ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: ಕೆಲ ಗ್ರಾಮಗಳಲ್ಲಿ ನೀರಿಗೆ ಪರದಾಟ

ಧರ್ಮಪುರ: ಕೊಳವೆ ಬಾವಿಗಳಲ್ಲಿ ಕಡಿಮೆಯಾದ ಒರತೆ
Published 12 ಏಪ್ರಿಲ್ 2024, 6:38 IST
Last Updated 12 ಏಪ್ರಿಲ್ 2024, 6:38 IST
ಅಕ್ಷರ ಗಾತ್ರ

ಧರ್ಮಪುರ: ಹೋಬಳಿ ವ್ಯಾಪ್ತಿಯ ಹತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತಹ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ಗ್ರಾಮಸ್ಥರು ಟ್ಯಾಂಕರ್ ನೀರಿಗೆ ಕಾಯುವ ಸ್ಥಿತಿ ಇದೆ.

ಹೊಸೂರು, ಹಲಗಲದ್ದಿ, ಬೆನಕನಹಳ್ಳಿ, ಹರಿಯಬ್ಬೆ ಪಾಳ್ಯ, ಮುಂಗುಸುವಳ್ಳಿ, ಗೊಲ್ಲಾಹಳ್ಳಿ, ಚಂದ್ರಗಿರಿ ಮತ್ತು ಹರಿಯಬ್ಬೆ,  ವೇಣುಕಲ್ಲುಗುಡ್ಡ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

‘ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಹೋಬಳಿ ವ್ಯಾಪ್ತಿಯ ಅಬ್ಬಿಹೊಳೆ, ವೇಣುಕಲ್ಲುಗುಡ್ಡ, ಮುಂಗುಸುವಳ್ಳಿ ಕೆರೆಗಳನ್ನು ಹೊರತುಪಡಿಸಿ ಉಳಿದ ಕೆರೆಗಳ ಕೋಡಿ ಹರಿದಿದ್ದವು. ಈವರೆಗೂ ಅಂತರ್ಜಲ ಕುಸಿತ ಕಂಡಿರಲಿಲ್ಲ. ಹದಿನೈದು ದಿನಗಳಿಂದ ನೀರಿನ ಒರತೆ ಕಡಿಮೆಯಾಗಿ ಕೆಲವು ಕೊಳವೆಬಾವಿಗಳು ಬತ್ತಿವೆ. ಇನ್ನು ಕುರಿ, ಮೇಕೆ, ಹಸು, ಎತ್ತು, ಎಮ್ಮೆಗಳಿಗೆ ಕುಡಿಯಲಿಕ್ಕೆ ಎಲ್ಲಿಯೂ ನೀರು ಸಿಗುತ್ತಿಲ್ಲ. ಇದರಿಂದ ಮೂಕ ಪ್ರಾಣಿಗಳನ್ನು ಉಳಿಸಿಕೊಳ್ಳುವುದೇ ನಮಗೆ ಚಿಂತೆಯಾಗಿದೆ’ ಎಂದು ಶ್ರವಣಗೆರೆ ಗೊಲ್ಲರಹಟ್ಟಿಯ ತಿಪ್ಪೇಸ್ವಾಮಿ ಹೇಳುತ್ತಾರೆ.

‘ಹರಿಯಬ್ಬೆ ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಅಜ್ಜಿಕಟ್ಟೆಯ ಕೊಳವೆ ಬಾವಿಯಲ್ಲೂ ನೀರು ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹರಿಯಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಉಲ್ಭಣಗೊಳ್ಳಲಿದೆ. ಇದಕ್ಕೆ ಪೂರಕವಾಗಿ ನೀರಿನ ಬವಣೆ ನೀಗಿಸಲು ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು. ರೈತರ ಕೊಳವೆ ಬಾವಿಗಳನ್ನು ಬಳಸಿಕೊಳ್ಳಲಾಗುವುದು’ ಎಂದು ಪಿಡಿಒ ವಿವೇಕ್ ತೇಜಸ್ವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶುದ್ಧ ನೀರು ಘಟಕ: ‘ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಕೆಲವು ಕಡೆ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿವೆ. ಕೆಲವು ಗೊಲ್ಲರಹಟ್ಟಿ ಮತ್ತು ಪರಿಶಿಷ್ಟ ಜಾತಿ ಕಾಲೊನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲದೆ ಎರಡು, ಮೂರು ಕಿ.ಮೀ. ದೂರದ ಘಟಕಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಇಂತಹ ಕಡೆ ಸ್ಥಳಿಯ ಆಡಳಿತ ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು’ ಎಂದು ಕೃಷ್ಣಾಪುರದ ನಿವಾಸಿ ಪ್ರಸಾದ್ ಒತ್ತಾಯಿಸಿದ್ದಾರೆ.

ಯುಗಾದಿಯನ್ನು ಸಂಭ್ರಮಿಸಲು ಕುಡಿಯುವ ನೀರಿನ ಸಮಸ್ಯೆ ಎದುರಾಯಿತು. ಟ್ಯಾಂಕರ್ ನೀರು ಬರುವುದನ್ನೇ ಕಾಯಬೇಕಾಯಿತು. ಗ್ರಾಮ ಪಂಚಾಯಿತಿಯವರು ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.

-ರುದ್ರಮ್ಮ, ರಂಗೇನಹಳ್ಳಿ ನಿವಾಸಿ

ವಿವಿ ಸಾಗರದ ನೀರು ಬಳಸಲು ಜಲಜೀವನ್ ಮಿಷನ್ ಯೋಜನೆಯಡಿ, ಮನೆ ಮನೆಗೆ ಗಂಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ. ಆ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿದರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಹೋಗಲಾಡಿಸಬಹುದು.

-ಎಚ್.ಪಾತೇಗೌಡ, ಕೃಷ್ಣಾಪುರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT