ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲಿಕೆ ಉತ್ಸಾಹ ಉಳಿವಿಗೆ ಜ್ಞಾನವಿಕಾಸಕ್ಕೆ ಚಾಲನೆ

ತಾಲ್ಲೂಕಿನ ವಿದ್ಯಾರ್ಥಿಗಳ, ಪೋಷಕರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆ ಸಿದ್ಧ
Last Updated 12 ಜೂನ್ 2021, 5:07 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಕೋವಿಡ್ ಸೋಂಕು ಕಾರಣ ಶಾಲೆಗಳು ಮುಚ್ಚಿದ್ದು, ಪರಿಸ್ಥಿತಿ ಇನ್ನೂ ಮುಂದುವರಿದಲ್ಲಿ ಮಕ್ಕಳಲ್ಲಿ ಕಲಿಕಾ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಲು ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆ ‘ಜ್ಞಾನಸಿಂಚನ ಯೋಜನೆ’ಯನ್ನು ಜಾರಿಗೊಳಿಸಿದೆ.

ಈಗಾಗಲೇ ಎರಡು ಶೈಕ್ಷಣಿಕ ವರ್ಷಗಳು ಕೋವಿಡ್‌ಗೆ ಬಲಿಯಾಗಿವೆ. ಈ ವರ್ಷವೂ ನಿಗದಿತ ಸಮಯಕ್ಕೆ ಶಾಲೆಗಳು ಆರಂಭವಾಗಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಮಕ್ಕಳು ಶಿಕ್ಷಣದ ಹಳಿ ತಪ್ಪುತ್ತಿದ್ದಾರೆ. ಇದಕ್ಕಾಗಿ ಮರಳಿ ವಿದ್ಯಾರ್ಥಿಗಳನ್ನು ಹಳಿಗೆ ಮರಳಿಸುವ ಕಾರ್ಯಕ್ಕಾಗಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ತಾಲ್ಲೂಕಿನ ವಿದ್ಯಾರ್ಥಿಗಳ, ಪೋಷಕರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ಮಾಹಿತಿ ನೀಡಿ, ‘1-7 ನೇ ತರಗತಿ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ. ಮುಂದಿನ ದಿನಗಳಲ್ಲಿ ಜಾರಿ ಮಾಡಲಾಗುವ ಸೇತುಬಂಧಕ್ಕೆ ಪೂರಕವಾಗಿ ಇದನ್ನು ರೂಪಿಸಲಾಗಿದೆ. ವಿಷಯವಾರು 15 ದಿನಗಳ ತರಗತಿ ಆಧರಿಸಿ ಇಲಾಖೆಯ ಸ್ಥಳೀಯ ಅಧಿಕಾರಿಗಳ ತಂಡ ಇದನ್ನು ಸಿದ್ಧಪಡಿಸಿದೆ. ಇದನ್ನು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪ್ರತಿ ವಿಷಯಕ್ಕೆ ಪ್ರತ್ಯೇಕ ಲಿಂಕ್‌ ಬಳಸಿ ತೆರೆಯಬಹುದು. ಆನ್‌ಲೈನ್ ಮೂಲಕವೂ ಪಡೆದು ಅಭ್ಯಾಸ ಮಾಡಬಹುದು’ ಎಂದು ಹೇಳಿದರು.

‘ತಕ್ಷಣವೇ ಎಲ್ಲ ಶಾಲೆಗಳಿಗೆ ಯೋಜನೆಯ ಮೂಲ ತಂತ್ರಾಶ ನೀಡಲಾಗಿದೆ. ಅಲ್ಲಿ ಆನ್‌ಲೈನ್ ಲಿಂಕ್ ಹಾಗೂ ಆಫ್‌ಲೈನ್‌ನವರು ಝೆರಾಕ್ಸ್ ಪ್ರತಿ ಪಡೆದು ಅಭ್ಯಾಸ ಮಾಡಬಹುದು. ಮನೆಯಲ್ಲಿ ಪೋಷಕರು ಸುಲಭವಾಗಿ ಅಭ್ಯಾಸ ಮಾಡಿಸುವಂತೆ ವಿಷಯ ರೂಪಿಸಲಾಗಿದೆ. ಬಾರ್‌ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ವಿಷಯಗಳನ್ನು ತೆರೆಯಬಹುದು. ಸರ್ಕಾರಿ ಶಾಲೆಗಳನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು, ಪೋಷಕರು ನಿರ್ಲಕ್ಷ್ಯ ಮಾಡದೇ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಚಾಲನೆ: ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ನಾಯಕ್ ಚಾಲನೆ ನೀಡಿದರು. ಬಿಆರ್‌ಸಿ ಎಂ. ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎನ್. ತಿಪ್ಪೇಸ್ವಾಮಿ, ಶಿಕ್ಷಣ ಸಂಯೋಜಕ ಓಂಕಾರಪ್ಪ, ಬಿಆರ್‌ಪಿಗಳಾದ ಸಿದ್ದಪ್ಪ, ಮಹಾಂತೇಶ್, ಶಿವಣ್ಣ, ಸಿಆರ್‌ಪಿಗಳಾದ ಗೌಸ್ ಫಯಾಜ್, ಓಂಕಾರಪ್ಪ, ಕಿರಣ್ ಕುಮಾರ್, ಯೋಜನೆಯ ನೋಡಲ್ ಅಧಿಕಾರಿ ಜಿ.ವಿ. ಉಮೇಶಯ್ಯ
ಇದ್ದರು.

ಕಾರ್ಯಕ್ರಮ ವ್ಯಾಪ್ತಿ

ತಾಲ್ಲೂಕಿನಲ್ಲಿ 149 ಸರ್ಕಾರಿ, 32 ಅನುದಾನ ರಹಿತ, 18 ಅನುದಾನಿತ ಶಾಲೆಗಳು ಇವೆ. ಒಟ್ಟು 204 ಶಾಲೆಗಳಿಂದ 25,354 ವಿದ್ಯಾರ್ಥಿಗಳ ಸೇರ್ಪಡೆಯಾಗಿದ್ದಾರೆ. ಈ ಪೈಕಿ ಅನುದಾನ ರಹಿತ ಶಾಲೆಗಳ 4,734 ಮಕ್ಕಳು ಸೇರಿದಂತೆ ಒಟ್ಟು 8,644 ಮಕ್ಕಳು ಮಾತ್ರ ಮೊಬೈಲ್‌ ಸೌಲಭ್ಯ ಹೊಂದಿದ್ದಾರೆ. ಉಳಿದ 16,710 ಮಕ್ಕಳು ಆಫ್‌ಲೈನ್ ಮೂಲಕ ಅಭ್ಯಾಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪೂರಕವಾಗಿ ಜ್ಞಾನಸಿಂಚನ ಪಠ್ಯ ಸಿದ್ಧ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ನಾಯಕ್ ಮಾಹಿತಿ ನೀಡಿದರು.

......

ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ ಪೂರಕ. ಕೋವಿಡ್ ಸಂದಿಗ್ಧತೆಯಲ್ಲಿ ಶಿಕ್ಷಣ ಇಲಾಖೆ ಮಾರ್ಗದರ್ಶಿಗಳನ್ನು ಪಾಲಿಸುವ ಮೂಲಕ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಬರಬೇಕಿದೆ.

- ಬಿ. ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT