ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ರೇಷ್ಮೆಸೊಪ್ಪಿಗೆ ಹೆಚ್ಚಿದ ಬೇಡಿಕೆ

ಹುಳು ಸಾಕಣೆ ಮನೆ ನಿರ್ಮಿಸಿಕೊಡಲು ಮನವಿ l ಗೂಡು ದರ ಏರಿಕೆ
Last Updated 28 ಏಪ್ರಿಲ್ 2022, 5:27 IST
ಅಕ್ಷರ ಗಾತ್ರ

ಮೊಳಕಾಲ್ಮುರು: ರೇಷ್ಮೆಗೂಡಿನ ದರವು ಗಣನೀಯವಾಗಿ ಏರಿಕೆಯಾಗಿರುವ ಬೆನ್ನಲ್ಲೇ ರೇಷ್ಮೆಸೊಪ್ಪಿಗೆ ಸಹ ತಕ್ಕನಾದ ಬೇಡಿಕೆ ಸಿಗುತ್ತಿದೆ.

ತಾಲ್ಲೂಕು ಗುಣಮಟ್ಟದ ಬಿಳಿಗೂಡು ಉತ್ಪಾದನೆಯಲ್ಲಿ ಹೆಸರು ಮಾಡಿದೆ. ಜಿಲ್ಲೆಯಲ್ಲಿ ಹೆಚ್ಚು ಬಿಳಿಗೂಡು ಉತ್ಪಾದನೆ ಮಾಡುವ ತಾಲ್ಲೂಕು ಎಂದು ಗುರುತಿಸಿಕೊಂಡಿದೆ. ಇಲ್ಲಿಯ ಗೂಡಿಗೆ ರಾಮನಗರ ಮಾರುಕಟ್ಟೆಯಲ್ಲಿ ವಿಶೇಷ ಬೆಲೆ ಸಿಗುತ್ತಿದೆ. ಈಚಿನ ತಿಂಗಳುಗಳಲ್ಲಿ ಬಿಳಿಗೂಡಿಗೆ ಬಂಗಾರದ ಬೆಲೆ ಸಿಗುತ್ತಿರುವ ಪರಿಣಾಮವಾಗಿ ಬೆಳೆ ನಾಟಿ ಪ್ರಮಾಣ ಹೆಚ್ಚಿದೆ.

ಈ ಭಾಗದಲ್ಲಿ ಎರಡು ಬಗೆಯ ಬೆಳೆಗಾರರನ್ನು ಕಾಣಬಹುದು. ತಾವೇ ಸೊಪ್ಪು ಬೆಳೆದು ಹುಳು ಸಾಕಣೆ ಮಾಡುವವರು ಒಂದು ಗುಂಪಿನವರಾಗಿದ್ದಾರೆ. ಮತ್ತೊಂದು ಗುಂಪಿನಲ್ಲಿ ಸೊಪ್ಪು ಎರವಲು ಪಡೆದು ಬಂದ ಲಾಭದಲ್ಲಿ ಹಂಚಿಕೊಳ್ಳುವ ಬೆಳೆಗಾರರು ಹಾಗೂ ಸೊಪ್ಪನ್ನು ಬೆಳೆವಾರು ಕೊಂಡು ಹುಳು ಸಾಕಣೆ ಮಾಡುವ ಬೆಳೆಗಾರರೂ ಇದ್ದಾರೆ. ಗೂಡಿನ ಬೆಲೆ ಹೆಚ್ಚಿದ ನಂತರ ಸೊಪ್ಪು ಕೊಂಡು ಗೂಡು ಉತ್ಪಾದನೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ.

ತಾಲ್ಲೂಕಿನ ಕೊಂಡ್ಲಹಳ್ಳಿ ಬಿಳಿನೀರು ಚಿಲುಮೆಯ ರೇಷ್ಮೆ ಬೆಳೆಗಾರ ಎಸ್.ಕೆ. ನಿಂಗರಾಜ್ ಮಾತನಾಡಿ, ‘ರೇಷ್ಮೆಗೂಡಿನ ಒಂದು ಬೆಳೆಯ ಅವಧಿಯು ಎರಡೂವರೆ ತಿಂಗಳು ಆಗಿರುತ್ತದೆ. ಒಂದು ಎಕರೆ ವ್ಯಾಪ್ತಿಯ ಸೊಪ್ಪು 200 ಮೊಟ್ಟೆ ಹುಳುವಿಗೆ ಬೇಕಾಗುತ್ತದೆ. ಇಷ್ಟು ಸೊಪ್ಪನ್ನು ₹ 40-45 ಸಾವಿರಕ್ಕೆ ನೀಡಲಾಗುತ್ತಿದೆ. ಪಾಲು ಭಾಗದಲ್ಲಿ 60:40 ಪ್ರಮಾಣದಲ್ಲಿ ಸಹ ಹುಳು ಸಾಕಣೆ ಮಾಡಲಾಗುತ್ತಿದೆ. ಹುಳು ಸಾಕಣೆ ಮನೆ ಇಲ್ಲದವರು ಹೆಚ್ಚಾಗಿ ಸೊಪ್ಪು ಮಾರಾಟ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಬೇಸಿಗೆಯಲ್ಲಿ ರೇಷ್ಮೆಹುಳುಗಳು ಹೆಚ್ಚು ಸೊಪ್ಪು ತಿನ್ನುವುದಿಲ್ಲ. ಇದರಿಂದಾಗಿ ದರ ಕುಸಿತವಾಗಲಿದೆ. ಗುಣಮಟ್ಟದ ಗೂಡು ಉತ್ಪಾದನೆ ಸಹ ಕುಂಠಿತವಾಗಲಿದೆ.

ಹಲವು ರೈತರು ಹುಳು ಸಾಕಣೆ ಮನೆ ನಿರ್ಮಿಸಿಕೊಡುವಂತೆ ಮತ್ತೆ ಕೆಲವರು ಹೆಚ್ಚುವರಿ ಸಾಕಣೆ ಮನೆ ನಿರ್ಮಾಣಕ್ಕೆ ಸಹಾಯಧನಕ್ಕೆ ರೇಷ್ಮೆ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಮಹೇಶ್ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ 450 ರೇಷ್ಮೆ ಬೆಳೆಗಾರರು ಇದ್ದು, ಅಂದಾಜು 1,000 ಎಕರೆ ಪ್ರದೇಶದಲ್ಲಿ ರೇಷ್ಮೆ ನಾಟಿ ಮಾಡಲಾಗಿದೆ. ಈ ವರ್ಷ ಕೊಂಡ್ಲಹಳ್ಳಿ, ಕೋನಸಾಗರ, ಗುಂಡ್ಲೂರು, ಬಿ.ಜಿ. ಕೆರೆ ಸುತ್ತಮುತ್ತ 200 ಎಕರೆಯಷ್ಟು ಪ್ರದೇಶದಲ್ಲಿ ಹೊಸ ನಾಟಿ ಮಾಡಲಾಗಿದೆ. ಶೇ 20ರಷ್ಟು ಬೆಳೆಗಾರರಿಗೆ ಹುಳು ಸಾಕಣೆ ಮನೆ ಇಲ್ಲ. ಇವರು ಅನಿವಾರ್ಯವಾಗಿ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ಈಚೆಗೆ ಕಟ್ಟಡ ನಿರ್ಮಾಣ ಸಾಮಗ್ರಿ ದರ ವಿಪರೀಪ ಹೆಚ್ಚಳವಾಗಿರುವುದು ಸಹ ಹೊಸ ಕಟ್ಟಡ ನಿರ್ಮಾಣ ಕುಂಠಿತಕ್ಕೆ ಕಾರಣವಾಗಿದೆ. ಹೊಸ ಕಟ್ಟಡ ಮಂಜೂರಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು
ಹೇಳಿದರು.

............

ಚಂದ್ರಿಕೆ ಶೆಡ್‌ಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ವಾರ್ಷಿಕ 11 ಬೆಳೆ ಬೆಳೆಯಲು ಅನುಕೂಲವಾಗಲಿದೆ. ಇದರಿಂದ ಇಲ್ಲಿಯ ರೈತರ ಜೀವನ ಮಟ್ಟ ಸುಧಾರಣೆಯಾಗಲಿದೆ. ಸರ್ಕಾರ ತುರ್ತು ಗಮನಹರಿಸಬೇಕು.

ಎಸ್.ಕೆ. ಗುರುಲಿಂಗಪ್ಪ, ಅಧ್ಯಕ್ಷರು, ತಾಲ್ಲೂಕು ರೇಷ್ಮೆ ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT