ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: 'ಖರೀದಿ ವಸ್ತುವಿಗೆ ರಸೀದಿ ಪಡೆಯಿರಿ'

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸಲಹೆ
Last Updated 25 ಮಾರ್ಚ್ 2023, 5:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸಿದ ತಕ್ಷಣ ಗ್ರಾಹಕರಾಗುತ್ತೇವೆ ಎಂಬುದು ತಪ್ಪು ಕಲ್ಪನೆ. ಸರಕು ಮತ್ತು ಸೇವೆಗೆ ರಸೀದಿ ತೆಗೆದುಕೊಂಡಾಗ ಮಾತ್ರ ನಾವು ಕಾನೂನು ಬದ್ಧ ಗ್ರಾಹಕರಾಗುತ್ತೇವೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಚ್‌.ಎನ್‌. ಮೀನಾ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ಕಡ್ಡಾಯವಾಗಿ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಇದರಿಂದ ವಂಚನೆಗೆ ಒಳಗಾಗದೇ ಜಾಗೃತವಾಗಿರಬಹುದು. ಖರೀದಿಸಿದ ವಸ್ತುವಿಗೆ ಕಡ್ಡಾಯವಾಗಿ ರಸೀದಿ ಪಡೆದಾಗ ಮಾತ್ರ ಕಾನೂನಿನ ರಕ್ಷಣೆ ಸಿಗಲಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸಬೇಡಿ’ ಎಂದರು.

‘ಜಿಲ್ಲಾ ಗ್ರಾಹಕ ಆಯೋಗದಲ್ಲಿ ನೊಂದ ಗ್ರಾಹಕರು ₹ 50 ಲಕ್ಷ, ರಾಜ್ಯ ಆಯೋಗದಲ್ಲಿ ₹ 50 ಲಕ್ಷದಿಂದ ₹ 2 ಕೋಟಿ, ಹಾಗೂ ರಾಷ್ಟ್ರೀಯ ಗ್ರಾಹಕರ ಆಯೋಗದಲ್ಲಿ ₹ 2 ಕೋಟಿಯಿಂದ ₹ 10 ಕೋಟಿವರೆಗೆ ಪರಿಹಾರ ಪಡೆದುಕೊಳ್ಳಬಹುದು. ನೊಂದ ಗ್ರಾಹಕರು ತಾವು ಇರುವ ಸ್ಥಳದಿಂದ ದೂರು ಸಲ್ಲಿಸಬಹುದು ಅಥವಾ ಪ್ರತಿವಾದಿ ಇರುವ ಸ್ಥಳದಲ್ಲಿಯೂ ದೂರು ಸಲ್ಲಿಸಬಹುದು’ ಎಂದು ವಿವರಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯೆ ಬಿ.ಎಚ್‌. ಯಶೋದಾ ಮಾತನಾಡಿ, ‘ಅಳತೆ, ತೂಕ, ಗುಣಮಟ್ಟದ ಕುರಿತು ಪ್ರತಿಯೊಬ್ಬ ಗ್ರಾಹಕರು ಮಾಹಿತಿ ತಿಳಿದುಕೊಳ್ಳಬೇಕು. ಇವುಗಳನ್ನು ತಿಳಿದುಕೊಳ್ಳದೇ ವಸ್ತುಗಳನ್ನು ಖರೀದಿಸಿದರೆ ಅವರಿಗೆ ನಷ್ಟ ಉಂಟಾಗುತ್ತದೆ. ಮೊದಲು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಖರೀದಿಸುವ ವಸ್ತುಗಳ ಬಗ್ಗೆ ಎಚ್ಚರ ವಹಿಸಲು ಸಾಧ್ಯವಾಗುತ್ತದೆ’
ಎಂದರು.

ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಯಶಸ್ವಿಗೊಳಿಸಿದ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ. ಮಧುಸೂದನ್‌, ಕಾನೂನು ಮಾಪನಾಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ. ಗುರುಪ್ರಸಾದ್‌, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಜಿಲ್ಲಾ ಸಂಯೋಜಕ ಬಿ. ಹನುಮಂತಪ್ಪ ಇದ್ದರು.

...........

ಯಾವುದೇ ಒಂದು ವಸ್ತುವನ್ನು ಖರೀದಿಸಿ ಹಣ ಪಾವತಿಸಿದ ನಂತರ ನಾವು ಮಾರಾಟ ಮಾಡಿದ ವ್ಯಕ್ತಿಗೆ ಗ್ರಾಹಕರಾಗುತ್ತೇವೆ. ಆದ್ದರಿಂದ ವಸ್ತುಗಳನ್ನು ಖರೀದಿಸಿದ ತಕ್ಷಣ ಕಡ್ಡಾಯವಾಗಿ ಅದರ ರಸೀದಿ ಪಡೆದುಕೊಳ್ಳಬೇಕು.

-ಎಂ. ತಿಪ್ಪೇಸ್ವಾಮಿ, ಅಧ್ಯಕ್ಷ, ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT