ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಡುತ್ತಿದೆ ಮಕ್ಕಳ ಆರೋಗ್ಯ

Last Updated 13 ಸೆಪ್ಟೆಂಬರ್ 2021, 4:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೆಮ್ಮು, ಶೀತ, ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುವ ಮಕ್ಕಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವ ಮಕ್ಕಳಿಗೆ ಸಕಾಲಕ್ಕೆ ಸೇವೆ ಸಿಗುವುದು ಕಷ್ಟವಾಗಿದೆ. ಕೋವಿಡ್‌ ಮೂರನೇ ಅಲೆಯ ಆತಂಕದ ನಡುವೆ ಮಕ್ಕಳ ಆರೋಗ್ಯ ಹದಗೆಡುತ್ತಿರುವುದು ಪೋಷಕರಲ್ಲಿಯೂ ಭಯ ಮೂಡಿಸಿದೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಮಕ್ಕಳ ಪರಿಸ್ಥಿತಿಯನ್ನು ಗಮನಿಸಿ ವಾರ್ಡ್‌ಗಳಿಗೆ ದಾಖಲಿಸಲಾಗುತ್ತಿದೆ. ಕೋವಿಡ್‌ ಹೊರತಾದ ಕಾಯಿಲೆಗೆ ಬೆಡ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಮಕ್ಕಳು ನೆಲದ ಮೇಲೆ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಕ್ಲಿನಿಕ್‌ಗಳ ಬಳಿ ವೈದ್ಯರ ಸೇವೆಗಾಗಿ ಮಕ್ಕಳು ಸರತಿ ಸಾಲಿನಲ್ಲಿ ಕಾಯುವ ಸ್ಥಿತಿ ಜಿಲ್ಲೆಯ ಹಲವೆಡೆ ಸಾಮಾನ್ಯವಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಈ ಸಮಸ್ಯೆ ಕೊಂಚ ಗಂಭೀರವಾಗಿದೆ.

ಮಕ್ಕಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಹುಟ್ಟುಹಾಕಿದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಂಡು ಅನೇಕರು ಗಾಬರಿಯಿಂದ ವೈದ್ಯರನ್ನು ಭೇಟಿ ಮಾಡುತ್ತಿದ್ದಾರೆ. ಕೋವಿಡ್‌ ಮಾದರಿಯ ಲಕ್ಷಣಗಳಂತೆ ಕಂಡರೂ ಕೋವಿಡ್‌ ದೃಢಪಟ್ಟಿಲ್ಲ. ಪೋಷಕರ ಒತ್ತಾಯ ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 200 ಮಕ್ಕಳ ಗಂಟಲು ಮತ್ತು ಮೂಗಿನ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದೆ. ಇದರಲ್ಲಿ ಹಿರಿಯೂರಿನ 13 ವರ್ಷದ ಬಾಲಕಿಯಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ.

ಎರಡು ವರ್ಷಕ್ಕೊಮ್ಮೆ ಪುನರಾವರ್ತನೆ: ಮಕ್ಕಳಲ್ಲಿ ಅನಾರೋಗ್ಯದ ಸಮಸ್ಯೆಗಳು ಪ್ರತಿ ಎರಡು ಅಥವಾ ಮೂರು ವರ್ಷಗಳಿಗೆ ಒಮ್ಮೆ ಪುನರಾವರ್ತನೆ ಆಗುತ್ತವೆ ಎಂಬುದು ವೈದ್ಯರ ಅಭಿಪ್ರಾಯ. ಮೂರು ವರ್ಷ
ಗಳ ಹಿಂದೆ ಹೀಗೆ ಅತಿ ಹೆಚ್ಚು ಮಕ್ಕಳು ಅನಾರೋಗ್ಯದಿಂದ ಆಸ್ಪತ್ರೆಗೆ ಬಂದಿದ್ದರು ಎಂಬುದು ಅವರ ಅನುಭವ. ಇದೇ ರೀತಿಯ ಸಾಮಾನ್ಯ ಕಾಯಿಲೆ ಮರುಕಳಿಸಿದೆ ಎಂಬುದನ್ನು ಮಕ್ಕಳು ಮತ್ತು ಪೋಷಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ವೈದ್ಯರು ಮಾಡುತ್ತಿದ್ದಾರೆ.

ಮಕ್ಕಳಲ್ಲಿ ಮೊದಲು ಶೀತ ಕಾಣಿಸಿಕೊಳ್ಳುತ್ತಿದೆ. ನಿಧಾನವಾಗಿ ಜ್ವರ ಹಾಗೂ ಕೆಮ್ಮು ಶುರುವಾಗುತ್ತಿದೆ. ಕೆಲ ದಿನಗಳ ಬಳಿಕ ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಭೀತಿಗೆ ಒಳಗಾಗುತ್ತಿದ್ದಾರೆ. ಎರಡು ವಾರಗಳಿಂದ ಇದು ಹೆಚ್ಚಾಗುತ್ತಿದೆ. ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳಲು ಕನಿಷ್ಠ ವಾರವಾದರೂ ಬೇಕಾಗುತ್ತದೆ. ಶುಶ್ರೂಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಇಂತಹ ಸಮಸ್ಯೆಗಳ ಬಗ್ಗೆ ವೈದ್ಯರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.

ನೆಲದ ಮೇಲೆ ಮಲಗಿದ ಮಕ್ಕಳು:ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಸಿಗೆ ಕೊರತೆ ಉಂಟಾಗುತ್ತಿರುವುದರಿಂದ ನೆಲದ ಮೇಲೆ ಮಕ್ಕಳಿಗೆ ಬೆಡ್‌ಗಳನ್ನು ಒದಗಿಸಲಾಗಿದೆ. ಒಂದೊಂದು ಬೆಡ್‌ನಲ್ಲಿ ಇಬ್ಬರು, ಮೂವರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳೊಂದಿಗೆ ಪೋಷಕರು ಇರಬೇಕಾಗಿರುವುದರಿಂದ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಜನದಟ್ಟಣೆ ಹೆಚ್ಚಾಗಿದೆ.

‘ಐದು ವರ್ಷದ ಒಳಗಿನ ಮಕ್ಕಳಲ್ಲಿ ಇಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯ ಸ್ಥಿತಿ ಗಂಭೀರ ಸ್ವರೂಪ ಪಡೆದ ಬಳಿಕ ಪೋಷಕರು ಆಸ್ಪತ್ರೆಗೆ ಕರೆತರುತ್ತಾರೆ. ಹೀಗಾಗಿ, ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕಾಗಿದೆ. ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಸಿಕ್ಕರೆ ಶೀಘ್ರ ಗುಣಮುಖರಾಗುತ್ತಾರೆ’ ಎನ್ನುತ್ತಾರೆ ಮಕ್ಕಳ ಚಿಕಿತ್ಸಾ ವಿಭಾಗದ ವೈದ್ಯರು.

ಮಕ್ಕಳ ವಾರ್ಡ್‌ನಲ್ಲಿ 38 ಹಾಸಿಗೆಗಳಿವೆ. ನಿತ್ಯ 10ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಹಾಸಿಗೆ ಕೊರತೆ ಉಂಟಾಗುತ್ತಿದೆ. ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಯೂ ಹಾಸಿಗೆ ಸಿಗುತ್ತಿಲ್ಲ. ಇಲ್ಲಿಯ ಚಿಕಿತ್ಸಾ ವೆಚ್ಚ ಭರಿಸುವ ಶಕ್ತಿ ಅನೇಕರಲ್ಲಿ ಇಲ್ಲವಾದ ಕಾರಣ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ದಾಖಲಾಗುತ್ತಿದ್ದಾರೆ.

ವಾತಾವರಣದಲ್ಲಿ ಬದಲಾವಣೆ

ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಇದರಿಂದ ಆತಂಕಪಡುವ ಅಗತ್ಯವಿಲ್ಲ. ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌.ರಂಗನಾಥ್‌
ಸಲಹೆ ನೀಡಿದ್ದಾರೆ.

‘ಶೀತಗಾಳಿ, ದೂಳು, ಆಗಾಗ ಬರುವ ಮಳೆಯ ಕಾರಣಕ್ಕೆ ಇಂತಹ ಕಾಯಿಲೆಗಳು ಬರುತ್ತವೆ. ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮಕ್ಕಳಲ್ಲಿ ಆಗಾಗ ಇಂತಹ ರೋಗಲಕ್ಷಣ ಬರುವುದು ಸಹಜ. ಇದನ್ನು ಕೋವಿಡ್‌ ಎಂದು ಭಾವಿಸುವುದು ತಪ್ಪು. ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರ ಸೇವೆ ಸಿಗುತ್ತಿದೆ. ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆಯಬೇಕು‘ಎಂದು ಹೇಳಿದರು.

ಮಕ್ಕಳ ತಜ್ಞ ವೈದ್ಯರ ಕೊರತೆ

ನಾಯಕನಹಟ್ಟಿ: ಕೆಲ ದಿನಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳು ಸಾಮೂಹಿಕವಾಗಿ ಅನಾರೋಗ್ಯದಿಂದ ಬಳಲುತ್ತಿರುವುದು ಪೋಷಕರನ್ನು ಕಂಗೆಡಿಸಿದೆ.

ಕೊರೊನಾ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರು ಆರೋಗ್ಯ ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು. ಚಿಕಿತ್ಸೆ ಲಭಿಸಿದೇ ಪರದಾಡಿದರು. ಇಂತಹ ಭೀಕರ ಪರಿಸ್ಥಿತಿ ಮರೆಯುವ ಮುನ್ನವೇ ಗ್ರಾಮೀಣ ಭಾಗದಲ್ಲಿ ನೆಗಡಿ, ಕೆಮ್ಮು, ಜ್ವರಕ್ಕೆ ಮಕ್ಕಳು ತುತ್ತಾಗಿ ಸರ್ಕಾರಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಪೋಷಕರು ಕಂಗಾಲಾಗಿದ್ದಾರೆ.

ಒಂದು ತಿಂಗಳಿನಿಂದ ಮೋಡ ಕವಿದ ವಾತಾವರಣವಿದೆ. ಮಳೆ, ಬಿಸಿಲು, ಶೀತಗಾಳಿ ಬೀಸುವಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೆಮ್ಮು, ಶೀತ, ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದರೆ ಸಾಮಾನ್ಯ ವೈದ್ಯರ ಬಳೀಯೇ ಚಿಕಿತ್ಸೆ ಪಡೆಯಬೇಕಿದೆ. ಇಲ್ಲವಾದರೆ ಚಳ್ಳಕೆರೆ, ಚಿತ್ರದುರ್ಗಕ್ಕೆ ತೆರಳಿ ಖಾಸಗಿ ಕ್ಲೀನಿಕ್‍ಗಳಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಇದೆ.

ಚಳ್ಳಕೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ, ನಾಯಕನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರ ಹೊರತುಪಡಿಸಿದರೆ ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರ, ತಳಕು ಸೇರಿದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಸಾಮಾನ್ಯ ವೈದ್ಯರು ಅನಾರೋಗ್ಯಕ್ಕೆ ತುತ್ತಾಗಿರುವ ಮಕ್ಕಳ ಹೆಚ್ಚಿನ ಚಿಕಿತ್ಸೆಗೆ ಚಳ್ಳಕೆರೆಗೆ ಶಿಫಾರಸು ಮಾಡುತ್ತಾರೆ. ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಬ್ಬರೇ ಮಕ್ಕಳ ತಜ್ಞ ವೈದ್ಯರಿದ್ದು, ಸಾರ್ವಜನಿಕ ಆಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವರೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಇದೆ.

ನಿತ್ಯ 200ರಿಂದ 300 ಮಕ್ಕಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಮಕ್ಕಳ ವಾರ್ಡ್‍ಗಳಲ್ಲಿ ಶುಚಿತ್ವದ ಕೊರತೆಯಿಂದ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಬಹುತೇಕ ಪೋಷಕರು ಚಳ್ಳಕೆರೆಯ ಖಾಸಗಿ ಕ್ಲಿನಿಕ್‍ಗಳಿಗೆ ತೆರಳಿ ದುಬಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಪರೀಕ್ಷೆಗೆ ಆರೋಗ್ಯ ನಂದನ:

ಮೊಳಕಾಲ್ಮುರು: ತಾಲ್ಲೂಕಿನ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ರೋಗ ಲಕ್ಷಣಗಳು ವ್ಯಾಪಕವಾಗಿ ಕಾಣಿಸಿಕೊಳ್ಳುವ ಮೂಲಕ ಪೋಷಕರಲ್ಲಿ ಆತಂಕ ಎದುರಾಗಿದೆ.

ವೈದ್ಯಕೀಯ ಸೌಲಭ್ಯದಲ್ಲಿ ತಾಲ್ಲೂಕು ಅತ್ಯಂತ ಹಿಂದುಳಿದಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯ ಸೇವೆಗಳು ಇಲ್ಲಿಲ್ಲ. ಅದರಲ್ಲೂ ಮಕ್ಕಳ ತಜ್ಞರ ಕೊರತೆ ತೀವ್ರವಾಗಿದೆ. ಆಷಾಢದ ನಂತರ ವಾತಾವರಣ ಬದಲಾವಣೆಯಲ್ಲಿ ಈ ರೋಗ ಲಕ್ಷಣಗಳು ಸಾಮಾನ್ಯವಾಗಿದ್ದರೂ ಕೋವಿಡ್ ಭೀತಿಯ ಪರಿಣಾಮ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳನ್ನು ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಇದರ ಮಧ್ಯೆ ಶಾಲೆಗಳು ಪುನರಾರಂಭವಾಗಿದ್ದು, ಮಕ್ಕಳ ಆರೋಗ್ಯ ಕಾಪಾಡುವುದು ಪೋಷಕರಿಗೆ ಮತ್ತು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈ ಹಿಂದೆ ಜಾರಿಯಲ್ಲಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದ ವಾತ್ಸಲ್ಯ ಕಾರ್ಯಕ್ರಮವನ್ನು ತುಸು ಮಾರ್ಪಾಡು ಮಾಡಿದೆ. ‘ಆರೋಗ್ಯ ನಂದನ’ ಹೆಸರಿನಲ್ಲಿ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಂಡಿದೆ.

ತಾಲ್ಲೂಕಿನಲ್ಲಿ ಹೋಬಳಿಗೆ ಒಂದರಂತೆ ಎರಡು ವೈದ್ಯಕೀಯ ತಪಾಸಣೆ ತಂಡಗಳಿಗೆ 12,224 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಆ. 15ಕ್ಕೆ ಆರಂಭವಾಗಿರುವ ಆರೋಗ್ಯ ನಂದನ ಯೋಜನೆ ಸೆ. 15ಕ್ಕೆ ಮುಕ್ತಾಯವಾಗಲಿದೆ. ಎಲ್ಲ ಸರ್ಕಾರಿ, ಖಾಸಗಿ ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮತ್ತು ಸೋಂಕಿನ ಲಕ್ಷಣ ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

‘ಮಕ್ಕಳ ಮೂಲಕ ಪೋಷಕರು ಹಾಗೂ ಮನೆಯಲ್ಲಿರುವ ಇತರರು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆಯೂ ವರದಿ ಸಂಗ್ರಹಿಸಲಾಗುತ್ತಿದೆ. 340 ಮಕ್ಕಳ ಗಂಟಲು ಮತ್ತು ಮೂಗಿನ ಮಾದರಿ ಪರೀಕ್ಷೆ ಮಾಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಧಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT