ಸೋಮವಾರ, ಜೂನ್ 27, 2022
21 °C

ಕೇಳುವವರಿಲ್ಲದ ಮೌರಿಸ್ ಬಾಳೆಹಣ್ಣು: ಟ್ರ್ಯಾಕ್ಟರ್ ಓಡಿಸಿ ಬೆಳೆ ನೆಲಸಮ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ರೋಬೊಸ್ಟಾರ್–ಜಿ 9 ತಳಿಯ (ಪಚ್ಚಬಾಳೆ/ಮೌರಿಸ್) ಬಾಳೆ ಹಣ್ಣನ್ನು ಖರೀದಿಸುವವರಿಲ್ಲದೇ ಬೇಸರಗೊಂಡ ಯುವ ರೈತರೊಬ್ಬರು ಬುಧವಾರ ಟ್ರ್ಯಾಕ್ಟರ್ ಮೂಲಕ ಬಾಳೆ ಬೆಳೆಯನ್ನು ನೆಲಸಮ ಮಾಡಿದ್ದಾರೆ.

ಎಂ.ಎ., ಬಿ.ಇಡಿ ಪದವೀಧರರಾಗಿರುವ ಚಂದ್ರಗಿರಿ ಅವರು ಕೃಷಿ–ತೋಟಗಾರಿಕೆಯಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಕೃಷಿ ಕ್ಷೇತ್ರಕ್ಕೆ ಬಂದಿದ್ದರು. ಆದರೆ, ಕೊರೊನಾ ಲಾಕ್‌ಡೌನ್‌ ಅವರ ಕನಸಿಗೆ ಪೆಟ್ಟು ನೀಡಿದೆ.

‘₹ 3 ಲಕ್ಷ ಖರ್ಚು ಮಾಡಿ ಒಂದೂವರೆ ಎಕರೆಯಲ್ಲಿ 1,500 ರೊಬೊಸ್ಟಾರ್–ಜಿ–9 ತಳಿಯ ಬಾಳೆ ನಾಟಿ ಮಾಡಿದ್ದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಪಚ್ಚ ಬಾಳೆಗೆ ಉತ್ತಮ ಬೇಡಿಕೆ ಇರುತ್ತದೆ ಎಂದು ಅದೇ ಸಮಯಕ್ಕೆ ಕೊಯ್ಲಿಗೆ ಬರುವಂತೆ ಬೆಳೆಸಿದ್ದೆ. ಕೊರೊನಾ ನನ್ನ ಎಲ್ಲ ಲೆಕ್ಕಾಚಾರಗಳನ್ನು ನುಚ್ಚುನೂರು ಮಾಡಿದೆ. ₹ 15ರಿಂದ ₹20ಕ್ಕೆ ಒಂದು ಕೆ.ಜಿಯಂತೆ ತೋಟಕ್ಕೇ ಬಂದು ಖರೀದಿಸುತ್ತಿದ್ದ ವರ್ತಕರನ್ನು, ‘ಎಷ್ಟಾದರೂ ಕೊಡಿ, ಬಾಳೆಗೊನೆ ಕಡಿದುಕೊಂಡು ಹೋಗಿ’ ಎಂದರೂ ಬರುತ್ತಿಲ್ಲ. ಗಿಡದಲ್ಲಿಯೇ ಹಣ್ಣಾಗಿ ಉದುರುತ್ತಿದ್ದವು. ಅಂತಿಮವಾಗಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಲು ತೀರ್ಮಾನಿಸಿದೆ’ ಎಂದು ಚಂದ್ರಗಿರಿ ಅಳಲು ತೋಡಿಕೊಂಡರು.

‘ಪಂಪ್‌ಸೆಟ್‌ ನೀರಿನ ಆಶ್ರಯದಲ್ಲಿ ಬೆಳೆ ತೆಗೆಯುವ ಕಷ್ಟ ಏನೆಂದು ಬೆಳೆದವರಿಗೆ ಮಾತ್ರ ಗೊತ್ತು. ಕರೆಂಟ್ ಬರುವುದನ್ನು ಹಗಲು–ರಾತ್ರಿ ಎನ್ನದೇ ಕಾದುಕೊಂಡಿದ್ದು ನೀರು ಹಾಯಿಸಬೇಕು. ನಮ್ಮ ಇನ್ನೊಂದು ಜಮೀನಿನಲ್ಲಿ 2,500 ಏಲಕ್ಕಿ ಬಾಳೆಗಿಡಗಳಿವೆ. ಅದಕ್ಕೂ ಬೆಲೆ ಇಲ್ಲ. ₹ 8ರಿಂದ ₹ 12ಕ್ಕೆ ಕೆ.ಜಿಯಂತೆ ಕೇಳುತ್ತಾರೆ. ಕನಿಷ್ಠ ಖರ್ಚಾದರೂ ಬರಲಿ ಎಂದು ಅದನ್ನು ಬಿಟ್ಟಿದ್ದೇನೆ’ ಎಂದು ಅವರು ಹೇಳಿದರು.

‘ತೋಟಗಾರಿಕೆ ಇಲಾಖೆಯವರು ಹಣ್ಣು–ತರಕಾರಿ ಬೆಳೆಗಳನ್ನು ಖರೀದಿಸುವ ವರ್ತಕರ ಮೊಬೈಲ್ ನಂಬರ್ ಕೊಡುತ್ತಾರೆ. ಆದರೆ, ರೈತರು ಖರೀದಿದಾರರನ್ನು ಸಂಪರ್ಕಿಸಿದರೆ, ‘ಸದ್ಯಕ್ಕೆ ಬೇಡ; ಬೇಡಿಕೆ ಇಲ್ಲ. ಕೊರೊನಾ ಮುಗಿಯಲಿ’ ಎನ್ನುತ್ತಾರೆ. ತೀರಾ ಒತ್ತಾಯ ಮಾಡಿದರೆ ಬಾಯಿಗೆ ಬಂದ ದರಕ್ಕೆ ಕೊಡುವಂತೆ ಹೇಳಿ ಫೋನ್‌ ಕಟ್ ಮಾಡುತ್ತಾರೆ.
ಮದುವೆ, ಜಾತ್ರೆ–ಉತ್ಸವಗಳು ನಡೆದಿದ್ದರೆ ಯಾರನ್ನೂ ಬೇಡುವ ಸನ್ನಿವೇಶ ಬರುತ್ತಿರಲಿಲ್ಲ. ಸರ್ಕಾರ ನೆರವು ನೀಡುತ್ತದೆ ಎಂಬ ನಂಬಿಕೆಯೂ ಇಲ್ಲ. ಕನಿಷ್ಠ ನಾವು ಮಾಡಿರುವ ಖರ್ಚನ್ನಾದರೂ ಸಹಾಯಧನದ ರೂಪದಲ್ಲಿ ಕೊಟ್ಟರೆ ಸಾಕು’ ಎಂದು ಚಂದ್ರಗಿರಿ
ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು