ಮಂಗಳವಾರ, ಜೂನ್ 28, 2022
21 °C
ಒನಕೆ ಓಬವ್ವ ವೃತ್ತದಲ್ಲಿ ರೈತ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ

ರಾಗಿ, ಭತ್ತ ಸಂಪೂರ್ಣ ಖರೀದಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರೈತರು ಬೆಳೆದ ರಾಗಿ, ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಿತಿಗೊಳಿಸದೇ ಖರೀದಿ ಕೇಂದ್ರದ ಮೂಲಕ ಸಂಪೂರ್ಣ ಖರೀದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷಿಸಿವೆ. ಆಡಳಿತಕ್ಕೆ ಬಂದ ದಿನದಿಂದ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತ ರೈತ ಕುಲವನ್ನೇ ನಾಶ ಮಾಡಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ ಇತ್ಯಾದಿ ದವಸ ಧಾನ್ಯಗಳನ್ನು ಎಂಎಸ್‌ಪಿ ಬೆಲೆಗಿಂತಲೂ ಕಡಿಮೆ ಬೆಲೆಗೆ ರೈತರಿಂದ ಖರೀದಿಸಿ ಲೂಟಿ ಮಾಡಲಾಗುತ್ತಿದೆ. ಸರ್ಕಾರ ಖರೀದಿ ಕೇಂದ್ರಗಳ ಮೂಲಕ ರಾಗಿ ಮತ್ತು ಭತ್ತವನ್ನು ಸಂಪೂರ್ಣವಾಗಿ ಖರೀದಿಸದೇ ಕನಿಷ್ಠ ಬೆಂಬಲ ಬೆಲೆ ನೀತಿಗೆ ಅರ್ಥವಿಲ್ಲದಂತೆ ಮಾಡಿದೆ’ ಎಂದು ಅಳಲು ತೋಡಿಕೊಂಡರು.

‘ಸರ್ಕಾರದ ನೀತಿಯಿಂದಾಗಿ ರೈತರು ಬೆಳೆಗೆ ಹಾಕಿದ ಖರ್ಚನ್ನು ಸಹ ಹಿಂಪಡೆಯಲು ಆಗುತ್ತಿಲ್ಲ. ಜತೆಗೆ ಬೇಸಿಗೆಯಲ್ಲಿ ಪಂಪ್‍ಸೆಟ್‍ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದಿರುವ ಕಾರಣ ಫಸಲುಗಳು ಒಣಗಿ ನಷ್ಟವಾಗುತ್ತಿವೆ. ಆದ್ದರಿಂದ ಈಗ ನೀಡುತ್ತಿರುವ ವಿದ್ಯುತ್ ಅವಧಿ ಕಡಿಮೆಯಾಗಿದ್ದು, 10 ಗಂಟೆಗಳ ಕಾಲಾವಧಿಗೆ ಹೆಚ್ಚಿಸಬೇಕು. ಅಕ್ರಮ-ಸಕ್ರಮ ಯೋಜನೆಯ ಅಡಿ ಹಣ ಪಾವತಿಸಿದ ರೈತರಿಗೆ ಕೂಡಲೇ ಸಂಪರ್ಕ ಮತ್ತು ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಎರಡು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ರೈತರು ತೀವ್ರ ಬೆಳೆ ನಷ್ಟ ಅನುಭವಿಸಿದ್ದಾರೆ. ಸರ್ಕಾರದ ಬೆಳೆ ನಷ್ಟ ಪರಿಹಾರ ಬೆಳೆ ವಿಮೆ ಪಾವತಿಸಿದ ರೈತರಿಗೆ ವಿತರಣೆಯಾಗಿಲ್ಲ. ಆದ್ದರಿಂದ ಇನ್‌ಪುಟ್‌ ಸಬ್ಸಿಡಿಯನ್ನು ತೆಲಂಗಾಣ ಮಾದರಿಯಲ್ಲಿ ಎಲ್ಲ ರೈತರಿಗೆ ವಿತರಿಸಬೇಕು’ ಎಂದು ಒತ್ತಾಯಿಸಿದರು.

‘ರೈತರ ಕೃಷಿ ಪರಿಕರಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು. ಟ್ರ್ಯಾಕ್ಟರ್‌, ಯಂತ್ರೋಪಕರಣಗಳ ಎಂಆರ್‌ಪಿ ದರವನ್ನು ಎಲ್ಲ ಕೃಷಿ ಇಲಾಖೆ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಜಮೀನುಗಳ ನಕ್ಷೆ, ಪೋಡಿ, ಹದ್ದುಬಸ್ತು, 11(ಇ), ನಕ್ಷೆಗೆ ಒಮ್ಮೆ ಪಾವತಿಸಿದ ಶುಲ್ಕಕ್ಕೆ ಅವಧಿ ಮೀರಿದ ನಂತರ ಮರುಶುಲ್ಕ ಕೇಳದಂತೆ ನವೀಕರಿಸುವಂತೆ ನಿಯಮ ಬದಲಾವಣೆ ಮಾಡಬೇಕು’ ಎಂದು ಮನವಿ ಮಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಸ್ಥಗಿತವಾಗಿರುವ ಕಾರಣ ಟೆಂಡರ್‌ ಆದ ಕಂಪನಿಗಳಿಗೆ ಹಣ ಮಂಜೂರು ಮಾಡಿ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಭೂಮಿ ನೀಡಿರುವ ರೈತರಿಗೆ ಕೂಡಲೇ ಪರಿಹಾರದ ಹಣವನ್ನು ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿರುವ ಕಾರಣ ರೈತರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ ರಸಗೊಬ್ಬರ, ಬೀಜ, ಕ್ರಿಮಿನಾಶಕಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು. ಸಹಾಯಧನದ ಮೂಲಕ ಡೀಸೆಲ್‌ ಮತ್ತು ಪೆಟ್ರೋಲ್‌ ವಿತರಿಸಬೇಕು’ ಎಂದು ಆಗ್ರಹಿಸಿದರು.

‘15–20 ವರ್ಷಗಳಿಂದ ಭೂಸಾಗುವಳಿ ಮಾಡುತ್ತಿರುವ ರೈತರಿಗೆ ಅಕ್ರಮ-ಸಕ್ರಮ ಯೋಜನೆಯ ಅಡಿ ವಿಳಂಬ ಮಾಡದೇ ಭೂ ಸಾಗುವಳಿ ಪತ್ರ ನೀಡಬೇಕು. ಹಾಗೂ ಉತ್ಪಾದಕ ರೈತರಿಗೆ ಈಗಿರುವ ದರಕ್ಕಿಂತ ಜಾಸ್ತಿ ದರ ಹಾಗೂ ಸಹಾಯಧನ ಹೆಚ್ಚಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಜಿ. ಸುರೇಶ್‌ ಬಾಬು, ಟಿ. ನುಲೇನೂರು ಶಂಕರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಸಿ. ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಂ.ಆರ್‌. ಪುಟ್ಟಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಚಂದ್ರಪ್ಪ, ರವಿ ಕೋಗುಂಡೆ, ರವಿ, ಡಿ. ಮಲ್ಲಿಕಾರ್ಜುನ, ಶಿವಕುಮಾರ್‌, ರವಿ ಮೊಳಕಾಲ್ಮೂರು, ಅಣ್ಣಪ್ಪ, ವಿರುಪಾಕ್ಷಪ್ಪ ಸೇರಿದಂತೆ ರೈತ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು