ಮಂಗಳವಾರ, ಆಗಸ್ಟ್ 3, 2021
28 °C
ಸಮೀಕ್ಷೆಯಲ್ಲಿ ಲೋಪ ಆರೋಪ, ಆತಂಕದಲ್ಲಿ ರೈತ

ಚಿತ್ರದುರ್ಗ: ಹೂ ಬೆಳೆಗಾರರ ಕೈತಪ್ಪಲಿದೆ ಪರಿಹಾರ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

prajavani

ಚಿತ್ರದುರ್ಗ: ಲಾಕ್‌ಡೌನ್‌ ಸಂದರ್ಭದಲ್ಲಿ ನಷ್ಟಕ್ಕೆ ತುತ್ತಾದ ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಸರ್ಕಾರ ಘೋಷಿಸಿದ ಪರಿಹಾರ ಕೈತಪ್ಪುವ ಆತಂಕ ಎದುರಾಗಿದೆ. ಅರ್ಜಿ ಹಿಡಿದು ತೋಟಗಾರಿಕೆ ಇಲಾಖೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಉಲ್ಲೇಖಿಸಿದ ಬೆಳೆ ಮಾತ್ರ ಪರಿಹಾರಕ್ಕೆ ಅರ್ಹವಾಗಿದೆ. ಸಮೀಕ್ಷೆಯಲ್ಲಿ ಬಿಟ್ಟುಹೋದ ಬೆಳೆಯನ್ನು ಹೆಚ್ಚುವರಿಯಾಗಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಕೈತಪ್ಪಿದ ಬೆಳೆಗಾರರು ಪರಿಹಾರಕ್ಕೆ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಗೆ ಈವರೆಗೆ 7,500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಅನುಷ್ಠಾಗೊಳಿಸಿದ ಲಾಕ್‌ಡೌನ್‌ನಿಂದ ಜಿಲ್ಲೆಯ ಹೂ, ಹಣ್ಣು ಹಾಗೂ ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಸಕಾಲಕ್ಕೆ ಮಾರುಕಟ್ಟೆ ಸಿಗದೇ ಬೆಳೆ ನಷ್ಟ ಅನುಭವಿಸಬೇಕಾಯಿತು. ಹೂ ಬೆಳೆ ನಷ್ಟಕ್ಕೆ ಹೆಕ್ಟೇರ್‌ಗೆ ₹ 25 ಸಾವಿರ, ತರಕಾರಿ ಮತ್ತು ಹಣ್ಣು ಬೆಳೆಗೆ ಹೆಕ್ಟೇರ್‌ಗೆ 15 ಸಾವಿರ ಪರಿಹಾರವನ್ನು ಸರ್ಕಾರ ಘೋಷಿಸಿದೆ.

ಪುಷ್ಪೋದ್ಯಮಕ್ಕೆ ಸಂಕಷ್ಟ

ಯುಗಾದಿ ಹಬ್ಬಕ್ಕೆ ಹೂವಿಗೆ ಉತ್ತಮ ಬೆಲೆ ಬರುತ್ತದೆ ಎಂಬ ಕಾರಣಕ್ಕೆ ಬಹುತೇಕ ರೈತರು ಪುಷ್ಪ ಕೃಷಿಗೆ ಒಲವು ತೋರಿದ್ದರು. ಸೇವಂತಿ, ಕನಕಾಂಬರ, ಗುಲಾಬಿ, ಸುಗಂದರಾಜ, ಮಲ್ಲಿಗೆ ಸೇರಿ ತರಹೇವಾರಿ ಹೂ ಬೆಳೆದಿದ್ದರು. ಯುಗಾದಿಯ ಮುನ್ನಾದಿನವೇ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಮಾರುಕಟ್ಟೆ ಸೇರಬೇಕಾದ ಹೂ ಜಮೀನಿನಲ್ಲಿ ಕೊಳೆಯಿತು. ರಥೋತ್ಸವ, ಮದುವೆ ಸೇರಿ ಶುಭ ಸಮಾರಂಭ ಸ್ಥಗಿತಗೊಂಡಿದ್ದರಿಂದ ಪುಷ್ಪ ಕೃಷಿ ಅವಲಂಬಿಸಿದ ರೈತರು ತೊಂದರೆ ಅನುಭವಿಸಿದರು.

ಬೇಸಿಗೆಯಲ್ಲಿ ಹಣ್ಣುಗಳಿಗೂ ಉತ್ತಮ ಮಾರುಕಟ್ಟೆ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಹಲವು ರೈತರು ಹಣ್ಣು ಬೆಳೆದಿದ್ದರು. ಕಲ್ಲಂಗಡಿ, ಪಪ್ಪಾಯ, ಕರಬೂಜ, ಅಂಜೂರ, ಬಾಳೆ ಹಾಗೂ ನಿಂಬೆ ಹಣ್ಣು ಜಿಲ್ಲೆಯಲ್ಲಿ ಎಥೇಚ್ಛವಾಗಿ ಬೆಳೆದಿದ್ದವು. ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಹಣ್ಣಿಗೆ ಮಾರುಕಟ್ಟೆ ಸಿಗಲಿಲ್ಲ. ಈರುಳ್ಳಿ, ಟ್ಯೊಮೆಟೊ, ಮೆಣಸು ಸೇರಿ ಹಲವು ಬಗೆಯ ತರಕಾರಿ ಕೂಡ ಜಮೀನನಲ್ಲೇ ಕೊಳೆತು ಹೋದವು.

ಸಮೀಕ್ಷೆಯಲ್ಲಿ ಲೋಪ

ಕಂದಾಯ ಇಲಾಖೆ ಪ್ರತಿ ವರ್ಷ ಬೆಳೆ ಸಮೀಕ್ಷೆ ನಡೆಸುತ್ತದೆ. ಹಿಂಗಾರು ಹಂಗಾಮಿನಲ್ಲಿ ನಡೆದ ಬೆಳೆ ಸಮೀಕ್ಷೆಯಲ್ಲಿ ನಮೂದಾದ ಹೂ, ಹಣ್ಣು ಮತ್ತು ತರಕಾರಿ ಬೆಳೆಗೆ ಪರಿಹಾರ ಸುಲಭವಾಗಿ ಸಿಗುತ್ತಿದೆ. ಆದರೆ, ಸಮೀಕ್ಷೆ ವ್ಯಾಪ್ತಿಯ ಹೊರಗೆ ಇರುವ ಬೆಳೆಗಾರರ ಸಂಖ್ಯೆಯೇ ಹೆಚ್ಚಾಗಿದೆ.

‘ದೊಡ್ಡಸಿದ್ಧವ್ವನಹಳ್ಳಿಯ ಪರಮೇಶ್ವರಪ್ಪ ಮಲ್ಲಿಗೆ, ದ್ಯಾಮವ್ವನಹಳ್ಳಿಯ ಮಂಜುನಾಥ ಸೇವಂತಿ, ಜೋಡಿಚಿಕ್ಕೇನಹಳ್ಳಿ ಭೈರಮ್ಮ ಸೇವಂತಿ ಬೆಳೆದಿದ್ದಾರೆ. ಆದರೆ, ಬೆಳೆ ಸಮೀಕ್ಷೆಯಲ್ಲಿ ಇದು ಉಲ್ಲೇಖವಾಗಿಲ್ಲ. ಇಂತಹ ಸಾವಿರಾರು ರೈತರ ಮಾಹಿತಿ ಸಮೀಕ್ಷೆಯಲ್ಲಿ ತಪ್ಪಾಗಿ ಉಲ್ಲೇಖವಾಗಿದೆ. ಇದರಿಂದ ರೈತರು ತೊಂದರೆ ಅನುಭವಿಸಬೇಕಾಗಿದೆ’ ಎಂಬುದು ಡಿ.ಎಸ್‌.ಹಳ್ಳಿಯ ಹೂ ಬೆಳೆಗಾರ ಮಲ್ಲಿಕಾರ್ಜುನ ಅವರ ಆರೋಪ.

ಅಂತರ ಬೆಳೆ ತೊಡಕು

ತೋಟಗಳಲ್ಲಿ ಅಂತರ ಬೆಳೆಯಾಗಿ ಹೂ ಹಾಗೂ ಹಣ್ಣು ಬೆಳೆದ ಪರಿಣಾಮ ಈ ತೊಡಕು ಎದುರಾಗಿದೆ. ಅರ್ಜಿ ಸಲ್ಲಿಸಿದ ರೈತರಿಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಡಾ.ಸವಿತಾ.

‘ಅಡಕೆ ಹಾಗೂ ತೆಂಗಿನ ತೋಟದಲ್ಲಿ ಹೂ ಮತ್ತು ಹಣ್ಣು ಬೆಳೆಯುವ ಪದ್ಧತಿ ಇದೆ. ಸಮೀಕ್ಷೆಯಲ್ಲಿ ದೀರ್ಘ ಅವಧಿಯ ಬೆಳೆ ಮಾತ್ರ ಉಲ್ಲೇಖವಾಗಿರುತ್ತದೆ. ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿದೆ. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕಟಾವಿಗೆ ಬಂದ ಬೆಳೆಗೆ ಮಾತ್ರ ಪರಿಹಾರ ಸಿಗಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು