ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಣೆ– ಪ್ರಮಾಣಕ್ಕೆ ಶ್ರೀರಾಮುಲುಗೆ ಸವಾಲು

Last Updated 2 ಆಗಸ್ಟ್ 2020, 12:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಹಾಗೂ ತುಂಗ–ಭದ್ರಾ ಹಿನ್ನೀರು ಯೋಜನೆಗಳನ್ನು ಮೊಳಕಾಲ್ಮುರು ಕ್ಷೇತ್ರಕ್ಕೆ ತಂದಿದ್ದು ತಾವೇ ಎಂಬುದಾಗಿ ಹೇಳಿಕೊಳ್ಳುತ್ತಿರುವ ಸಚಿವ ಬಿ.ಶ್ರೀರಾಮುಲು, ಬಳ್ಳಾರಿಯ ದುರ್ಗಮ್ಮ ಗುಡಿಯಲ್ಲಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಸವಾಲು ಹಾಕಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸುವುದಾಗಿ ಸಚಿವರು ಸುಳ್ಳು ಹೇಳುತ್ತಿದ್ದಾರೆ. ವಿನಾ ಕಾರಣ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಮೊಳಕಾಲ್ಮುರು ತಾಲ್ಲೂಕು ಹೊರಗಿಡಲಾಗಿತ್ತು. ಶಾಸಕನಾಗಿದ್ದ ಅವಧಿಯಲ್ಲಿ ಹೋರಾಟ ನಡೆಸಿದೆ. ಬಿ.ಬಿ.ಕೆರೆ–ತಳುಕು ಸಮೀಪ ಹೆದ್ದಾರಿ ಬಂದ್‌ ಮಾಡಿ ಆಕ್ರೋಶ ಹೊರಹಾಕಿದೆವು. ಇದಕ್ಕೆ ಮಣಿದ ಕಾಂಗ್ರೆಸ್‌ ಸರ್ಕಾರ ಯೋಜನೆ ವ್ಯಾಪ್ತಿಗೆ ಮೊಳಕಾಲ್ಮುರು ತಾಲ್ಲೂಕು ಸೇರ್ಪಡೆ ಮಾಡಿದೆ’ ಎಂದು ಹೇಳಿದರು.

‘ಮೊಳಕಾಲ್ಮುರು ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ತಾವೇ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದವರಂತೆ ಶ್ರೀರಾಮುಲು ಬಿಂಬಿಸಿಕೊಳ್ಳುತ್ತಿದ್ದಾರೆ. ಶಕ್ತಿ ಇದ್ದರೆ ಬಜೆಟ್‌ನಲ್ಲಿ ಅನುದಾನ ತಂದು ಕೆಲಸ ಮಾಡಿಸಬೇಕು. ಹಿಂದಿನ ಶಾಸಕರ ಕೆಲಸವನ್ನೇ ತಾವು ಮಾಡಿರುವಂತೆ ತೋರಿಸಿಕೊಳ್ಳಬಾರದು’ ಎಂದರು.

‘ಶ್ರೀರಾಮುಲು ಅವರ ಆಪ್ತ ಸಹಾಯಕರು ಜನರ ಸುಲಿಗೆ ಮಾಡುತ್ತಿದ್ದಾರೆ. ಸಚಿವರ ಪತ್ರ ನೀಡಲು ಲಂಚ ಕೇಳುತ್ತಿದ್ದಾರೆ. ಬಳ್ಳಾರಿಯಂತೆ ಚಿತ್ರದುರ್ಗ ಜಿಲ್ಲೆಯನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಜನರು ಅವಕಾಶ ನೀಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ನೀಡುವ ಆಶ್ವಾಸನೆ ನೀಡಿದ್ದ ಶ್ರೀರಾಮುಲು ಅವರು ಅಧಿಕಾರಕ್ಕೆ ಬಂದ ಬಳಿಕ ಮರೆತಿದ್ದಾರೆ’ ಎಂದು ದೂರಿದರು.

ತಿಪ್ಪೇಸ್ವಾಮಿ ಬೆಂಬಲಿಗರಾದ ಕನ್ನಯ್ಯ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT