ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರ: ಮಳೆ ಕೊರತೆಯಿಂದಾಗಿ ಒಣಗುತ್ತಿದೆ ಸಾವೆ

Published 8 ಆಗಸ್ಟ್ 2024, 6:40 IST
Last Updated 8 ಆಗಸ್ಟ್ 2024, 6:40 IST
ಅಕ್ಷರ ಗಾತ್ರ

ಧರ್ಮಪುರ: ಹೋಬಳಿಯಲ್ಲಿ 425 ಹೆಕ್ಟೇರ್‌ ಪ್ರದೇಶದಲ್ಲಿ ಸಾವೆ ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದಾಗಿ ಬೆಳೆ ಒಣಗುತ್ತಿದೆ. ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಇಲ್ಲಿನ ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲಿ ರೈತರು ಹೆಚ್ಚಾಗಿ ಶೇಂಗಾ ಬಿತ್ತನೆ ಮಾಡುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಶೇಂಗಾಕ್ಕೆ ಪರ್ಯಾಯವಾಗಿ ಅಕ್ಕಡಿ ಬೆಳೆಗಳಿಗೆ ಸೀಮಿತವಾಗಿದ್ದ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ. ಸಿರಿ ಧಾನ್ಯಗಳಲ್ಲಿ ಒಂದಾದ ಸಾವೆ ಈ ಬಾರಿ ಧರ್ಮಪುರ ಹೋಬಳಿಯಲ್ಲಿ ಹೆಚ್ಚಾಗಿ ಬಿತ್ತನೆಯಾಗಿದೆ.

ಸಾವೆ ಬಿತ್ತನೆಯಾಗಿ ತಿಂಗಳು ಕಳೆದಿದೆ. ಬಿತ್ತನೆ ಮಾಡುವಾಗ ಬಂದಿದ್ದ ಮಳೆ ಈವರೆಗೂ ಬಂದಿಲ್ಲದಿರುವುದರಿಂದ ಸಾವೆ ಸಂಪೂರ್ಣ ಒಣಗುತ್ತಿದೆ. ರಂಗೇನಹಳ್ಳಿ, ಶಿಡ್ಲಯ್ಯನಕೋಟೆ, ಈಶ್ವರಗೆರೆ, ಗೂಳ್ಯ, ವೇಣುಕಲ್ಲುಗುಡ್ಡ, ಖಂಡೇನಹಳ್ಳಿ, ಹಲಗಲದ್ದಿ, ಹರಿಯಬ್ಬೆ ಭಾಗಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಾವೆ ಬಿತ್ತನೆ ಮಾಡಿದ್ದಾರೆ.

ಹೋಬಳಿಯಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬಂದಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಈಗ ಬಿತ್ತನೆಯಾಗಿರುವ ಶೇಂಗಾ, ಸಿರಿಧಾನ್ಯಗಳು ಒಣಗುತ್ತಿರುವುದರಿಂದ ಜಾನುವಾರುಗಳಿಗೆ ಬೇಕಾಗುವ ಮೇವು ಸಹ ಸಿಗುವುದಿಲ್ಲ. ಜಾನುವಾರುಗಳ ನಿರ್ವಹಣೆ ಕಷ್ಟವಾಗುತ್ತದೆ ಎಂದು ರಂಗೇನಹಳ್ಳಿಯ ರೈತ ಚಿಕ್ಕತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.

ಹೋಬಳಿಯಲ್ಲಿ ಮಳೆಯಾಶ್ರಿತ ಶೇಂಗಾ ಮುಖ್ಯ ಬೆಳೆಯಾಗಿದೆ. ಕಡಿಮೆ ಖರ್ಚಿನ ಸಾವೆಯನ್ನು ಪರ್ಯಾಯವಾಗಿ ಬೆಳೆಯಬಹುದು ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಕಳೆದ ವರ್ಷ ಬಿತ್ತನೆ ಮಾಡಿದ್ದೆವು. 1 ಕ್ವಿಂಟಲ್ ಸಾವೆಗೆ ₹ 6,000 ಬೆಲೆ ಸಿಕ್ಕಿದ್ದರಿಂದ ಉತ್ತಮ ಆದಾಯವೂ ಬಂದಿತ್ತು. ಈ ವರ್ಷ ಹೆಚ್ಚಾಗಿ ಸಾವೆ ಬಿತ್ತನೆ ಮಾಡಲಾಗಿತ್ತು. ಮಳೆ ಕೈಕೊಟ್ಟಿರುವುದರಿಂದ ಬಿತ್ತನೆಗೆ ಮಾಡಿರುವ ಖರ್ಚು ಸಹ ಬರುವುದಿಲ್ಲ’ ಎಂದು ವೇಣುಕಲ್ಲುಗುಡ್ಡದ ಹನುಮಂತರಾಯ ಆತಂಕ ವ್ಯಕ್ತಪಡಿಸಿದರು.

ಧರ್ಮಪುರದಲ್ಲೇ ಹೆಚ್ಚು ಸಾವೆ

ಹಿರಿಯೂರು ತಾಲ್ಲೂಕಿನಲ್ಲಿ 683 ಹೆಕ್ಟೇರ್ ಪ್ರದೇಶದಲ್ಲಿ ಸಾವೆ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಹೆಚ್ಚಾಗಿ ಧರ್ಮಪುರ ಹೋಬಳಿಯಲ್ಲಿ ಬಿತ್ತನೆ ಮಾಡಲಾಗಿದೆ. ಸಾವೆ ಬಿತ್ತನೆ ಮಾಡಿ ತಿಂಗಳು ಕಳೆದಿದೆ. ಸಾವೆ ಮೂರು ತಿಂಗಳ ಬೆಳೆಯಾಗಿದ್ದು ಈಗ ಕಾಳು ಕಟ್ಟುವ ಸಮಯ. ಮಳೆ ಬೇಕಿತ್ತು. ಮಳೆಯಾಗದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕೃಷಿ ಅಧಿಕಾರಿ ಎಂ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT