ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ತೀರಿಸಲು 20 ಎಕರೆ ಭೂಮಿ ಮಾರಾಟ: ಹೊಲದಲ್ಲಿಯೇ ಕೊಳೆಯುತ್ತಿರುವ ಹಣ್ಣುಗಳು

ಕೋಲಾರಕ್ಕೆ ಹಣ್ಣು ಒಯ್ದಿದ್ದಕ್ಕೆ ₹ 20 ಸಾವಿರ ನಷ್ಟ
Last Updated 4 ಜೂನ್ 2021, 2:25 IST
ಅಕ್ಷರ ಗಾತ್ರ

ಹಿರಿಯೂರು: ‘ಗುತ್ತಿಗೆ ಪಡೆದ ಜಮೀನಿನಲ್ಲಿ ₹12 ಲಕ್ಷ ಖರ್ಚು ಮಾಡಿ ಟೊಮೆಟೊ, ₹ 5 ಲಕ್ಷ ಖರ್ಚು ಮಾಡಿ 13 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಕ್ಕೆ ಮಾಡಿದ ಸಾಲ ತೀರಿಸಲು 20 ಎಕರೆ ಜಮೀನು ಮಾರಾಟ ಮಾಡಬೇಕಾಯಿತು...’

ಹಿರಿಯೂರು ತಾಲ್ಲೂಕಿನ ಕೋವೇರಹಟ್ಟಿಯ ರೈತ ಶಿವಣ್ಣ ಅವರ ಕಥೆಯಿದು. ಊರಿನ ಜಮೀನಿನಲ್ಲಿ 35 ಎಕರೆಯಲ್ಲಿ ಟೊಮೆಟೊ, ಈರುಳ್ಳಿ ಬಿತ್ತನೆ ಜೊತೆಗೆ ಆಲೂರಿನಲ್ಲಿ 25 ಎಕರೆ ಜಮೀನನ್ನು ಗುತ್ತಿಗೆ ಪಡೆದು ಅಲ್ಲಿಯೂ ಈರುಳ್ಳಿ, ಟೊಮೆಟೊ ಹಾಕಿದ್ದರು. ಲಾಕ್‌ಡೌನ್‌ ಕಾರಣಕ್ಕೆ ಟೊಮೆಟೊ, ಈರುಳ್ಳಿ ಬೆಲೆ ಕುಸಿದಿದ್ದರಿಂದ ಬಿತ್ತನೆಗೆ ಮಾಡಿದ್ದ ಸಾಲ ತೀರಿಸಲು 20 ಎಕರೆ ಜಮೀನು ಮಾರಾಟ ಮಾಡಿದ್ದಾರೆ.

‘ಆಲೂರಿನಲ್ಲಿ 13 ಎಕರೆ ಈರುಳ್ಳಿಗೆ ₹ 5 ಲಕ್ಷ ಖರ್ಚು ಮಾಡಿದ್ದೆ. ₹ 2.5 ಲಕ್ಷ ಆದಾಯ ಬಂತು. ಟೊಮೆಟೊದಲ್ಲಾದರೂ ಒಂದಿಷ್ಟು ಲಾಭ ಪಡೆಯೋಣ ಎಂದು ಚಳ್ಳಕೆರೆಯಿಂದ 448 ತಳಿಯ ಸಸಿಯನ್ನು 50 ಪೈಸೆಗೆ ಒಂದರಂತೆ ಖರೀದಿಸಿ ಎಕರೆಗೆ ಹತ್ತು ಸಾವಿರ ಸಸಿಯಂತೆ 22 ಸಾವಿರ ಸಸಿ ನಾಟಿ ಮಾಡಿದ್ದೆ. ಎರಡು ತಿಂಗಳ ವೇಳೆಗೆ ಒಂದೊಂದು ಬಳ್ಳಿಯಲ್ಲಿ 3ರಿಂದ 5 ಕೆ.ಜಿ ಹಣ್ಣುಗಳು ತೂಗುತ್ತಿದ್ದವು. ಎಕರೆಗೆ ₹ 1 ಲಕ್ಷಗಳಷ್ಟು ಖರ್ಚು ಮಾಡಿದ್ದಕ್ಕೂ ಉತ್ಕೃಷ್ಟ ಗುಣಮಟ್ಟದ ಬೆಳೆ ಬಂದಿದೆ ಎಂಬ ಖುಷಿಯನ್ನು ಲಾಕ್‌ಡೌನ್ ಹಾಳುಮಾಡಿತು’ ಎಂದು ಶಿವಣ್ಣ ಬೇಸರ ವ್ಯಕ್ತಪಡಿಸಿದರು.

‘ಹಿರಿಯೂರು, ಚಿತ್ರದುರ್ಗದಲ್ಲಿ 500–1,000 ಬಾಕ್ಸ್ ಹಣ್ಣು ಮಾರಲು ಸಾಧ್ಯವಿಲ್ಲ ಎಂದು 15 ದಿನಗಳ ಹಿಂದೆ ಕೋಲಾರಕ್ಕೆ 1,500 ಬಾಕ್ಸ್ ಹಣ್ಣು ಒಯ್ದಿದ್ದೆ. ಅಲ್ಲಿ ಪ್ರತಿ ಬಾಕ್ಸ್ 30–40 ರೂಪಾಯಿಗೆ ಮಾರಾಟವಾಯಿತು. ಕೀಳುವ ಕೂಲಿ, ಲಾರಿ ಬಾಡಿಗೆ, ದಲಾಲರ ಕಮಿಷನ್ ಸೇರಿ ಒಂದು ಬಾಕ್ಸ್‌ಗೆ ₹ 55 ಖರ್ಚು ಬಂದಿತ್ತು. ಕೋಲಾರಕ್ಕೆ ಹಣ್ಣು ಒಯ್ದಿದ್ದಕ್ಕೆ ₹ 20 ಸಾವಿರ ನಷ್ಟ ಅನುಭವಿಸಿದೆ. ಹೀಗಾಗಿ ಕೊಯ್ಲು ಮಾಡಿ ನಷ್ಟ ಅನುಭವಿಸುವುದು ಬೇಡ ಎಂದು 15 ದಿನಗಳಿಂದ ಹಣ್ಣನ್ನು ಕೀಳದೇ ಬಿಟ್ಟಿದ್ದೇನೆ. ಹೊಲದ ಕಡೆಗೆ ಹೋಗಲೂ ಮನಸ್ಸಾಗುತ್ತಿಲ್ಲ. ಗುತ್ತಿಗೆ ಭೂಮಿಯಲ್ಲಿ ಈರುಳ್ಳಿ, ಟೊಮೆಟೊ ಹಾಕಿದ್ದಕ್ಕೆ ₹ 15 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಕೋವೇರಹಟ್ಟಿಯಲ್ಲಿ 60 ಎಕರೆ ಸ್ವಂತ ಜಮೀನಿನಲ್ಲಿ ಈರುಳ್ಳಿ ಮತ್ತು ಟೊಮೆಟೊ ಹಾಕಿದ್ದಕ್ಕೆ ₹ 25 ಲಕ್ಷ ನಷ್ಟವಾಗಿದೆ. ಸಾಲ ಕೊಟ್ಟವರು ಎಷ್ಟು ದಿನ ಸುಮ್ಮನಿರುತ್ತಾರೆ. ಹೀಗಾಗಿ ಜಮೀನು ಮಾರಿ ಸಾಲ ತೀರಿಸಬೇಕಾಯಿತು’ ಎಂದು ಶಿವಣ್ಣ ಕೃಷಿಯಲ್ಲಿ ಆಗಿರುವ ಕಹಿ ಅನುಭವವನ್ನು ಬಿಚ್ಚಿಟ್ಟರು.

‘2017ರಲ್ಲಿ ಟೊಮೆಟೊಗೆ ಒಳ್ಳೆಯ ಬೆಲೆ ಸಿಕ್ಕಿದ್ದರಿಂದ ಕೈತುಂಬ ಹಣ ಸಿಕ್ಕಿತ್ತು. ನಂತರ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದೇವೆ. ಅಪರೂಪಕ್ಕೆ ಎಂಬಂತೆ ನಾವು ಬೆಳೆಯುವ ಬೆಳೆಗೆ ಬಂಪರ್ ಬೆಲೆ ಸಿಗಬಹುದು. ಆದರೆ ಲಾಭ–ನಷ್ಟದ ಲೆಕ್ಕಾಚಾರ ಹಾಕಿದರೆ ನಷ್ಟದ ಪಾಲೇ ಹೆಚ್ಚು. ತರಕಾರಿ ಬೆಳೆ ಬದಲಿಗೆ ಸೂರ್ಯಕಾಂತಿ, ಕುಸುಬೆ, ಜೋಳ ಬೆಳೆಯೋಣವೆಂದರೆ ಸಕಾಲದಲ್ಲಿ ಮಳೆ ಬರುವುದಿಲ್ಲ. ಬಿತ್ತನೆ ಬೀಜದ ಖರ್ಚೂ ಕೈಗೆ ಸಿಗುವುದಿಲ್ಲ. ಈರುಳ್ಳಿ 100ರಿಂದ 110 ದಿನಗಳಿಗೆ, ಟೊಮೆಟೊ 60 ದಿನಗಳಿಗೆ ಕೊಯ್ಲಿಗೆ ಬರುತ್ತದೆ. ಹೀಗಾಗಿ ಬೆಳೆಯೊಂದಿಗೆ ಜೂಜಿಗೆ ಇಳಿದಿದ್ದೇವೆ. ಇಲ್ಲಿ ಸೋಲೇ ಹೆಚ್ಚು’ ಎನ್ನುತ್ತಾರೆ
ಶಿವಣ್ಣ.

ಸರ್ಕಾರದ ರಿಯಾಯಿತಿ, ಸಹಾಯಧನದಿಂದ ಸಣ್ಣ ರೈತರಿಗೆ ಮಾತ್ರ ಅನುಕೂಲವಾಗುತ್ತದೆ. ದೊಡ್ಡ ರೈತರ ಕಡೆ ಯಾರೂ ಗಮನ ಹರಿಸುವುದಿಲ್ಲ. ದೊಡ್ಡ ರೈತರು ದೊಡ್ಡ ಸಾಲಗಾರರಾಗಿರುತ್ತಾರೆ.
-ಶಿವಣ್ಣ, ರೈತ, ಕೋವೇರಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT