ಬುಧವಾರ, ಮಾರ್ಚ್ 29, 2023
27 °C
ಮನೆಯಂಗಳದಲ್ಲಿ ಪುಟ್ಟ ಹಣತೆಗಳನ್ನು ಸಾಲು ಸಾಲಾಗಿ ಹಚ್ಚಿ ಹಬ್ಬ ಆಚರಿಸಿದ ಪುಟಾಣಿಗಳು

ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಾನು ಕೆಂಪೇರುತ್ತಿದ್ದಂತೆ ಮಕ್ಕಳು ಪಟಾಕಿಗಳನ್ನು ಹಚ್ಚಲು ಉತ್ಸುಕರಾದರು. ಮನೆಯ ಮುಂಭಾಗ, ಖಾಲಿ ಜಾಗಗಳಲ್ಲಿ ಸುರ್‌ ಸುರ್‌ ಬತ್ತಿ, ಮಸಿ ಕುಡಿಕೆ, ಭೂಚಕ್ರ ಹಚ್ಚಿ ಸಂಭ್ರಮಿಸಿದರು. ವಿವಿಧ ಬಗೆಯ ಪಟಾಕಿಗಳನ್ನು ಹಚ್ಚಿ ಕತ್ತಲೆಯಲ್ಲಿ ಬೆಳಕಿನ ಚಿತ್ತಾರ ಮೂಡಿಸಿದರು. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿ ಹಬ್ಬವನ್ನು ಜಿಲ್ಲೆಯ ಜನರು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.

ಕೋವಿಡ್‌ ಕಾರಣಕ್ಕೆ ಹಿಂದಿನ ವರ್ಷ ಕಳೆಗುಂದಿದ್ದ ದೀಪಾವಳಿ ಈ ಬಾರಿ ಕಳೆಗಟ್ಟಿತು. ಜಿಲ್ಲೆಯಾದ್ಯಂತ ಅನೇಕರು ದೀಪಾವಳಿ ಹಬ್ಬವನ್ನು ಸಂತೋಷ, ಸಂಭ್ರಮದಿಂದ ಆಚರಿಸಿದರು. ಬಲಿಪಾಡ್ಯಮಿ ದಿನ ಆಚರಿಸಿದವರ ಸಂಖ್ಯೆ ಹೆಚ್ಚಾಗಿ ಕಂಡುಬಂತು.

ಮನೆಯಂಗಳದಲ್ಲಿ ಪುಟ್ಟ ಹಣತೆಗಳನ್ನು ಸಾಲು ಸಾಲಾಗಿ ಹಚ್ಚಿದರು. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಎತ್ತ ನೋಡಿದರತ್ತ ದೀಪಗಳೇ ಮಿನುಗತೊಡಗಿದವು.

ನಗರ ವ್ಯಾಪ್ತಿಯ ಅನೇಕ ಮನೆಗಳ ಮುಂಭಾಗದಲ್ಲಿ ಆಕಾಶ ಬುಟ್ಟಿಗಳು ರಾರಾಜಿಸಿದವು. ಮುಖ್ಯ ರಸ್ತೆ ಮಾರ್ಗದ ಬಹುತೇಕ ಕಟ್ಟಡಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿದವು. ವರ್ಣಮಯ ದೀಪದ ಸರಮಾಲೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿ ಮುದ ನೀಡಿದವು. ಬೆಳಕಿನ ಮೋಡಿ ಮಕ್ಕಳ ಮೊಗವನ್ನು ಅರಳಿಸಿತು.

ಬಲಿಪಾಡ್ಯಮಿ ದಿನ ಮನೆಯ ಎದುರು ಹೆಂಗಳೆಯರು ರಂಗೋಲಿ ಬಿಡಿಸಿ, ವಿವಿಧ ಬಗೆಯ ಬಣ್ಣಗಳಿಂದ ಅಲಂಕರಿಸಿದ್ದರು. ವಿಶೇಷ ಪೂಜೆಗಾಗಿ ಮಂಟಪ ನಿರ್ಮಿಸಿ ಕಳಸ ಸ್ಥಾಪಿಸಿದರು. ದ್ವಾರ ಹಾಗೂ ದೇವರ ಬಾಗಿಲುಗಳಿಗೆ ಬಾಳೆಕಂದು, ಮಾವಿನ ತೋರಣ ಕಟ್ಟಿ, ಪುಷ್ಪಾಲಂಕಾರ ಮಾಡಿದರು.

ಲಕ್ಷ್ಮಿ, ಹಿರಿಯರ ಪೂಜೆ ವಿಶೇಷ: ಲಕ್ಷ್ಮಿದೇವಿ ಪೂಜೆ, ಕುಬೇರ ಪೂಜೆ, ಕುಲದೇವತೆ ಪೂಜೆ, ಹಿರಿಯರ ಪೂಜೆಗಾಗಿ ನೈವೇದ್ಯ ಸಮರ್ಪಿಸಲು ಮನೆಗಳಲ್ಲಿ ತರಹೇವಾರಿ ಖಾದ್ಯಗಳನ್ನು ತಯಾರಿಸಲು ಮಧ್ಯಾಹ್ನದಿಂದಲೇ ಮಹಿಳೆಯರು ಮುಂದಾದರು.

ಹಿರಿಯರು, ಯುವಕರು ಸಗಣಿಯಲ್ಲಿ ಗಣಪತಿ, ಗೊಲ್ಲಮ್ಮ ದೇವಿಯನ್ನು ನಿರ್ಮಿಸಿ, ಕಾಚಿಕಡ್ಡಿ, ಬ್ರಹ್ಮದಂಡೆ ಗಿಡ, ತಂಗಟೆ ಹೂಗಳೊಂದಿಗೆ ಮನೆಯಲ್ಲಿರುವ ಬಾಗಿಲುಗಳ ಎರಡೂ ಬದಿಗಳಲ್ಲಿಟ್ಟು ಪೂಜೆಗೆ ಸಿದ್ಧತೆ ಮಾಡಿಕೊಂಡರು. ಸಂಜೆ ಆಗುತ್ತಿದ್ದಂತೆ ಹೂ, ಹಣ್ಣು ಸಮರ್ಪಣೆಯೊಂದಿಗೆ ಅನೇಕರ ಮನೆಗಳಲ್ಲಿ ಪೂಜೆಗಳು ನೆರವೇರಿದವು.

ಪಟಾಕಿ– ಹಿಂದಿನ ವರ್ಷಕ್ಕಿಂತ ಹೆಚ್ಚು: ಸುಪ್ರೀಂ ಕೋರ್ಟ್‌ ಹಾಗೂ ಸರ್ಕಾರ ಈ ಬಾರಿಯೂ ‘ಹಸಿರು ಪಟಾಕಿ’ಗಳಿಗೆ ಮಾತ್ರ ಅನುಮತಿ ನೀಡಿತ್ತು. ಆದರೂ ಹೆಚ್ಚು ಶಬ್ದ ಮಾಡುವಂಥ ಪಟಾಕಿಗಳನ್ನೂ ಹಲವೆಡೆ ಹಚ್ಚಲಾಯಿತು. ಈ ಮೂಲಕ ನಿಯಮ ಉಲ್ಲಂಘನೆಯಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.