ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಮಸಾಗರ 66 ಕೆವಿ ವಿದ್ಯುತ್ ಟವರ್ ಸ್ಥಾಪನೆ: ರೈತರೊಂದಿಗೆ ಜಿಲ್ಲಾಧಿಕಾರಿ ಸಭೆ

Last Updated 9 ನವೆಂಬರ್ 2021, 6:08 IST
ಅಕ್ಷರ ಗಾತ್ರ

ಭರಮಸಾಗರ: ಭರಮಸಾಗರ ಏತನೀರಾವರಿ ಯೋಜನೆ ಸಂಬಂಧ ವಿದ್ಯುತ್ ಟವರ್ ಸ್ಥಾಪನೆ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳು, ರೈತರೊಂದಿಗೆ ಸಭೆ ನಡೆಸಿದರು.

ಭರಮಸಾಗರ ಸೇರಿ ಹೋಬಳಿಯ 42 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ದೊಡ್ಡಕೆರೆಯಲ್ಲಿಯ ಜಾಕ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಾಗೂ ಟವರ್ ಸ್ಥಾಪಿಸಲು ಗುರುತಿಸಲಾಗಿರುವ ಮಾರ್ಗವನ್ನು ಬದಲಾವಣೆ ಮಾಡಬೇಕು ಎಂದು ಭರಮಸಾಗರ, ಗೊಲ್ಲರಹಟ್ಟಿ, ಎಮ್ಮೇಹಟ್ಟಿ, ಹಂಪನೂರು, ಬೇವಿನಹಳ್ಳಿ, ದ್ಯಾಪನಹಳ್ಳಿ, ಕೋಡಿರಂಗವ್ವನಹಳ್ಳಿ ಭಾಗದ ರೈತರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಮಲ್ಲಪ್ಪ ಮಾತನಾಡಿ, ‘ಈಗಾಗಲೇ ನೀರು ತುಂಬಿಸುವ ಯೋಜನೆ ಮೊದಲ ಹಂತ ಯಶಸ್ವಿಯಾಗಿ ಮುಗಿದಿದೆ. ಈಗ ಭರಮಸಾಗರ ಜಾಕ್‌ವೆಲ್‌ನಿಂದ ನೀರು ಎತ್ತಿ ಬೇರೆ ಕೆರೆಗಳಿಗೆ ಹರಿಸಲು ವಿದ್ಯುತ್ ಅಗತ್ಯವಿದೆ. ಅದಕ್ಕಾಗಿ ಕೆಪಿಟಿಸಿಎಲ್‌ಗೆ ಮನವಿ ಮಾಡಿದ್ದೆವು. ಅವರು ಮೂರು ಮಾರ್ಗಗಳನ್ನು ಗುರುತಿಸಿ ಅದರಲ್ಲಿ ಅನುಕೂಲಕರವಾದ ಮಾರ್ಗದಲ್ಲಿ ಟವರ್ ಸ್ಥಾಪಿಸಲು ಆರಂಭಿಸಿದ್ದಾರೆ. ಆದರೆ ರೈತರು ವಿರೋಧಿಸುತ್ತಿದ್ದಾರೆ’ ಎಂದರು.

ಕೆಪಿಟಿಸಿಎಸ್ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ್ ಮಾತನಾಡಿ, ‘ವಿದ್ಯುತ್ ಟವರ್ ಸ್ಥಾಪನೆಗೆ ಅನುಕೂಲಕರ ದೃಷ್ಟಿಯಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಟವರ್ ಸ್ಥಾಪಿಸಲು ಕಾಮಗಾರಿ ಆರಂಭಿಸಲಾಗಿತ್ತು. ರೈತರು ಮಾರ್ಗ ಬದಲಾಯಿಸುವಂತೆ ಹೇಳುತ್ತಿದ್ದಾರೆ. ಈ ಬಗ್ಗೆ ಅವರು ಸೂಚಿಸಿದ ಸ್ಥಳವನ್ನು ಪರಿಶೀಲಿಸಲಾಗಿದೆ. ಅದು ಅನುಕೂಲಕರ ಇದೆಯೋ ಇಲ್ಲವೋ ಸರ್ವೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ರೈತರಿಗೆ ನೋಟಿಸ್ ನೀಡಿಲ್ಲ. ಓಡಾಡುವ ದಾರಿ ಅಡ್ಡ ಹಾಕಿ ಟವರ್ ಹಾಕುತ್ತಿದ್ದಾರೆ. 15 ಎಕರೆ ಜಮೀನಿನ ರೈತರು ಅಲ್ಲಿ ಓಡಾಡುತ್ತಾರೆ’ ಎಂದು ರೈತ ಗುರುರಾಜರಾವ್ ಹೇಳಿದರು.

‘ಇರುವ ಸ್ವಲ್ಪ ಜಮೀನಿನಲ್ಲಿ ಟವರ್‌ಗೆ ಜಾಗ ನೀಡಿದರೆ ಅದರಲ್ಲಿ ಏನೂ ಬೆಳೆಯಲು ಆಗುವುದಿಲ್ಲ. ದಯಮಾಡಿ ಮಾರ್ಗ ಬದಲಾವಣೆ ಮಾಡಿ. ಮಾರ್ಗ ಬದಲಿಸಿದರೆ 250 ರೈತರಿಗೆ ಆಗುವ ತೊಂದರೆ ತಪ್ಪಿಸಬಹುದು’ ಎಂದು ಬೇವಿನಹಳ್ಳಿ ಕರಿಬಸಪ್ಪ ಮನವಿ ಮಾಡಿದರು.

ಉದ್ದೇಶಿಸಿರುವ ಮಾರ್ಗದಲ್ಲಿ ರಾಷ್ಟ್ರೀಯ ಹದ್ದಾರಿಯಲ್ಲಿ 3 ಕಡೆ ಕ್ರಾಸ್ ಆಗುತ್ತದೆ. ಮಾರ್ಗ ಬದಲಾಯಿಸಿದರೆ ಹೆದ್ದಾರಿ ಸಮಸ್ಯೆ ಬರುವುದಿಲ್ಲ. ಬೇವಿನ ಹಳ್ಳಿಯಲ್ಲಿ ಶಾಲೆ ಇದೆ. ಟವರ್‌ ಹಾಕಿದರೆ ಮುಂದೆ ಶಾಲಾ ಮಕ್ಕಳ ಮೇಲೂ ಪರಿಣಾಮ ಬೀರಬಹುದು ಎಂದು ರೈತ ನಿಜಾಮ್,ಬೇವಿನಹಳ್ಳಿ ಕುಬ್ಯಾನಾಯ್ಕ್ ಹೇಳಿದರು.

‘ನಮ್ಮ ಮನೆಯಲ್ಲಿ ಹನ್ನೊಂದು ಜನ ಇದ್ದೇವೆ. ಒಂದು ಎಕರೆ ಜಮೀನು ಇದೆ. ಅದರಲ್ಲಿಯೇ ಟವರ್‌ಗೆ ಜಾಗ ಕೊಟ್ಟರೆ ನಾವು ಹೇಗೆ ಬದುಕಬೇಕು’ ಎಂದು ಗೊಲ್ಲರಹಟ್ಟಿಯ ವೃದ್ಧೆ ಚಿತ್ತಮ್ಮ ಕಣ್ಣೀರಿಟ್ಟರು.

‘ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ರೈತರ ಅಹವಾಲನ್ನೂ ಕೇಳಿದ್ದೇನೆ. ಮೂರು ದಿನದಲ್ಲಿ ಸರ್ವೆ ಮಾಡಿ ವರದಿ ನೀಡಬೇಕು. ಅದು ಅನುಕೂಲಕರವಾಗಿಲ್ಲ ಎಂದಾದರೆ ರೈತರು ಸಹಕರಿಸಲೇಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT