ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಸಾರ್ವಜನಿಕ ಆಸ್ಪತ್ರೆ: ಮೇಣದ ಬತ್ತಿ ಬೆಳಕಲ್ಲಿ ಚಿಕಿತ್ಸೆ!

ವಿದ್ಯುತ್ ಕಡಿತ; ಕೈಕೊಟ್ಟಿರುವ ಜನರೇಟರ್‌
Published 19 ಮೇ 2024, 6:28 IST
Last Updated 19 ಮೇ 2024, 6:28 IST
ಅಕ್ಷರ ಗಾತ್ರ

ಮೊಳಕಾಲ್ಮುರು: ವಿದ್ಯುತ್‌ ಕಡಿತದ ಸಮಸ್ಯೆಯಿಂದಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾರದಿಂದ ಮೇಣದ ಬತ್ತಿ ಬೆಳಕಿನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದೆ.

ಮೇಣದ ಬತ್ತಿ ಬೆಳಕಿನಡಿ ವೈದ್ಯರು ಚಿಕಿತ್ಸೆ ನೀಡುತ್ತಿರುವುದು, ರೋಗಿಗಳು ಮೊಬೈಲ್‌ ಟಾರ್ಚ್‌ ಆನ್‌ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘4-5 ದಿನಗಳಿಂದ ಮಳೆ ಬರುತ್ತಿದ್ದು, ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದಾಗಿ ವಾರ್ಡ್‌ಗಳಲ್ಲಿ ದಾಖಲಾಗಿರುವ ರೋಗಿಗಳು ಹಾಗೂ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿರುವವರ ಆರೈಕೆಗೆ ತೊಂದರೆಯಾಗುತ್ತಿದೆ. ಎಕ್ಸ್‌ರೇ ವಿಭಾಗದಲ್ಲೂ ಸಮಸ್ಯೆ ಎದುರಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ತಿಳಿಸಿದ್ದಾರೆ.

‘ವಿದ್ಯುತ್‌ ಕಡಿತದ ಕಾರಣ ಫ್ಯಾನ್‌ ಕಾರ್ಯನಿರ್ವಹಿಸುತ್ತಿಲ್ಲ. ಶೆಕೆ ಹೆಚ್ಚಾಗಿದ್ದು, ಅದರ ನಡುವೆಯೇ ಹೊರರೋಗಿಗಳಿಗೆ ಚಿಕಿತ್ಸೆ ನೀಡಬೇಕಿದೆ. ಸಂಜೆ, ರಾತ್ರಿ ವಿದ್ಯುತ್‌ ಕಡಿತವಾದಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಕೆಲಸ ಮಾಡಲು ಕಷ್ಟವಾಗುತ್ತಿದೆ’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ವೈರ್‌ಗಳು ಕೆಲವೆಡೆ ಹಾಳಾಗಿವೆ. ಹೀಗಾಗಿ ಒಂದೊಂದು ಕಡೆ ಸರಿಯಾಗಿ ವಿದ್ಯುತ್‌ ಸರಬರಾಜಾಗುತ್ತಿಲ್ಲ. ಜನರೇಟರ್‌ ಕೆಟ್ಟ ನಂತರ ಸಮಸ್ಯೆ ಬಿಗಡಾಯಿಸಿದೆ’ ಎಂದು ಶುಶ್ರೂಷಕಿಯೊಬ್ಬರು ತಿಳಿಸಿದರು.

‘ಆಸ್ಪತ್ರೆಯಲ್ಲಿದ್ದ ಜನರೇಟರ್‌ ದುರಸ್ತಿಯಲ್ಲಿದ್ದು, ರಿಪೇರಿ ಕಾರ್ಯ ನಡೆದಿದೆ. ಸ್ಥಳೀಯ ಮೆಕ್ಯಾನಿಕ್‌ಗಳಿಂದ ರಿಪೇರಿ ಮಾಡಲು ಆಗಿಲ್ಲ. ಆದ್ದರಿಂದ ದಾವಣಗೆರೆಯಿಂದ ಮೆಕ್ಯಾನಿಕ್‌ಗಳನ್ನು ಕರೆಸಲಾಗಿದೆ. ವಿದ್ಯುತ್‌ ಕಡಿತವಾದಾಗ ತುಸು ಸಮಸ್ಯೆಯಾಗುತ್ತದೆ. ಮೇಣದ ಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುವಷ್ಟು ಸಮಸ್ಯೆ ಎದುರಾಗಿಲ್ಲ’ ಎಂದು ಆಡಳಿತ ವೈದ್ಯಾಧಿಕಾರಿ ಮಂಜುನಾಥ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಕೆಲ ಸಿಬ್ಬಂದಿಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲ. ಆದ್ದರಿಂದ ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿ ಆಸ್ಪತ್ರೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಪ್ರತ್ಯೇಕ ವಿದ್ಯುತ್‌ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ. ಜನರೇಟರ್‌ ಅನ್ನು ಶೀಘ್ರ ದುರಸ್ತಿ ಮಾಡಿಸುತ್ತೇವೆ’ ಎಂದರು. 

ಪದೇ ಪದೇ ವಿದ್ಯುತ್‌ ಕಡಿತವಾಗುವ ಕಾರಣ ಜನರೇಟರ್‌ಗೆ ಹಾನಿಯಾಗಿದೆ. ಅದು ಸದ್ಯ ದುರಸ್ತಿಯಲ್ಲಿದೆ. ಕಂಪನಿಯವರು ಸೋಮವಾರ ಬಂದು ಸರಿಪಡಿಸುವುದಾಗಿ ಹೇಳಿದ್ದಾರೆ.
-ಅನಸೂಯಮ್ಮ, ಆಡಳಿತಾಧಿಕಾರಿ ಸಾರ್ವಜನಿಕ ಆಸ್ಪತ್ರೆ
ಆಸ್ಪತ್ರೆಯಲ್ಲಿನ ಸಮಸ್ಯೆ ಬಗ್ಗೆ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆಗಳ ಕುರಿತಾದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೊದಲು ನನ್ನ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇನೆ.
-ಎನ್.ವೈ. ಗೋಪಾಲಕೃಷ್ಣ, ಶಾಸಕ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT