ಬುಧವಾರ, ಜೂನ್ 29, 2022
26 °C
ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ಗೋವುಗಳು

ಚಿತ್ರದುರ್ಗ: ಚೈತನ್ಯ ತುಂಬಿದ ದೇಸಿ ತಳಿಗಳ ಗೋ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ನಶಿಸಿ ಹೋಗುತ್ತಿರುವ ದೇಸಿ ಗೋ ತಳಿಗಳ ಸಂರಕ್ಷಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ವೀರ ಮದಕರಿ ಸೇವಾ ಟ್ರಸ್ಟ್‌ನಿಂದ ಶನಿವಾರ ‘ಸಮರ್ಪಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ದೇಸಿ ತಳಿಗಳ ಗೋ ಪ್ರದರ್ಶನ ಸ್ಪರ್ಧೆ’ ಯುವ ಸಮದಾಯಕ್ಕೆ ಸ್ಫೂರ್ತಿ ತುಂಬಿತು.

ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಾಕಿದ್ದ ಪೆಂಡಾಲ್‌ನ ನೆರಳಿನಲ್ಲಿ ನಿಗದಿಪಡಿಸಿದ ಜಾಗಗಳಲ್ಲಿ ಶಿಸ್ತಿನಿ ಸಿಪಾಯಿಗಳಂತೆ ನಿಂತಿದ್ದವು ಈ ನೆಲದ ದೇಸಿ ಗೋವು. ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೂ ಗೋವುಗಳನ್ನು ಗೋಪಾಲಕರು ಕರೆತಂದು ಸ್ಪರ್ಧೆಗೆ ಸಿದ್ಧಗೊಳಿಸಿದ್ದರು.

ಗಿರ್, ಹಳ್ಳಿಕಾರ್, ದೇವಣಿ, ಕಾಂಕ್ರೆಜ್‌, ಅಮೃತ್‌ ಮಹಲ್‌, ಮಲ್ನಾಡ್ ಗಿಡ್ಡ, ಸಾಯಿವಾಲ್‌ ಸೇರಿ ಸುಮಾರು 15 ದೇಸಿ ತಳಿಯ ಅಂದಾಜು 70 ಹಸು, ಹೋರಿಗಳ ಮೈ ತೊಳೆದು ಶುಭ್ರಗೊಳಿಸಿದ ಮಾಲೀಕರು ಹೂವು, ಘಂಟೆಯ ಮಾಲೆ, ರಿಬ್ಬನ್‌ ಟೇಪ್‌ಗಳಿಂದ ಸಿಂಗರಿಸಿದ್ದರು. ಬೆಳಿಗ್ಗೆ 10.30ರ ವೇಳೆಗೆ ಶ್ರೀಕೃಷ್ಣನ ಮೂರ್ತಿಗೆ ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿದರು. ಬಳಿಕ ಸ್ಪರ್ಧೆಗೆ ಆಗಮಿಸಿದ್ದ ಎಲ್ಲ ಗೋವುಗಳಿಗೂ ಪೂಜೆ ಸಲ್ಲಿಸಿ ಬೆಲ್ಲ, ಮೇವು ನೀಡಿ ನಮಿಸಿದರು.

ಬಳಿಕ ಮಾತನಾಡಿದ ಶಿವಲಿಂಗಾನಂದ ಸ್ವಾಮೀಜಿ, ‘ಗೋವುಗಳು ಭಾರತೀಯರಿಗೆ ನಿಜವಾದ ಸಂಪತ್ತು. ಗೋ ಮೂತ್ರ, ಹಾಲು, ಸಗಣಿ ಎಲ್ಲವೂ ಅಮೂಲ್ಯ ವಸ್ತುಗಳು. ಆದ್ದರಿಂದ ದೇಸಿ ತಳಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು’ ಎಂದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಗೋವುಗಳ ಸಂತತಿ ಕ್ಷೀಣಿಸುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೈಗೊಂಡ ನಿರ್ಧಾರಗಳಿಂದ ಗೋವುಗಳ ಸಂರಕ್ಷಣೆಗೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮೂರು ಗೋಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದ ಬಳಿಕ ಜನಪದ ಕಲಾತಂಡಗಳೊಂದಿಗೆ ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಗಾಂಧಿ ವೃತ್ತದವರೆಗೂ ಅಲಂಕರಿಸಿದ ಗೋವುಗಳ ಮೆರವಣಿಗೆ ನಡೆಸಲಾಯಿತು. ಎಲ್ಲಾ ಗೋ ಮಾಲೀಕರಿಗೂ ಪ್ರಮಾಣಪತ್ರ, ಐದು ಲೀಟರ್‌ ಸಾಮರ್ಥ್ಯದ ಹಾಲಿನ ಕ್ಯಾನ್‍ ಹಾಗೂ ಗೌರವಧನ ವಿತರಿಸಲಾಯಿತು.

ತೀರ್ಪುಗಾರರಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಎನ್‌.ಕುಮಾರ್, ಡಾ.ಸಿ. ತಿಪ್ಪೇಸ್ವಾಮಿ, ಡಾ.ರಂಗಪ್ಪ, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ರಂಗಸ್ವಾಮಿ, ಡಾ.ಗಿರಿರಾಜ್‌, ಡಾ.ವಿ.ಟಿ.ಮುರುಗೇಶ್‌, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಪ್ರಕಾಶ್‌ ರೆಡ್ಡಿ, ಹಿರಿಯ ಪಶುವೈದ್ಯಾಧಿಕಾರಿ ಡಾ. ಸ್ವಾಮಿ, ಜಾನುವಾರು ಅಧಿಕಾರಿ ತಿಪ್ಪೇಸ್ವಾಮಿ ಭಾಗವಹಿಸಿದ್ದರು.

ಕಾರ್ಯಕಾರಿ ಸಮಿತಿ ಅಧ್ಯಕ್ಷ ಜೆ.ಆರ್‌.ರಾಮಮೂರ್ತಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ಅಧ್ಯಕ್ಷ ಡಾ.ಕೆ.ಎಸ್‌. ಮುಕುಂದರಾವ್‌, ಉಪಾಧ್ಯಕ್ಷ ಪಟೇಲ್ ಶಿವಕುಮಾರ್, ಪಟೇಲ್ ರುದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು