ಪು ಶಿಲೀಂದ್ರ ಪ್ರಕರಣ ಸಾಂಕ್ರಾಮಿಕವಲ್ಲ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಸಾರ್ವಜನಿಕರು ಗಾಬರಿ ಆಗುವ ಅಗತ್ಯವಿಲ್ಲ. ಈ ರೋಗಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT