ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ (ಬೇಸಿಗೆ ಬೆಳೆ) ನಾಟಿ ಮಾಡಿರುವ ಈರುಳ್ಳಿ ಕೊಳೆ ರೋಗಕ್ಕೆ ತುತ್ತಾಗಿದ್ದು, ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.
ತಾಲ್ಲೂಕಿನಲ್ಲಿ ಈರುಳ್ಳಿ ನೀರಾವರಿ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ. 3–4 ವರ್ಷಗಳಿಂದ ನೀರಿನ ಕೊರತೆ, ಬೆಳೆ, ಬೆಲೆ ನಷ್ಟಕ್ಕೆ ಒಳಗಾಗಿ ರೈತರು ಸಹವಾಸ ಬೇಡ ಎಂದು ದೂರವಾಗಿದ್ದರು. ಹಿಂದಿನ ವರ್ಷಗಳಲ್ಲಿ ತಾಲ್ಲೂಕಿನಲ್ಲಿ 650–700 ಹೆಕ್ಟೇರ್‌ಗಳಷ್ಟು ವಿಸ್ತೀರ್ಣದಲ್ಲಿ ಈರುಳ್ಳಿ ನಾಟಿ ಮಾಡಲಾಗುತ್ತಿತ್ತು. ಕಳೆದ ವರ್ಷ 150 ಹೆಕ್ಟೇರ್‌ಗೆ ಕುಸಿತವಾಗಿತ್ತು. ಕಳೆದ ವರ್ಷ ಹೆಚ್ಚು ದರಕ್ಕೆ ಮಾರಾಟವಾದ ಪರಿಣಾಮವಾಗಿ ಹಾಗೂ ಅಂತರ್ಜಲ ಮಟ್ಟ ಸುಧಾರಣೆಯಾಗಿರುವ ಕಾರಣಕ್ಕಾಗಿ ಈ ವರ್ಷ 340 ಹೆಕ್ಟೇರ್ ಪ್ರದೇಶದಲ್ಲಿ
ನಾಟಿ ಮಾಡಲಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದರು.
‘ಈ ವರ್ಷ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗಿ ಕೊಳೆ ರೋಗ ಕಾಣಿಸಿಕೊಂಡಿದೆ. ಕೆಲವೆಡೆ ರೋಗ ಹೆಚ್ಚಿನ ಪ್ರಮಾಣದಲ್ಲಿದೆ. ಇಲ್ಲಿ ಶೇ 50ಕ್ಕೂ ಹೆಚ್ಚು ಇಳುವರಿ ಕುಸಿತವಾಗುವ ಅಂದಾಜಿದೆ. ಅಲ್ಲಲ್ಲಿ ಕಟಾವು ಆರಂಭವಾಗಿದ್ದು, ಶೇ 25ರಷ್ಟು ಕಟಾವು ಮುಗಿದಿದೆ. 20–25 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಸದ್ಯ ದರ ಕಡಿಮೆಯಿದ್ದು, ಎಲ್ಲ ಕಡೆ ಇದೇ ಸಮಸ್ಯೆ ಇರುವ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ಆರ್.ವಿರೂಪಾಕ್ಷಪ್ಪ ಹೇಳಿದರು.
ಈರುಳ್ಳಿ ವ್ಯಾಪಾರಿ ಕೋನಸಾಗರದ ಶಿವಪ್ರಕಾಶ್ ಮಾತನಾಡಿ, ‘ಕೊಳೆ ರೋಗಕ್ಕೆ ಒಳಗಾಗಿ ಗಡ್ಡೆಗಳು ಕೊಳೆತು ಹೋಗಿವೆ. 100 ಚೀಲಗಳಷ್ಟು ಈರುಳ್ಳಿ ಸ್ವಚ್ಛ ಮಾಡಿದರೆ 20 ಚೀಲ ದೊರೆಯುತ್ತದೆ. ಇದನ್ನು ಮಾರುಕಟ್ಟೆಗೆ ಕಳಿಸಿದಲ್ಲಿ ಅಲ್ಲಿ ಮತ್ತೆ ಸ್ವಚ್ಛ ಮಾಡಿಕೊಂಡು ಬನ್ನಿ
ಎನ್ನುತ್ತಾರೆ. ಗ್ರಹಚಾರ ಕೆಟ್ಟಲ್ಲಿ ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ದರ ಚೆನ್ನಾಗಿ ಇದ್ದಾಗ ಪ್ರತಿ ಕ್ವಿಂಟಲ್‌ಗೆ 1,100–1,200 ಕೊಟ್ಟು ಖರೀದಿ ಮಾಡಿದ್ದೆವು. ಈಗ ಇದನ್ನು ₹250 ₹800ಕ್ಕೆ ಮಾರಾಟ ಮಾಡಬೇಕಿದೆ. ಹಮಾಲಿ, ಲಾರಿ ಬಾಡಿಗೆ ಸಹ ವಾಪಸ್ಸಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.
‘ಕಡಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡಲೆ ಇಲ್ಲ ಎಂಬ ಗಾದೆಯಂತಾಗಿದೆ ತಾಲ್ಲೂಕಿನ ಈರುಳ್ಳಿ ಬೆಳೆಗಾರರ ಸ್ಥಿತಿ. ಹಲವು ವರ್ಷಗಳಿಂದ ಬೆಳೆ ಇದ್ದಾಗ ದರ ದೊರೆಯುತ್ತಿಲ್ಲ. ದರವಿದ್ದಾಗ ಇಲ್ಲಿ ಬೆಳೆ ಇರುವುದಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮಾರ್ಗದರ್ಶನ ಅಗತ್ಯವಿದೆ’ ಎಂದು ಅವರು ಹೇಳಿದರು.
ಸತತ ನಷ್ಟವಾಗುತ್ತಿದ್ದರೂ ಈರುಳ್ಳಿ ಬೆಳೆಗಾರರಿಗೆ ವಿಮೆ ಸೌಲಭ್ಯ, ಸರ್ಕಾರದ ಪರಿಹಾರ ದೊರೆಯುತ್ತಿಲ್ಲ. ತಾಲ್ಲೂಕಿನಲ್ಲಿ ಆಗುತ್ತಿರುವ ನಷ್ಟದ ಮಾಹಿತಿ ಸರ್ಕಾರಕ್ಕೆ ಮುಟ್ಟುತ್ತಿಲ್ಲ ಎಂದು ಅನುಮಾನ ಮೂಡಿದೆ.
- ತಿಪ್ಪೇಸ್ವಾಮಿ, ಬೆಳೆಗಾರ, ಕೋನಸಾಗ<
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.