ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಹೆಸರಿಗಷ್ಟೇ ಆರ್‌ಒ ಘಟಕ; ನೀರು ಮಾತ್ರ ಕೇಳಬೇಡಿ

ಬೇಸಿಗೆ ಎದುರಾದರೂ ಬಗೆಹರಿಯದ ಸಮಸ್ಯೆ: ವಾಸ್ತವ ಸ್ಥಿತಿ ಭಿನ್ನ
Published 26 ಫೆಬ್ರುವರಿ 2024, 5:44 IST
Last Updated 26 ಫೆಬ್ರುವರಿ 2024, 5:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಶುದ್ಧ ಕುಡಿಯುವ ನೀರಿಗೆ ಜನರು ನಿತ್ಯ ಪರಿತಪಿಸುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಸಾವಿರ ಲೆಕ್ಕದಲ್ಲಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದು ಸಭೆಗಳ ಮಾಹಿತಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದ ಚಿತ್ರಣ ಬೇರೆಯೇ ಇದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಶುದ್ಧ ಜೀವ ಜಲಕ್ಕೆ ಖಾಸಗಿ ಘಟಕಗಳ ಮೊರೆ ಹೋಗುತ್ತಿದ್ದಾರೆ. ನಗರ ಪ್ರದೇಶ ಸೇರಿ ಗ್ರಾಮಗಳಲ್ಲಿನ ಆರ್‌ಒ ಪ್ಲಾಂಟ್‌ಗಳು ಉಸಿರು ನಿಲ್ಲಿಸಿವೆ. ಶುದ್ಧ ಕುಡಿಯುವ ನೀರು ಪೂರೈಸುವಂತೆ ಜನರು ಜನಪ್ರತಿನಿಧಿಗಳ ಬಳಿ ಅಂಗಲಾಚುವುದು ಸಾಮಾನ್ಯವಾಗಿದೆ. ಜನರ ಬೇಡಿಕೆ ಈಡೇರಿಸಲು ಘಟಕ ಪ್ರಾರಂಭಿಸಿದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಅವು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ.

ಜಿಲ್ಲೆಯ 189 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,265 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 1,113 ಕಡೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌), ನಿರ್ಮಿತಿ ಕೇಂದ್ರ, ಶಾಸಕರು, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸಹಕಾರ ಸಂಘಗಳ ನೆರವಿನಿಂದ ಘಟಕ ಸ್ಥಾಪನೆ ಮಾಡಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮಾಹಿತಿ ಪ್ರಕಾರ 1,017 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 96 ಘಟಕಗಳು ಸ್ಥಗಿತವಾಗಿವೆ. ಆದರೆ, ಅಧಿಕಾರಿಗಳ ಮಾಹಿತಿಗೂ ವಾಸ್ತವಕ್ಕೂ ಬಹಳ ವ್ಯತ್ಯಾಸ ಕಂಡು ಬರುತ್ತಿದೆ ಎನ್ನುತ್ತಾರೆ ನೀರಿನ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಸ್ಥರು.

ಘಟಕಗಳ ಮೇಲೆ ನಿಗಾ ವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸರ್ಕಾರ ಹೊಣೆಗಾರಿಕೆ ನೀಡಿದೆ. ಕೆಲ ತಿಂಗಳ ಹಿಂದೆ ಗ್ರಾಮೀಣ ಭಾಗದ ಆರ್‌ಒ ಘಟಕಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಹಾಗೂ ಏಜೆನ್ಸಿಗಳಿಗೆ ವಹಿಸಲಾಗಿದೆ.

ಘಟಕಗಳು ಪ್ರಾರಂಭವಾದ ಕೆಲವೇ ದಿನಗಳಿಗೆ ಸ್ಥಗಿತಗೊಳ್ಳುತ್ತಿವೆ. ನಿರ್ಮಾಣಕ್ಕೆ ಬಳಕೆ ಮಾಡುವ ಸಲಕರಣೆಗಳು ಕಳಪೆಯಾಗಿವೆ ಎಂಬ ದೂರಗಳು ಹೆಚ್ಚಾಗಿವೆ. ಬಹುತೇಕ ಘಟಕಗಳಲ್ಲಿ ಅಳವಡಿಸಿದ್ದ ಗಾಜಿನ ಬಾಗಿಲು ಮುರಿದು ಹೋಗಿವೆ. ವಿದ್ಯುತ್ ಸಂಪರ್ಕದ ವೈರ್‌ಗಳು ಕಿತ್ತು ಹೋಗಿವೆ. ನೀರು ಸರಬರಾಜಿನ ಪೈಪ್‌ಗಳು ಒಡೆದು ತುಂಡು ತುಂಡಾಗಿ ಬಿದ್ದಿವೆ. ದುರಸ್ತಿಯಿಲ್ಲದೇ ಕೆಲ ಘಟಕಗಳು ಪಾಳು ಬಿದ್ದಿವೆ. ನೀರಿನ ಘಟಕದ ದುರಸ್ತಿ ಬಗ್ಗೆ ಯಾರ ಗಮನಕ್ಕೆ ತರಬೇಕು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಗ್ರಾಮೀಣ ಪ್ರದೇಶ ಜನ.

ನೀರಿನಲ್ಲಿ ಕರಗುವ ಒಟ್ಟು ಲವಣಗಳ ಪ್ರಮಾಣದ (ಟಿಡಿಎಸ್‌) ಬಗ್ಗೆ ಜನರಲ್ಲಿರುವ ಅನುಮಾನ ಇನ್ನೂ ನಿವಾರಣೆಯಾಗಿಲ್ಲ. ಖನಿಜಯುಕ್ತ ನೀರಿನಲ್ಲಿ 200ರಿಂದ 500 ಟಿಡಿಎಸ್‌ ಪ್ರಮಾಣ ಇರಬೇಕು. ಘಟಕ ಉದ್ಘಾಟನೆಗೊಂಡ ಕೆಲ ದಿನ ಮಾತ್ರ ಯೋಗ್ಯ ನೀರು ಲಭ್ಯವಾಗುತ್ತದೆ. ಬಳಿಕ ಕೆಲವೆಡೆ 200ಕ್ಕೂ ಕಡಿಮೆ ಹಾಗೂ 500ಕ್ಕೂ ಹೆಚ್ಚು ಟಿಡಿಎಸ್‌ ಕಂಡುಬರುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಘಟಕಗಳ ದುರಸ್ತಿಗೆ ಹಣ ನೀರಿನಂತೆ ಖರ್ಚಾಗಿದೆ. ಪ್ರತಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಕೋಟಿ ಲೆಕ್ಕದಲ್ಲಿ ಅನುದಾನ ಜಿಲ್ಲೆಗೆ ಬರುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದ್ದ ಈ ಘಟಕಗಳೇ ಮುಖ್ಯ ಸಮಸ್ಯೆಯಾಗಿ ಪರಿಣಮಿಸಿವೆ.

ಖಾಸಗಿ ಸಂಸ್ಥೆಗಳು ಸ್ಥಾಪಿಸಿದ ಘಟಕಗಳು ಲಾಭದಾಯಕವಾಗಿವೆ. ಆದರೆ, ಸರ್ಕಾರಿ ನಿರ್ವಹಣೆಯಲ್ಲಿರುವ ಘಟಕಗಳು ಮಾತ್ರ ನಷ್ಟದಲ್ಲಿವೆ. ಇದು ಜನಪ್ರತಿನಿಧಿಗಳಿಗೂ ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ. ಇದರಿಂದಾಗಿ ಜನರು ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ದುರಸ್ತಿ ಕಾಣದ ಶುದ್ಧ ಕುಡಿಯುವ ನೀರಿನ ಘಟಕ
ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ದುರಸ್ತಿ ಕಾಣದ ಶುದ್ಧ ಕುಡಿಯುವ ನೀರಿನ ಘಟಕ
ಸಕ್ಕರ ಗ್ರಾಮದಲ್ಲಿ ದುರಸ್ತಿಗೆ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ
ಸಕ್ಕರ ಗ್ರಾಮದಲ್ಲಿ ದುರಸ್ತಿಗೆ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ

ನಗರದಲ್ಲಿ ಬಹುತೇಕ ಸ್ಥಗಿತ

ಚಿತ್ರದುರ್ಗ ನಗರದ 35 ವಾರ್ಡ್‌ಗಳಲ್ಲಿ 19 ಆರ್‌ಒ ಪ್ಲಾಂಟ್‌ ಅಳವಡಿಸಲಾಗಿದೆ. ಆದರೆ ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕೇವಲ ಮೂರು ಮಾತ್ರ. ನಗರದ 29 ವಾರ್ಡ್‌ಗೆ ಶಾಂತಿ ಸಾಗರ ಹಾಗೂ 6 ವಾರ್ಡ್‌ಗೆ ವಾಣಿ ವಿಲಾಸ ಸಾಗರದ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಪ್ರಾರಂಭದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಇಷ್ಟು ವರ್ಷ ಆರ್‌ಒ ಪ್ಲಾಂಟ್‌ ನೀರಿಗೆ ಒಗ್ಗಿಕೊಂಡಿರುವ ಜನರು ನಗರಸಭೆ ಪೂರೈಸುವ ನೀರನ್ನು ಕುಡಿಯಲು ಸಿದ್ಧರಿಲ್ಲ. ಅಲ್ಲದೇ ನಗರಸಭೆ ಪೂರೈಸುವ ನೀರು ಕುಡಿಯಲು ಯೋಗ್ಯವಾಗಿದೆಯೇ ಎಂಬ ಅನುಮಾನ ದಟ್ಟವಾಗಿದೆ. ಇನ್ನೂ ಶಾಲೆ–ಕಾಲೇಜುಗಳಲ್ಲಿ ಅಳವಡಿಸಿರುವ ಘಟಕಗಳು ಸಹ ಸುಸ್ಥಿತಿಯಲ್ಲಿಲ್ಲ.

ಚಿತ್ರದುರ್ಗ ನಗರದಲ್ಲಿ 16 ಆರ್‌ಒ ಘಟಕಗಳನ್ನು ಈಗಾಗಲೇ ದುರಸ್ತಿ ಮಾಡಿಸಲಾಗಿದೆ. ನಿರ್ವಹಣೆಗೆ ಟೆಂಡರ್‌ ಕರೆಯಲಾಗಿದೆ. ಮಾರ್ಚ್‌ ಮೊದಲ ವಾರದಿಂದ ಬಹುತೇಕ ಘಟಕಗಳು ಕಾರ್ಯ ನಿರ್ವಹಿಸಲಿವೆ. ಶುದ್ಧ ನೀರಿಗೆ ಕ್ರಮವಹಿಸಲಾಗಿದೆ
–ಎಂ.ರೇಣುಕಾ, ಪೌರಾಯುಕ್ತೆ
ಬುದ್ಧ ನಗರದಲ್ಲಿ ಘಟಕ ಸ್ಥಗಿತವಾಗಿ ಎಂಟು ತಿಂಗಳಾಗಿದೆ. ಶುದ್ಧ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ. ಅನಿವಾರ್ಯವಾಗಿ ಖಾಸಗಿ ಪ್ಲಾಂಟ್‌ಗಳಿಗೆ ಹೋಗಬೇಕಿದೆ. ಬೇಸಿಗೆ ಹೆಚ್ಚಾಗುವ ಮುನ್ನ ಸಮಸ್ಯೆ ಬಗೆಹರಿಸಿ.
–ಬಸವರಾಜಪ್ಪ, ನಿವಾಸಿ ಬುದ್ಧನಗರ
ಸಕ್ಕರ ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆ ಇದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗುವುದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದ್ದು ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು
–ಲಕ್ಷ್ಮಿ, ಸಕ್ಕರ ಗ್ರಾಮ
ಗೊಲ್ಲರಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ ಜನರಿಗೆ ತೀವ್ರ ಸಮಸ್ಯೆಯಾಗಿದೆ. ನಿತ್ಯ ಎರಡು ಕಿ.ಮೀ. ದೂರದಿಂದ ನೀರು ತರಲು ಆಗುತ್ತಿಲ್ಲ. ಅದಕ್ಕಾಗಿ ಸಕ್ಕರ ಗೊಲ್ಲರಹಟ್ಟಿಯಲ್ಲಿ ನೀರಿನ ಘಟಕ ಪ್ರಾರಂಭಿಸಿ
–ಗಿರಿಜಮ್ಮ, ಗೊಲ್ಲರಹಟ್ಟಿ

ದೂರವಾದ ಶುದ್ಧ ಕುಡಿಯುವ ನೀರು

ನಾಯಕನಹಟ್ಟಿ: ಪಟ್ಟಣ ಸೇರಿದಂತೆ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೀರು ಪೂರೈಕೆ ಮಾಡಲು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿಗೆ ಹರಸಾಹಸ ಪಡುತ್ತಿದ್ದಾರೆ.

16 ವಾರ್ಡ್‌ ಹಾಗೂ 15500ಕ್ಕೂ ಹೆಚ್ಚು ಜನಸಂಖ್ಯೆ ಇರುವ ನಾಯಕನಹಟ್ಟಿ ಪಟ್ಟಣಕ್ಕೆ ಜಲಮೂಲವಾದ ಚಿಕ್ಕಕೆರೆ ಬತ್ತಿಹೋಗಿದೆ. ಆದ್ದರಿಂದ ನೀರಿಗೆ ಹಾಹಾಕಾರ ಎದುರಾಗಿದೆ. ಪಟ್ಟಣದ 567ನೇ ವಾರ್ಡ್‌ಗಳ ಜನ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ.

ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಇರುವ 77ಕೊಳವೆ ಬಾವಿಗಳಲ್ಲಿ 19 ಬತ್ತಿ ಹೋಗಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಸೊರಗಿವೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ 5 ಘಟಕಗಳಲ್ಲಿ 2 ಮಾತ್ರ ಕಾರ್ಯನಿರ್ವಹಿಸುತ್ತಿವೆ. 5 ಘಟಕಗಳ ನಿರ್ಮಾಣ ಕಾಮಗಾರಿ 2 ವರ್ಷಗಳಿಂದ ಕುಂಟುತ್ತಾ ಸಾಗಿದೆ.

ಹಟ್ಟಿ ಮಲ್ಲಪ್ಪನಾಯಕ ವೃತ್ತದಲ್ಲಿರುವ ಘಟಕ 2 ವರ್ಷಗಳ ಹಿಂದೆ ಕೆಟ್ಟಿದ್ದು ಈವರೆಗೂ ದುರಸ್ಥಿ ಕಂಡಿಲ್ಲ. ಇದರಿಂದ ಜನರು ಹನಿ ನೀರಿಗೂ ಪರದಾಡುವಂತಾಗಿದೆ. ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯ 7 ಗ್ರಾಮಗಳಿಗೆ 10 ಕೊಳವೆಬಾವಿಗಳಿವೆ.

ಅಬ್ಬೇನಹಳ್ಳಿ ಮತ್ತು ತೊರೆಕೋಲಮ್ಮನಹಳ್ಳಿ ಗ್ರಾಮಗಳಿಗೆ ನೀರಿನ ಕೊರತೆ ಹೆಚ್ಚಾಗಿದೆ. ಗಡಿಗ್ರಾಮ ಮುಸ್ಟಲಗುಮ್ಮಿ ನೀರಿನ ತೊಂದರೆ ಅನುಭವಿಸುತ್ತಿದೆ. 8 ಘಟಕಗಳಲ್ಲಿ 6 ದುರಸ್ಥಿಯಲ್ಲಿವೆ. ಮಲ್ಲೂರಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 7 ಗ್ರಾಮಗಳಿಗೆ 24 ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಮ್ಯಾಸರಹಟ್ಟಿ ಗ್ರಾಮಕ್ಕೆ ನೀರಿನ ತೊಂದರೆಯಿದೆ.

ಮ್ಯಾಸರಹಟ್ಟಿ ಮತ್ತು ರೇಖಲಗೆರೆ ಗ್ರಾಮಕ್ಕೆ ಶುದ್ಧ ನೀರು ದೂರದ ಮಾತಾಗಿದೆ. ತಿಮ್ಮಪ್ಪಯ್ಯನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆರೆಗಳೂ ಬತ್ತಿಹೋಗಿವೆ. ಗಜ್ಜುಗಾನಹಳ್ಳಿಯಲ್ಲಿ 3 ಕೊಳವೆ ಬಾವಿಗಳಿದ್ದು ಎರಡರಲ್ಲಿ ಸ್ವಲ್ಪ ನೀರು ಬರುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ದುರಸ್ಥಿಯಲ್ಲಿದೆ.

ಎನ್‌.ದೇವರಹಳ್ಳಿ ವ್ಯಾಪ್ತಿಯಲ್ಲಿ ತಿಪ್ಪಯ್ಯನಕೋಟೆ ಮಾರಯ್ಯನಹಟ್ಟಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರವಿದ್ದರೂ ಇರುವ ನೀರಿನಲ್ಲೇ ವ್ಯವಸ್ಥಿತವಾಗಿ ಸರಬರಾಜು ಮಾಡಲಾಗುತ್ತಿದೆ. ಇನ್ನೂ ಎನ್‌.ಮಹದೇವಪುರ ಪಂಚಾಯಿತಿಯಲ್ಲಿ ಕೊಳವೆಬಾವಿಗಳು ಬತ್ತುತ್ತಿವೆ. ಭೀಮನಕೆರೆ ದಾಸರಗಿಡ್ಡಯ್ಯನಹಟ್ಟಿಯಲ್ಲಿ ನೀರಿನ ಕೊರತೆಯಿದೆ.

ನೇರಲಗುಂಟೆ ಗ್ರಾಮದ ಅಂಬೇಡ್ಕರ್ ಕಾಲೊನಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ 2ವರ್ಷ ಕಳೆದರೂ ದುರಸ್ಥಿ ಭಾಗ್ಯ ಕಂಡಿಲ್ಲ. ಅಷ್ಟೆ ಅಲ್ಲದೆ ಈ ಭಾಗದ 8 ಘಟಕಗಳು ಬಹುತೇಕ ದುರಸ್ಥಿಯಲ್ಲಿವೆ. ಜೋಗಿಹಟ್ಟಿ ಮತ್ತು ತಳಕಿನ ಕಪಿಲೆ ಜನವಸತಿ ಪ್ರದೇಶಕ್ಕೆ ನೀರಿನ ಸಮಸ್ಯೆ ಇದೆ.

ನಿರ್ವಹಣೆ ಇಲ್ಲದೆ ಸ್ಥಗಿತ

ಚಿಕ್ಕಜಾಜೂರು: ಸರಿಯಾದ ನಿರ್ವಹಣೆ ಇಲ್ಲದೆ ಶುದ್ಧ ನೀರಿನ ಘಟಕಗಳು ಕಳೆದ ಎರಡು ಮೂರು ವರ್ಷಗಳಿಂದ ಸ್ಥಗಿತವಾಗಿ ಜನರು ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಿ. ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಕೆಲ ವರ್ಷಗಳ ಹಿಂದೆ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿತ್ತು. ಆದರೆ ಇವುಗಳ ನಿರ್ವಹಣೆ ಸರಿಯಾದ ರೀತಿ ಆಗದ ಕಾರಣ ಶುದ್ಧೀಕರಣ ಘಟಕಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ.

ಕೆಲವು ಕಡೆಗಳಲ್ಲಿ ಕೊಳವೆ ಬಾವಿಯ ನೀರು ಇದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮತ್ತೆ ಕೆಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿಲ್ಲದೆ ಸ್ಥಗಿತಗೊಂಡಿವೆ. ಜತೆಗೆ ನಿರ್ವಹಣೆ ಇಲ್ಲದೆ ಘಟಕದಲ್ಲಿನ ಯಂತ್ರಗಳು ಕೆಟ್ಟುಹೋಗಿವೆ. ಈ ಎಲ್ಲದರ ಪರಿಣಾಮ ಗ್ರಾಮಗಳ ಜನರು ಬೇರೆ ಊರುಗಳಿಗೆ ಹೋಗಿ ಅಲ್ಲಿನ ಶುದ್ಧೀಕರಣ ಘಟಕಗಳಿಂದ ನೀರನ್ನು ಹೊತ್ತು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮತ್ತೆ ಕೆಲವರು ಬೆಳಿಗ್ಗೆ ಅಥವಾ ಸಂಜೆ ಬೇರೆ ಊರುಗಳಿಂದ ಶುದ್ಧೀಕರಿಸಿದ ನೀರನ್ನು ಹೊತ್ತು ತರುವ ಟ್ಯಾಂಕರ್‌ಗಳಿಗೆ ಕಾಯುವ ಸ್ಥಿತಿ ಸಾಮಾನ್ಯವಾಗಿದೆ.

ಚಿಕ್ಕಜಾಜೂರಿನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಶುದ್ಧೀಕರಣ ಘಟಕ ಸ್ಥಗಿತಗೊಂಡು ಮೂರು ವರ್ಷ ಕಳೆದಿದೆ. ಅದೇ ರೀತಿ ಪರಿಶಿಷ್ಟ ಕಾಲೊನಿಯ ಶುದ್ಧೀಕರಣ ಘಟಕವೂ ಸ್ಥಗಿತವಾಗಿದೆ. ಇದರಿಂದಾಗಿ ಈ ಭಾಗಗಳ ಜನರು ಅನಿವಾರ್ಯವಾಗಿ ಹೊಸನಗರ ಬಡಾವಣೆಗೆ ಹೋಗುವಂತಾಗಿದೆ. ತಕ್ಷಣವೇ ಶುದ್ಧ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಸರಿಯಾಗಿ ನಿರ್ವಹಣೆ ಮಾಡುವವರನ್ನು ನೇಮಕ ಮಾಡಬೇಕು. ಈ ಮೂಲಕ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ.

ಕುಡಿಯುವ ನೀರಿಗೆ ಬರ ಆರಂಭ

ಧರ್ಮಪುರ: ಹೋಬಳಿಯ ಹತ್ತು ಗ್ರಾಮ ಪಂಚಾಯಿತಿಗಳಲ್ಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಹೋಬಳಿಯ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಈಗ ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಅಂತರ್ಜಲ ಬತ್ತಿ ಹೋಗಿದ್ದು ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.

ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಕ್ಕರ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾದ ದಿನದಿಂದ ಸಮಸ್ಯೆ ಎದುರಿಸುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗೊಲ್ಲರಹಟ್ಟಿ ಮತ್ತು ಎ.ಕೆ.ಕಾಲೊನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ. ಇದರಿಂದ ನಿತ್ಯ ಎರಡು ಮೂರು ಕಿ.ಮೀ.ಸಾಗಿ ನೀರು ತರಬೇಕಾದ ಅನಿವಾರ್ಯತೆ ಶುರುವಾಗಿದೆ. ಅದಕ್ಕಾಗಿ ಅಂತಹ ಪ್ರದೇಶದಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು ಎಂಬುದು ನಾಗರಿಕರ ಆಗ್ರಹ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT