ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ನಾಯಿ ಕಡಿತಕ್ಕೆ ಪರಿಹಾರ, ಮಾಹಿತಿಯೇ ಇಲ್ಲ!

ಮಿತಿ ಮೀರಿದ ಹಾವಳಿ; ಚಿತ್ರದುರ್ಗ ನಗರದಲ್ಲಿ ನವೆಂಬರ್‌ನಲ್ಲಿ 200 ಪ್ರಕರಣ ದಾಖಲು
Published 8 ಡಿಸೆಂಬರ್ 2023, 6:45 IST
Last Updated 8 ಡಿಸೆಂಬರ್ 2023, 6:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿ ಕಡಿತಕ್ಕೆ ಒಳಗಾದವರ ಸಂಖ್ಯೆ ಏರಿಕೆ ಕಾಣುತ್ತಿದೆ. ಈ ನಡುವೆ ನಾಯಿ ದಾಳಿಯಿಂದ ಗಾಯಗೊಂಡವರಿಗೆ ₹ 5,000 ಹಾಗೂ ಮೃತಪಟ್ಟವರಿಗೆ ₹ 5 ಲಕ್ಷ ಪರಿಹಾರ ನೀಡಬೇಕೆಂದು ಸರ್ಕಾರ ಆದೇಶಿಸಿದ್ದರೂ ಯಾರೊಬ್ಬರಿಗೂ ಪರಿಹಾರ ದೊರೆತಿಲ್ಲ.

ಹೈಕೋರ್ಟ್‌ ನಿರ್ದೇಶನದಂತೆ ಬೀದಿ ನಾಯಿ ಕಡಿತಕ್ಕೊಳಗಾಗುವವರ, ಸಂಬಂಧಿಸಿದ ದಾಖಲೆ ಪರಿಶೀಲನಾ ಮತ್ತು ಪರಿಹಾರ ವಿತರಿಸುವ ಸಮಿತಿ ರಚಿಸಿ ಪರಿಹಾರ ನೀಡುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ 2023ರ ಅಕ್ಟೋಬರ್‌ 30ರಂದು ಆದೇಶ ಜಾರಿಗೊಳಿಸಿದೆ. ಆದೇಶ ಜಾರಿಗೊಂಡ ಬಳಿಕ ಒಂದು ತಿಂಗಳು ಏಳು ದಿವಸಕ್ಕೆ ಚಿತ್ರದುರ್ಗ ನಗರದಲ್ಲಿ 200 ಜನರು ನಾಯಿ ಕಡಿತಕ್ಕೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವರ್ಷ ಚಿತ್ರದುರ್ಗ ತಾಲ್ಲೂಕಿನಲ್ಲಿ ದಾಖಲಾದ 2,628 ನಾಯಿ ಕಡಿತ ಪ್ರಕರಣದಲ್ಲಿ 2,050 ನಗರದಲ್ಲಿ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಸರ್ಕಾರದ ಆದೇಶದಂತೆ ಬೀದಿ ನಾಯಿ ಕಡಿತಕ್ಕೆ ಪರಿಹಾರ ವಿತರಣೆ ಸಮಿತಿಗೆ ನಗರ ಸ್ಥಳೀಯ ಸಂಸ್ಥೆ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ತಾಲ್ಲೂಕು ಆರೋಗ್ಯ ಅಧಿಕಾರಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಹಾಗೂ ನಗರ ಸಂಸ್ಥೆ ಆರೋಗ್ಯ ಅಧಿಕಾರಿ ಸದಸ್ಯರಾಗಿರುತ್ತಾರೆ. ಆದರೆ, ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸಮಿತಿಯೇ ರಚನೆ ಆಗಿಲ್ಲ.

ಬೀದಿ ನಾಯಿ ಕಡಿತಕ್ಕೊಳಗಾದ ನಾಗರಿಕರಿಂದ ದೂರು ಸ್ವೀಕೃತವಾದ ಅಥವಾ ಘಟನೆ ಗಮನಕ್ಕೆ ಬಂದ 48 ಗಂಟೆಗಳಲ್ಲಿ ದಾಖಲೆ ಪರಿಶೀಲಿಸಿ ಸಮಿತಿ ಪರಿಹಾರ ವಿತರಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಪರಿಹಾರದ ಜತೆ ಚಿಕಿತ್ಸಾ ವೆಚ್ಚವನ್ನೂ ಪಾವತಿಸಬೇಕು. ಆದರೆ,  ಆದೇಶವಾಗಿ ತಿಂಗಳು ಕಳೆದರೂ ಈವರೆಗೆ ಒಬ್ಬರಿಗೂ ಪರಿಹಾರ ವಿತರಣೆ ಆಗಿಲ್ಲ.

2023ರ ಜನವರಿಯಿಂದ ಅಕ್ಟೋಬರ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ 9,756 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಚಿತ್ರದುರ್ಗ, ಚಳ್ಳಕೆರೆಯಲ್ಲಿ ಪ್ರಕರಣಗಳ ಸಂಖ್ಯೆ 2,000 ದಾಟಿದೆ. ಮೊಳಕಾಲ್ಮುರಿನಲ್ಲಿ 1,000 ಸನಿಹದಲ್ಲಿದೆ. 2018ರಲ್ಲಿ 5,492, 2019ರಲ್ಲಿ 7,723, 2020ರಲ್ಲಿ 6,778, 2021ರ ಜನವರಿಯಿಂದ 2022ರ ಮೇ ಅಂತ್ಯಕ್ಕೆ 11,739 ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. 

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಿಗದಷ್ಟು ಏರಿಕೆ ಕಾಣುತ್ತಿದೆ. ಯಾವ ಬೀದಿಯಲ್ಲಿ ನಾಯಿಗಳಿಲ್ಲ ಎಂದು ಹುಡುಕಿ ಓಡಾಡಬೇಕಾದ ಸ್ಥಿತಿ ಎದುರಾಗಿದೆ. ಅದಕ್ಕೆ ಬಹುತೇಕರು ಒಳಮಾರ್ಗಗಳ ಸಂಚಾರ ಕೈಬಿಟ್ಟು, ಬದಲಿ ಮಾರ್ಗ ಕಂಡುಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕುರಿಗಳ ಮೇಲೆ, ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸುತ್ತವೆ. ಅಡ್ಡಬರುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗುವ ಬೈಕ್‌ ಸವಾರ ಬಿದ್ದು ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಜಿಲ್ಲೆಯ ಒಂದಲ್ಲಾ ಒಂದು ಕಡೆ ನಿತ್ಯವೂ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

ನಗರದ ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಆಜಾದ್‌ ನಗರ, ಚೇಳುಗುಡ್ಡ, ಹೊಳಲ್ಕೆರೆ ರಸ್ತೆ, ಕೆಳಗೋಟೆ, ಬುರಜುನಹಟ್ಟಿ, ಜೆಸಿಆರ್‌ ಬಡಾವಣೆ, ಬ್ಯಾಂಕ್‌ ಕಾಲೊನಿ, ಐಯುಡಿಪಿ ಬಡಾವಣೆ, ಕಾಮನಬಾವಿ ಬಡಾವಣೆ, ಕೋಟೆ ಮುಖ್ಯರಸ್ತೆ ಸೇರಿ ನಗರದ ಎಲ್ಲ ಬಡಾವಣೆಗಳಲ್ಲೂ ಬೀದಿ ನಾಯಿಗಳು ಕಾರುಬಾರು ನಡೆಸುತ್ತಿವೆ.

ಗುಂಪಾಗಿ ಓಡಾಡುವ ನಾಯಿಗಳು ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸುತ್ತಿವೆ. ಇದಕ್ಕೆ ಡಿಸೆಂಬರ್ 3ರಂದು ಜೆಸಿಆರ್ ಬಡಾವಣೆಯಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿದ ಬೀದಿನಾಯಿಗಳು ಬರೋಬ್ಬರಿ 11 ಬಾರಿ ಕಚ್ಚಿ ಗಾಯಗೊಳಿಸಿರುವುದು ಸಾಕ್ಷಿಯಾಗಿದೆ.

ಈ ಎಲ್ಲ ಸಮಸ್ಯೆಗೆ ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವುದು ಒಂದೇ ಪರಿಹಾರವಾಗಿದೆ. ಇಲ್ಲವಾದರೆ ಪ್ರತಿ ತಿಂಗಳು ಲಕ್ಷಾಂತರ ಹಣವನ್ನು ಪರಿಹಾರಕ್ಕೆ ಮೀಸಲಿಡಬೇಕಾಗುತ್ತದೆ.

ಸಾರ್ವಜನಿಕರಿಗೆ ಜಾಗೃತಿ

ನಾಯಿಕಡಿತಕ್ಕೆ ನಗರಸಭೆ ಪರಿಹಾರ ನೀಡಲಿದೆ ಎಂಬ ಮಾಹಿತಿ ಬಹುತೇಕರಿಗೆ ಇಲ್ಲ. ಹಾಗಾಗಿ ನಾಯಿ ಕಡಿತ ಪ್ರಕರಣ ದಾಖಲಾದರೂ ಪರಿಹಾರಕ್ಕೆ ಯಾರು ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ ನಾಯಿಗಳ ನಿಯಂತ್ರಣದ ಜತೆಗೆ ಸಾರ್ವಜನಿಕ ಸ್ಥಳದಲ್ಲಿ ಪರಿಹಾರದ ಜಾಗೃತಿ ಮೂಡಿಸಲಾಗುತ್ತದೆ. ಜತೆಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ ಎನ್ನುತ್ತಾರೆ ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ.

ಸರ್ಕಾರದ ಆದೇಶದಂತೆ ಸಮಿತಿ ರಚಿಸಲಾಗಿದೆ. ನಗರಸಭೆ ಅನುದಾನದಿಂದ ಈವರೆಗೂ ನಾಯಿ ಕಡಿತಕ್ಕೊಳಗಾದವರಿಗೆ ಪರಿಹಾರ ವಿತರಿಸಿಲ್ಲ. ಅರ್ಜಿ ಸಲ್ಲಿಸಿದರೆ ವಿತರಿಸಲಾಗುತ್ತದೆ. ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
– ಎಂ.ರೇಣುಕಾ ಪೌರಾಯುಕ್ತ
ನಾಯಿ ಕಡಿತಕ್ಕೆ ಪರಿಹಾರ ಧನ ನೀಡುತ್ತಾರೆ ಎಂಬ ಮಾಹಿತಿ ಇಲ್ಲ. ಡಿ.3ರಂದು ನನ್ನ ಪುತ್ರನ ಮೇಲೆ ನಾಯಿದಾಳಿ ನಡೆಸಿ ಗಾಯಗೊಳಿಸಿತ್ತು. ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಮಗು ಗುಣಮುಖವಾಗುತ್ತಿದೆ.
–ದ್ವಾರಕನಾಥ್‌ ಜೆಸಿಆರ್‌ ನಿವಾಸಿ ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT