ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮೀಸಲು ಅರಣ್ಯಕ್ಕೆ ಬೆಂಕಿ; ನೂರಾರು ಎಕರೆ ಅರಣ್ಯ ನಾಶ

Published 4 ಜೂನ್ 2023, 3:27 IST
Last Updated 4 ಜೂನ್ 2023, 3:27 IST
ಅಕ್ಷರ ಗಾತ್ರ

ನಾಯಕನಹಟ್ಟಿ (ಚಿತ್ರದುರ್ಗ): ಹೋಬಳಿಯ ವರವು ಕಾವಲಿನ ನಾಲ್ಕನೇ ಹಂತದ ಮೀಸಲು ಅರಣ್ಯಕ್ಕೆ ಶನಿವಾರ ರಾತ್ರಿ ಬೆಂಕಿ ಬಿದ್ದಿದ್ದು, ನೂರಾರು ಎಕರೆಯಲ್ಲಿದ್ದ ಅಪಾರ ಪ್ರಮಾಣದ ಅರಣ್ಯ ಆಹುತಿಯಾಗಿದೆ.

ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ ಮತ್ತು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ ಡಿಒ) ಕಾಂಪೌಂಡ್, ಬೊಮ್ಮಕ್ಕನಹಳ್ಳಿ, ನಕ್ಲರಹಟ್ಟಿ, ಮಟ್ಟಿದಿನ್ನೆಗೆ ಹೊಂದಿಕೊಂಡಿರುವ ವರವು ಕಾವಲಿನ 4ನೇ ಹಂತದ ಕಾಯ್ದಿರಿಸಿದ ಅರಣ್ಯ ಪ್ರದೇಶವಿದೆ. ಐದು ವರ್ಷದಿಂದ ಅರಣ್ಯ ಇಲಾಖೆಯು ಸುಮಾರು 368 ಹೆಕ್ಟೇರ್ ಪ್ರದೇಶದಲ್ಲಿ ಹಲವು ಜಾತಿಯ ಗಿಡಗಳನ್ನು ನೆಟ್ಟು ಪೋಷಣೆ ಮಾಡಿತ್ತು.

ಕಮರ, ಹೊಂಗೆ, ತಬಸೇ, ನೇರಳೆ, ಚಳ್ಳೆ ಉದಯ, ಆಲ, ಬೇಗ, ಅರಳಿ, ಸೀತಾಫಲ, ಸಿಮರುಬಾ ಸೇರಿದಂತೆ ಹತ್ತಾರು ಜಾತಿಯ ಕಾಡು ಮರಗಳನ್ನು ನೆಟ್ಟು ಜತನದಿಂದ ರಕ್ಷಣೆ ಮಾಡಲಾಗಿತ್ತು. ನೈಸರ್ಗಿಕವಾಗಿ ನೂರಾರು ಜಾತಿಯ ಕಾಡು ಮರಗಳು ಬೆಳೆದಿದ್ದವು.

ಇನ್ನೂ 5 ವರ್ಷಗಳು ಕಳೆದಿದ್ದರೆ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಅರಣ್ಯ ಸಂಪತ್ತು ಇದಾಗಲಿತ್ತು. ಹಾಗೆ ನೈಸರ್ಗಿಕವಾಗಿ ಬೆಳೆದ ಈ ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು ಹೆಚ್ಚಾಗಿತ್ತು. ಕಳೆದ ಒಂದೂವರೆ ತಿಂಗಳಿನಿಂದ ಅತ್ಯಂತ ಬಿರು ಬಿಸಿಲಿಗೆ ಹುಲ್ಲುಗಾವಲು ಒಣಗಿತ್ತು.

'800 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಸುತ್ತಲೂ ತಂತಿ ಬೇಲಿ ನಿರ್ಮಿಸಲು ಮುಂದಾಗಿದ್ದೇವೆ. ಈಗಾಗಲೇ ಬಹುತೇಕ ರಕ್ಷಣಾ ಬೇಲಿ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಇದರಿಂದ ಅಸಮಾಧಾನಗೊಂಡ ಸಮೀಪದ ಹಳ್ಳಿಯ ಕಿಡಿಗೇಡಿಗಳು ಶನಿವಾರ ರಾತ್ರಿ 7.30ರ ಸುಮಾರಿಗೆ ಅರಣ್ಯ ಪ್ರದೇಶದಲ್ಲಿ ಒಣಗಿರುವ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ರಾತ್ರಿ ಗಾಳಿಯ ವೇಗ ಹೆಚ್ಚಾಗಿದ್ದು, ಬೆಂಕಿಯ ಕೆನ್ನಾಲಿಗೆ ರಭಸವಾಗಿ ಹಬ್ಬಿದೆ' ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ಮಳೆಯಾಗದೆ ಇಲ್ಲಿನ ಹುಲ್ಲು ಸಂಪೂರ್ಣವಾಗಿ ಒಣಗಿತ್ತು. ಇದರಿಂದ ಬೆಂಕಿಯ ಹರಡುವಿಕೆಯ ವೇಗ ಹೆಚ್ಚಾಗಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು.

'ಭಾನುವಾರ ನಸುಕಿನ ಹೊತ್ತಿಗೆ ಅಗ್ನಿಶಾಮಕ ದಳ ಮತ್ತು ಚಳ್ಳಕೆರೆ ವಿಭಾಗ ವ್ಯಾಪ್ತಿಯ ಎಲ್ಲ ಅರಣ್ಯ ಸಿಬ್ಬಂದಿ ಸೇರಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದೇವೆ. ಎಷ್ಟು ಪ್ರದೇಶದ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ ಎಂಬುದನ್ನು ತಿಳಿಯಬೇಕಿದೆ' ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT