ಬುಧವಾರ, ಅಕ್ಟೋಬರ್ 20, 2021
24 °C
ಕಣ್ಮನ ತಣಿಸುವ ಹಸಿರು l ತೋಟಗಾರಿಕೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆಕರ

ಬಯಲು ಸೀಮೆಯಲ್ಲೊಂದು ಕೇರಳ ಮಾದರಿಯ ತೋಟ

ಸುವರ್ಣಾ ಬಸವರಾಜ್, ಹಿರಿಯೂರು Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಸ್ಥಳೀಯ ಹಾಗೂ ಕೇರಳ ತಳಿಯ ಮೂರು ಸಾವಿರಕ್ಕೂ ಹೆಚ್ಚು ತೆಂಗು, ಆರು ಸಾವಿರ ತೇಗ, ಸ್ಥಳೀಯ ದಾಳಿಂಬೆ–ತೆಂಗಿನ ನಡುವೆ ಮಿಶ್ರ ಬೆಳೆಯಾಗಿ ಅಡಿಕೆ, ಸಾವಯವ ಕೃಷಿಯ ದಾಳಿಂಬೆ, ಶುಂಠಿ, ಸೇಂದ್ರ ಬಾಳೆ, ಏಲಕ್ಕಿ, ಕಾಳು ಮೆಣಸು, ಕಿತ್ತಲೆ, ಮೋಸಂಬಿ, ಸೀಬೆ, ಮಾವು, ಗೆಣಸು, ಸುವರ್ಣ ಗೆಡ್ಡೆ, ಅರಿಶಿಣ, ಮರಗೆಣಸು, ಸಿಹಿಗುಂಬಳ, ಸೀಡ್ ಲೆಸ್ ದ್ರಾಕ್ಷಿ, ದೊಡ್ಡ ಕೃಷಿ ಹೊಂಡದಲ್ಲಿ ಮೀನುಕೃಷಿ, ಡೈರಿ ಫಾರಂ, ಕುರಿ ಫಾರಂ, ಜೀವಾಮೃತ ಘಟಕ’.

62 ಎಕರೆ ವಿಸ್ತೀರ್ಣದ ತೋಟದಲ್ಲಿ ಕೆಲವು ಗಂಟೆ ಸುತ್ತಾಡಿ ಬಂದರೆ ‘ಅಬ್ಬಾ ಏನಿಲ್ಲ, ಈ ತೋಟದಲ್ಲಿ, ಏನೇನೆಲ್ಲ ಬೆಳೆಗಳನ್ನು ನೋಡಿದೆವು’ ಎಂಬ ಅಚ್ಚರಿ  ಮೂಡುವುದು ಸಹಜ.

ಹಿರಿಯೂರಿನಿಂದ ಮೇಟಿಕುರ್ಕೆ ಗ್ರಾಮದ ಮಾರ್ಗವಾಗಿ ಸೂರಗೊಂಡನಹಳ್ಳಿಯಿಂದ ಆಲಮರದಟ್ಟಿ ಕಡೆಗೆ ಹೆದ್ದಾರಿ ನಾಚಿಸುವಂತಹ ಡಾಂಬರ್‌ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಕ್ರಮಿಸಿದರೆ, ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ದೊಡ್ಡ ಗೇಟ್‌ಗಳಿರುವ ‘ಜಾರ್ಜ್ ಎಸ್ಟೇಟ್’ ಕಣ್ಣಿಗೆ ಬೀಳುತ್ತದೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ಎರ್ನಾಕುಲಂನ ಜಾರ್ಜ್ ಅವರು ತೋಟ ನೋಡಲು ಹೋದವರನ್ನು ಅಪ್ಪಟ ಕನ್ನಡದಲ್ಲಿ ನಗುಮೊಗದಿಂದ ಸ್ವಾಗತಿಸುವರು. ‘ನೀವೇ ಒಮ್ಮೆ ತೋಟವನ್ನು ಸುತ್ತಾಡಿ ಬನ್ನಿ, ಕೇರಳದಲ್ಲಿರುವ ನಮ್ಮ ತೋಟಗಳ ಮಾದರಿಯಲ್ಲಿ ಇಲ್ಲಿಯೂ ಬಹುಪದ್ಧತಿಯ ತೋಟಗಾರಿಕೆಯನ್ನು ಏಕೆ ಮಾಡಬಾರದು, ಎಂದು ಸಣ್ಣ ಪ್ರಯತ್ನ ನಡೆಸಿದ್ದೇನೆ’ ಎನ್ನುತ್ತಾರೆ.

1973ರಲ್ಲಿ ಬೆಂಗಳೂರಿಗೆ ಬಂದಿದ್ದ ಜಾರ್ಜ್ ಅವರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ)ನಲ್ಲಿ ಎರಡು ವರ್ಷ ಉದ್ಯೋಗ ನಿರ್ವಹಿಸಿ, ನಂತರ ತರಕಾರಿ ವ್ಯಾಪಾರ, ಅಲ್ಲಿಂದ ಸೂಪರ್ ಮಾರ್ಕೆಟ್, ಬೇಕರಿ, ಹಣ್ಣಿನ ವ್ಯಾಪಾರ, ಕನ್‌ಸ್ಟ್ರಕ್ಷನ್‌ನಲ್ಲಿ ತೊಡಗಿಸಿಕೊಂಡು ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಐದು ವರ್ಷಗಳ ಹಿಂದೆ ಹಿರಿಯೂರು ತಾಲ್ಲೂಕಿನ ಆಲಮರದಹಟ್ಟಿ ರಸ್ತೆಯಲ್ಲಿ ಜಮೀನು ಖರೀದಿಸಿ ಕೇರಳ ಮಾದರಿ ತೋಟಗಾರಿಕೆ, ಮೇಟಿಕುರ್ಕೆ ಸಮೀಪ ಖರೀದಿಸಿರುವ ಜಮೀನನ್ನು ಶುಂಠಿ ಬೆಳೆಯಲು ಗುತ್ತಿಗೆ ನೀಡಿದ್ದರೆ, ಗುಯಿಲಾಳು ಟೋಲ್ ಹತ್ತಿರದ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.

‘ಕೇರಳ ತೋಟಗಾರಿಕೆ ಇಲಾಖೆಯಿಂದ 2000 ತೆಂಗಿನ ಸಸಿ ತಂದು ಹಾಕಿದ್ದೇನೆ. 1000 ಸ್ಥಳೀಯ ತಳಿಯ ತೆಂಗು ಇದೆ. ಈಗ ಫಸಲು ಆರಂಭವಾಗಿದೆ. ಸದ್ಯಕ್ಕೆ ದಾಳಿಂಬೆ, ಸೀಬೆ, ಕಾಳುಮೆಣಸು, ಏಲಕ್ಕಿ ಬೆಳೆ ಕೈಗೆ ಸಿಗುತ್ತಿದೆ. ಇಲ್ಲಿ ನೀರಿನ ತೊಂದರೆ ಇಲ್ಲ. ತೋಟದ ಕೆಲಸಕ್ಕೆ ಕೂಲಿಯವರು ಸಿಗುತ್ತಾರೆ. ಚಿಪ್ಸ್ ತಯಾರಿಸಲು ಬಳಸುವ ಕೇರಳ ಬಾಳೆ (ಸೇಂದ್ರ ತಳಿ) ಉತ್ಕೃಷ್ಟವಾಗಿ ಬಂದಿದೆ. ತೆಂಗಿನ ಮರಗಳಲ್ಲಿ ಸ್ವಲ್ಪ ನುಸಿಪೀಡೆ ರೋಗ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶುಂಠಿ, ಸುವರ್ಣಗೆಡ್ಡೆಯನ್ನು ಈ ಭಾಗದಲ್ಲಿ ಯಾರೂ ಬೆಳೆಯುವುದಿಲ್ಲ. ಬಹಳಷ್ಟು ಜನ ಸುವರ್ಣಗೆಡ್ಡೆ ಗಿಡವನ್ನೇ ನೋಡಿಲ್ಲ. ಹೊಸ ಪ್ರಯೋಗಕ್ಕೆ ಹೊರಟಿದ್ದೇನೆ. ಫಲಿತಾಂಶದ ಬಗ್ಗೆ ಚಿಂತೆಯಿಲ್ಲ’ ಎನ್ನುತ್ತಾರೆ ಹಸನ್ಮುಖಿ ಜಾರ್ಜ್.

ಪೂರಕ: ‘ಮನುಷ್ಯರಲ್ಲಿಯೇ ಮೇಲು–ಕೀಳು, ಉಚ್ಚ–ನೀಚ, ಬಡವ–ಶ್ರೀಮಂತ ಎಂಬ ವ್ಯತ್ಯಾಸಗಳಿರುವುದು. ಆದರೆ ಮರಗಿಡಗಳಲ್ಲಿ ಅಂತಹ ತಾರತಮ್ಯವಿಲ್ಲ. ನಮ್ಮ ತೋಟದಲ್ಲಿಯೇ ನೋಡಿ, ತೆಂಗು, ಅಡಿಕೆ, ದಾಳಿಂಬೆ, ಬಾಳೆ, ಕಾಳುಮೆಣಸು, ಸೀಬೆ, ಸುವರ್ಣಗೆಡ್ಡೆ, ಏಲಕ್ಕಿ ಎಲ್ಲವೂ ಒಂದಕ್ಕೊಂದು ಪೂರಕವಾಗಿಯೇ ಬೆಳೆಯುತ್ತಿವೆ. ಯಾವುದೂ ಯಾವುದರ ಕಾಲನ್ನು ಎಳೆಯುವುದಿಲ್ಲ. ದಟ್ಟ ಅರಣ್ಯಗಳಲ್ಲಿ ಹಲವು ವಿಧದ ಮರಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಬೆಳೆಯುವುದಿಲ್ಲವೇ? ಅದೇ ರೀತಿ ತೋಟವೊಂದರಲ್ಲಿ ಬಹುಬಗೆಯ ಬೆಳೆಗಳಿದ್ದರೆ, ಅವೂ ಕೂಡ ಅಚ್ಚರಿಪಡುವ ರೀತಿಯಲ್ಲಿ ಒಟ್ಟೊಟ್ಟಾಗಿ ಬೆಳೆಯುತ್ತವೆ’ ಎಂದು ಮಾರ್ಮಿಕವಾಗಿ ತತ್ವಜ್ಞಾನವೊಂದನ್ನು ಅವರು ಬಿಚ್ಚಿಡುತ್ತಾರೆ.

‘ಹತ್ತಿರದಲ್ಲಿ ಉತ್ಕೃಷ್ಟವಾದ ಕೆರೆಯ ಮಣ್ಣು ಸಿಗುತ್ತದೆ. ಹೊರಗಿನ ಮಣ್ಣು ಹಾಕಿದರೆ ಮರಗಳು ಚನ್ನಾಗಿ ಬರುತ್ತವೆ. ಕೊಟ್ಟಿಗೆ ಗೊಬ್ಬರಕ್ಕೆಂದು ಹಸು–ಎಮ್ಮೆ–ಕುರಿಗಳನ್ನು ಸಾಕಿದ್ದೇವೆ. ಬರುವ ಸಗಣಿಯಿಂದ ಜೀವಾಮೃತ ತಯಾರಿಸುತ್ತಿದ್ದೇವೆ. ಮೇಟಿಕುರ್ಕೆ ಗ್ರಾಮದ ಡೇರಿಗೆ ನಿತ್ಯ ಹಾಲು ಹಾಕುತ್ತೇವೆ. ದೊಡ್ಡದೊಂದು ಕೃಷಿಹೊಂಡ ನಿರ್ಮಿಸಿದ್ದು, ಮೀನು ಸಾಕಣೆ ಮಾಡುತ್ತಿದ್ದೇವೆ. ತೋಟಕ್ಕೆ ಹೊಂದಿರುವ ಖಾಲಿ ಜಮೀನಿನಲ್ಲಿ ಮೆಕ್ಕೆಜೋಳ, ಈರುಳ್ಳಿ ಹಾಕಿದ್ದೇವೆ. ಮೆಕ್ಕೆಜೋಳವನ್ನು ಹಸು–ಎಮ್ಮೆಗಳ ಆಹಾರಕ್ಕೆ ಬಳಸುತ್ತೇವೆ. ಹೆಚ್ಚಾದುದನ್ನು ಮಾತ್ರ ಮಾರಾಟ ಮಾಡುತ್ತೇವೆ. ಈರುಳ್ಳಿ ಪ್ರಯೋಗ ಮಾಡಿದ್ದು, ಅದರಿಂದ ನಷ್ಟವೇ ಹೆಚ್ಚು ಎಂಬ ಸತ್ಯ ಅರಿವಾಗಿದೆ’ ಎನ್ನುತ್ತಾರೆ ಜಾರ್ಜ್.

‘ಬಯಲುಸೀಮೆಯಲ್ಲಿ ಮಲೆನಾಡಿನಲ್ಲಿ ಕಾಣುವಂತಹ ತೋಟ ಮಾಡಬೇಕೆಂಬುದು ನನ್ನ ಬಯಕೆ. ಗಿಡ–ಮರ ಬೆಳೆಸುವುದು ಹವ್ಯಾಸ. ಪ್ರತಿಫಲ ಸಿಗುವ ತೋಟಗಾರಿಕೆಗೆ ತೊಡಗಿದಲ್ಲಿ ಪರಿಸರ ಹಸಿರಾಗುತ್ತದೆ. ಹಾಕಿದ ಬಂಡವಾಳವೂ ಬರುತ್ತದೆ. ತೋಟಗಾರಿಕೆ ಮಾಡಬೇಕೆನ್ನುವವರಿಗೆ ಒಂದಿಷ್ಟು ಮಾರ್ಗದರ್ಶನವೂ ದೊರೆಯುತ್ತದೆ. ಮಿಶ್ರ ಬೆಳೆ ಪದ್ಧತಿಯಲ್ಲಿ ನಷ್ಟವೆಂಬುದು ಇರಲಿಕ್ಕೆ ಸಾಧ್ಯವಿಲ್ಲ. ಒಂದಲ್ಲ ಒಂದು ಬೆಳೆ ನಮ್ಮ ಕೈಹಿಡಿದೇ ಹಿಡಿಯುತ್ತದೆ’ ಎಂಬ ದೃಢ ವಿಶ್ವಾಸ ಜಾರ್ಜ್ ಅವರದ್ದು.

 (ಸಂಪರ್ಕ ಸಂಖ್ಯೆ: 99000–03337)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು