ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ| ಅಪ್ಪಿಕೊಂಡೇ ಕೊನೆಯುಸಿರೆಳೆದ ಜೀವದ ಗೆಳೆಯರು

ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರಿನ ಗುಂಡಿಕೆರೆಯಲ್ಲಿ ದುರಂತ
Last Updated 29 ಮಾರ್ಚ್ 2023, 6:32 IST
ಅಕ್ಷರ ಗಾತ್ರ

ಹೊಳಲ್ಕೆರೆ: ಜೀವನದ ಪ್ರಮುಖ ಘಟ್ಟದಲ್ಲಿದ್ದ ಯುವಕರವರು. ಮೂವರೂ ದ್ವಿತೀಯ ಪಿಯುಸಿಯ ಸಹಪಾಠಿಗಳು. ಐದು ವಿಷಯಗಳ ವಾರ್ಷಿಕ ಪರೀಕ್ಷೆ ಬರೆದ್ದ ಅವರು ಬುಧವಾರ (ಮಾರ್ಚ್ 29)ರಂದು ಸಮಾಜಶಾಸ್ತ್ರ ವಿಷಯದ ಕೊನೆಯ ಪರೀಕ್ಷೆ ಬರೆಯಬೇಕಿತ್ತು. ಅದೊಂದು ವಿಷಯದ ಪರೀಕ್ಷೆ ಬರೆದಿದ್ದರೆ ಮುಂದೆ ಪದವಿ ಕಾಲೇಜಿಗೆ ಹೋಗಬೇಕಿತ್ತು. ಅಷ್ಟರಲ್ಲಿ ವಿಧಿಯ ಆಟ್ಟಹಾಸಕ್ಕೆ ಸಿಲುಕಿ ಇಹಲೋಕ ತ್ಯಜಿಸಿದ್ದಾರೆ.

ಜೀವದ ಗೆಳೆಯರಾಗಿದ್ದ ಈ ಮೂವರು ಗುಂಡಿಕೆರೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಕೊನೆಯುಸಿರೆಳೆದಿದ್ದಾರೆ.

ತಾಲ್ಲೂಕಿನ ನಂದನ ಹೊಸೂರಿನ ಕೆರೆಯಲ್ಲಿ ಮಂಗಳವಾರ ಈಜಲು ಹೋಗಿ ಸಾವನ್ನಪ್ಪಿದ ಗೆಳೆಯರ ಕರುಣಾಜನಕ ಕತೆಯಿದು.

ಕಣಿವೆ ಜೋಗಿಹಳ್ಳಿಯ ಟಿ.ಎಸ್. ಮನೋಜ್‌ನ ತಂದೆ–ತಾಯಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ‘ಮಗ ಚೆನ್ನಾಗಿ ಓದಿ ನಮಗೆ ಆಸರೆಯಾಗುತ್ತಾನೆ’ ಎಂದು ನಂಬಿ ಜೀವನ ನಡೆಸುತ್ತಿದ್ದರು. ಮಗನ ಆಸೆಗಳಿಗೆ ತಣ್ಣೀರು ಎರಚುತ್ತಿರಲಿಲ್ಲ. ಪ್ರೀತಿಯ ಮಗನಾಗಿದ್ದ ಮನೋಜ್ ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಆದರೆ ವಿಧಿಯ ಆಟಕ್ಕೆ ಹೆತ್ತವರು ಕನಸು ಕಮರಿ ಹೋಗಿದೆ. ಮಗನನ್ನು ಕಳೆದುಕೊಂಡು ಹೆತ್ತವರ ರೋದನ ಹೃದಯ ಕಲಕುವಂತಿತ್ತು.

ಹೊರಕೆರೆ ದೇವರಪುರದ ಎಂ.ಸಂಜಯ್ ತಂದೆ ಟೇಲರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. 9ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದಿದ್ದ ಸಂಜಯ್ ಮೂರು ವರ್ಷಗಳ ಹಿಂದೆ ಸ್ವಂತ ಗ್ರಾಮದ ಕಾಲೇಜಿಗೆ ಸೇರಿದ್ದ. ಕಾಲೇಜಿನಲ್ಲಿ ಗೆಳೆಯರೊಂದಿಗೆ ಖುಷಿಯಾಗಿರುತ್ತಿದ್ದ ಸಂಜಯ್ ಇನ್ನು ನೆನಪು ಮಾತ್ರ.

‘ದೇವರ ಕಾರ್ಯಕ್ಕೆಂದು ಚನ್ನಗಿರಿ ಸಮೀಪದ ಅಮ್ಮನ ಗುಡ್ಡಕ್ಕೆ ಮನೆಯವರೆಲ್ಲ ಹೋಗಿದ್ದೆವು. ನಾಳೆ ಪರೀಕ್ಷೆ ಇದೆ ಎಂದು ಮಗನನ್ನು ಬಿಟ್ಟು ಹೋಗಿದ್ದೆವು. ಅವನನ್ನೂ ಕರೆದುಕೊಂಡು ಹೋಗಿದ್ದರೆ ಮಗ ಬದುಕಿರುತ್ತಿದ್ದ. ವಯಸ್ಸಿಗೆ ಬಂದ ಮಗನನ್ನು ಮಣ್ಣಿಗೆ ಹೇಗೆ ಇಡಲಿ’ ಎಂದು ನಂದನಹೊಸೂರಿನ ಗೊಲ್ಲರಹಟ್ಟಿಯ ಟಿ. ಗಿರೀಶ್ ಅವರ ತಂದೆ ತಿಮ್ಮೇಶ್ ದುಃಖ
ತೋಡಿಕೊಂಡರು.

‘ನಮ್ಮ ಕಾಲೇಜಿನ ಮೂವರು ವಿದ್ಯಾರ್ಥಿಗಳು ಒಂದೇ ದಿನ ಸಾವನ್ನಪ್ಪಿರುವ ಘಟನೆಯಿಂದ ಮನಸ್ಸು ಭಾರವಾಗಿದೆ. ನಾಳೆ ಈ ಮೂವರೂ ಕೊನೆಯ ಪರೀಕ್ಷೆ ಬರೆಯಬೇಕಿತ್ತು. ಅಷ್ಟರಲ್ಲಿ ದುರಂತ ನಡೆದಿದೆ. ವಿದ್ಯಾರ್ಥಿಗಳನ್ನು ಕಳೆದುಕೊಂಡಿರುವುದು ನಮ್ಮ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ನೋವು ತಂದಿದೆ’ ಎಂದು ಎಸ್‌ಎಲ್‌ಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ ನೋವಿನಿಂದ
ನುಡಿದರು.

‘ಬಿಸಿಲು ಹೆಚ್ಚಿದ್ದುದರಿಂದ ಮೂವರು ಗೆಳಯರೂ ನೀರಿಗೆ ಇಳಿದರು. ನಾನು ದಡದಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆ. ಕ್ಷಣಾರ್ಧದಲ್ಲಿ ಮೂವರೂ ಕಾಣೆಯಾದರು. ಕೂಗಿದರೂ ಮೇಲೆ ಏಳಲಿಲ್ಲ. ತಕ್ಷಣವೇ ಗ್ರಾಮದ ಜನರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಸ್ವಲ್ಪ ಹೊತ್ತಿಗೆ ಮೊದಲು ಜತೆಗಿದ್ದ ಗೆಳೆಯರು ಕಣ್ಮರೆಯಾಗಿದ್ದನ್ನು ನೋಡಿ ಅಳು ತಡೆಯಲಾಗಲಿಲ್ಲ’ ಎಂದು ದಡದಲ್ಲಿ ಕುಳಿತಿದ್ದ ವಿದ್ಯಾರ್ಥಿ ಜೀವನ್ ಅಳಲು ತೋಡಿಕೊಂಡನು.

ಗುಂಡಿಕೆರೆ ಗ್ರಾಮದಿಂದ
ದೂರದಲ್ಲಿ ಇದ್ದು, ನೀರು ಸ್ವಚ್ಛವಾಗಿದೆ. ಗುಡ್ಡಗಳ ಮಧ್ಯೆ ಜಲಾಶಯದಂತೆ ಗೋಚರಿಸುವ ಕೆರೆ ಸುಮಾರು 30 ಅಡಿ ಆಳವಿದೆ. ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಸುತ್ತಲಿನ ಗ್ರಾಮಗಳ ಯುವಕರು, ವಿದ್ಯಾರ್ಥಿಗಳು ಮಧ್ಯಾಹ್ನ ಈಜಲು ಹೋಗುತ್ತಾರೆ. ಹೊರಕೆರೆ ದೇವರಪುರ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಈಜಲು ಹೋಗಿದ್ದು, ದಡದಲ್ಲಿ ಜೀವನ್ ಎಂಬ ವಿದ್ಯಾರ್ಥಿಯನ್ನು ಕೂರಿಸಿ ಮೂವರು ಕೆರೆಗೆ ಇಳಿದಿದ್ದಾರೆ. ಈಜಲು ಬಾರದೇ ಮೂವರೂ ನೀರಿನಲ್ಲಿ ಮುಳುಗಿ
ಸಾವನ್ನಪ್ಪಿದ್ದಾರೆ.

..............

ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಾಕಿದ್ದ !

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಗಿರೀಶ್ ಸಾಯುವ ಅರ್ಧ ಗಂಟೆ ಮುಂಚೆ ತನ್ನ ಹಾಗೂ ಮೂವರು ಗೆಳೆಯರ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ. ಇನ್ನೇನು ಪರೀಕ್ಷೆ ಮುಗಿದರೆ ನಾವು ನಿತ್ಯ ಸಿಗುವುದಿಲ್ಲ ಎಂದು ಗೆಳೆಯರೊಂದಿಗೆ ಸಂತಸದಿಂದ ಕಾಲ ಕಳೆಯುವ ಬಗ್ಗೆ ಬರೆದುಕೊಂಡಿದ್ದ. ಬದುಕು ಇಷ್ಟು ಬೇಗ ಮುಗಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT