ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಬೀದಿಯಲ್ಲಿ ಅಕ್ಕ–ತಂಗಿ ಭೇಟಿ

ಎರಡು ವರ್ಷಗಳ ಬಳಿಕ ಬರಗೇರಮ್ಮ– ತಿಪ್ಪಿನಘಟ್ಟಮ್ಮ ಮುಖಾಮುಖಿ
Last Updated 20 ಏಪ್ರಿಲ್ 2022, 5:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಎರಡು ವರ್ಷಗಳ ಬಳಿಕ ಕೋಟೆನಾಡಿನ ಶಕ್ತಿದೇವತೆಗಳಾದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ದೇವಿಯರು ‘ಭೇಟಿ ಉತ್ಸವ’ ಮಂಗಳವಾರ ಅದ್ದೂರಿಯಾಗಿ ನೆರವೇರಿತು.

ನಗರದ ಪಶ್ಚಿಮದಲ್ಲಿ ನೆಲೆಸಿರುವ ಬರಗೇರಮ್ಮ ಹಾಗೂ ಪೂರ್ವದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ಸಂಪ್ರದಾಯದಂತೆ ರಾಜಬೀದಿ ದೊಡ್ಡಪೇಟೆಯಲ್ಲಿ ರಾತ್ರಿ 9.34ಕ್ಕೆ ಪರಸ್ಪರ ಭೇಟಿಯಾದರು. ‘ಅಕ್ಕ–ತಂಗಿ’ ಭೇಟಿಯಾದ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ರಾತ್ರಿ ಎಂಟರ ಸುಮಾರಿನಿಂದ ಭಕ್ತರ ಸಂಭ್ರಮ ಹೆಚ್ಚಾಯಿತು. ವಿವಿಧ ಪುಷ್ಪಗಳಿಂದ ಸುಂದರವಾಗಿ ಅಲಂಕೃತಗೊಂಡಿದ್ದ ಅಕ್ಕ-ತಂಗಿಯರು ಪರಸ್ಪರ ಭೇಟಿಗಾಗಿ ತವಕಿಸುವ ದೃಶ್ಯ ಸೊಗಸಾಗಿತ್ತು. ‘ಏಕನಾಥೇಶ್ವರಿ, ಬರಗೇರಮ್ಮ, ತಿಪ್ಪನಘಟ್ಟಮ್ಮ ಉಧೋ’ ಎಂಬ ಹರ್ಷೋದ್ಗಾರ ಭಕ್ತರಿಂದ ಮೊಳಗಿದವು. ಭೇಟಿಗಾಗಿ ಉತ್ಸವ ಸಮಿತಿಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿತ್ತು.

ದೇವತೆಗಳನ್ನು ಹೊತ್ತ ಅರ್ಚಕರು ಒಂದು ಹೆಜ್ಜೆ ಮುಂದಕ್ಕೆ, ಎರಡು ಹೆಜ್ಜೆ ಹಿಂದಕ್ಕೆ ಇಡುತ್ತಾ, ಉರುಮೆ ನಾದಕ್ಕೆ ತಕ್ಕಂತೆ ಕುಣಿಯುತ್ತ ಮುಂದೆ ಬರುತ್ತಿದ್ದಂತೆ ದೇವತೆಗಳು ಮುಖಾಮುಖಿಯಾದರು.

ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷ ಏಕನಾಥೇಶ್ವರಿ, ಬರಗೇರಮ್ಮ ದೇವಿ ಜಾತ್ರೆ ನಡೆಯದ ಕಾರಣ ಮೂರನೇ ವರ್ಷದ ಜಾತ್ರಾ ಮಹೋತ್ಸವದ ಭೇಟಿ ಮಹತ್ವ ಪಡೆದಿತ್ತು. ಸುಂದರ ಕ್ಷಣಕ್ಕಾಗಿ ಸಂಜೆ 6 ಗಂಟೆಯಿಂದಲೇ ಭಕ್ತರು ಕಾದು, ಕುಳಿತಿದ್ದರು.

ಸೋಮನ ಕುಣಿತ, ಡೊಳ್ಳು ಕುಣಿತ, ದೀವಟಿಗೆಧಾರಿಗಳು, ಉರುಮೆನಾದ, ತಮಟೆಗಳ ಸದ್ದು, ಡೊಳ್ಳು ವಾದನ ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡಿದವು. ರಾಜಬೀದಿಯಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಭೇಟಿ ಮಹೋತ್ಸವ ಸಮಿತಿಯಿಂದ ಫೇಸ್‌ಬುಕ್‌, ಯೂಟ್ಯೂಬ್‌ ಲೈವ್‌ ನಡೆಸಲಾಯಿತು.

ಅಕ್ಕ–ತಂಗಿ ಭೇಟಿ ಹಿನ್ನೆಲೆ: ಅಕ್ಕ ತಂಗಿಯರಾದ ಬರಗೇರಮ್ಮ, ತಿಪ್ಪಿನಘಟ್ಟಮ್ಮ ದೇವತೆಯ ಭೇಟಿ ಉತ್ಸವದ ಹಿಂದೆ ಕುತೂಹಲಕಾರಿ ಕಥೆಯಿದೆ. ನವದುರ್ಗೆಯರಾದ ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಕಣಿವೆಮಾರಮ್ಮ, ಚೌಡಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಕಾಳಿ ದೇವತೆ ದುರ್ಗದ ರಕ್ಷಕ ದೇವತೆಗಳು ಎನ್ನುವ ಪ್ರತೀತಿ ಇದೆ.

ನವದುರ್ಗೆಯರಲ್ಲಿ ತಿಪ್ಪಿನಘಟ್ಟಮ್ಮ ದೇವತೆಗೆ ಏಳು ಜನ ಮಕ್ಕಳು. ಈಕೆಯ ಪ್ರೀತಿ ಪಾತ್ರಳಾದ ಅಕ್ಕ ಬರಗೇರಮ್ಮ ದೇವಿಗೆ ಮಕ್ಕಳಿರಲಿಲ್ಲ. ಹೀಗಾಗಿ, ತಂಗಿಯ ಮಕ್ಕಳ ಮೇಲೆ ಅಪಾರ ಮಮತೆ, ಪ್ರೀತಿ, ವಾತ್ಸಲ್ಯವಿತ್ತು. ವಾರಕ್ಕೊಮ್ಮೆ ತಂಗಿ ಮನೆಗೆ ಬಂದು, ಮಕ್ಕಳನ್ನು ಕಂಡು ಅವರ ಜತೆ ಆಟವಾಡುತ್ತಾ ಕಾಲ ಕಳೆದು ಹಿಂತಿರುಗುತ್ತಿದ್ದಳು.

ಈ ಇಬ್ಬರ ಮಮತೆ ಪ್ರೀತಿಯನ್ನು ಕಂಡು ಅಸೂಯೆ ಪಟ್ಟ ನವ ದುರ್ಗೆಯರಲ್ಲೊಬ್ಬಳು ತಿಪ್ಪಿನಘಟ್ಟಮ್ಮನಿಗೆ, ‘ಬರಗೇರಮ್ಮ ಬಂಜೆ, ಆಕೆ ಬಂದು ನಿನ್ನ ಮಕ್ಕಳನ್ನು ಮುಟ್ಟಿದರೆ ಒಳ್ಳೆಯದಾಗುವುದಿಲ್ಲ’ ಎಂದು ಚಾಡಿ ಹೇಳುತ್ತಾಳೆ. ಇದರಿಂದ ಹೆದರಿದ ತಿಪ್ಪಿನಘಟ್ಟಮ್ಮ ತನ್ನ ಅಕ್ಕ ಮನೆಗೆ ಬಂದಾಗ ಆಕೆಯ ದೃಷ್ಟಿಗೆ ಬೀಳಬಾರದೆಂದು ತನ್ನ ಮಕ್ಕಳನ್ನು ಬಚ್ಚಿಡುತ್ತಾಳೆ. ಇದರಿಂದ ಕೋಪಗೊಂಡ ಅಕ್ಕ ಬರಗೇರಮ್ಮ ಸಿಟ್ಟಿನಲ್ಲಿ ‘ನಿನ್ನ ಮಕ್ಕಳು ಕಲ್ಲಾಗಲಿ’. ಇನ್ನೆಂದು ನಿನ್ನ ಮುಖ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹಿಂತಿರುಗುತ್ತಾಳೆ.

ಆಗ ಏಕನಾಥೇಶ್ವರಿ ಊರಿನ ಒಳಿತಿಗಾಗಿ ವರ್ಷಕ್ಕೊಮ್ಮೆ ತನ್ನ ಸಮ್ಮುಖದಲ್ಲಿ ನೀವಿಬ್ಬರು ಭೇಟಿಯಾಗಬೇಕೆಂದು ಆದೇಶಿಸುತ್ತಾಳೆ. ಹಿರಿಯಕ್ಕನ ಆದೇಶದಂತೆ ಪ್ರತಿ ವರ್ಷ ಅಕ್ಕ ತಂಗಿಯರು ರಾಜಬೀದಿಯಲ್ಲಿ ಭೇಟಿಯಾಗುತ್ತಾರೆ. ಭೇಟಿಯಾಗುವ ಕ್ಷಣವನ್ನು ಬೆಟ್ಟದ ತುದಿಯಲ್ಲಿ ನಿಂತು ಏಕನಾಥೇಶ್ವರಿ ದೇವಿ ವೀಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ. ಜನಪದ ಹಿನ್ನೆಲೆಯ ಭೇಟಿ ಉತ್ಸವ ನಗರದ ಐತಿಹಾಸಿಕ ಸಾಂಸ್ಕೃತಿಕ ಹಬ್ಬವೆನಿಸಿದೆ.

ರಾರಾಜಿಸಿದ ‘ಅಪ್ಪು’

ಅಕ್ಕ–ತಂಗಿ ಭೇಟಿ ಮಹೋತ್ಸವದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರಗಳು ರಾರಾಜಿಸಿದವು. ಬರಗೇರಮ್ಮ– ತಿಪ್ಪಿನಘಟ್ಟಮ್ಮ ದೇವಿಯರ ಮೆರವಣಿಗೆಯಲ್ಲಿ ಪುನೀತ್‌ ಚಿತ್ರಗಳನ್ನು ಹಿಡಿದು ಭಕ್ತರು ಸಾಗಿದ್ದು ವಿಶೇಷವಾಗಿತ್ತು. ‘ಅಪ್ಪು ಅಜಾರಾಮರ’ ಎಂಬ ಘೋಷಣೆಗಳು ಮೊಳಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT