ಹೆಚ್ಚು ಪುಸ್ತಕ ಓದಿದರೆ ಅನುಕೂಲ

ಚಿತ್ರದುರ್ಗ: ಶಿಕ್ಷಣ ಪಡೆದ ಮಾತ್ರಕ್ಕೆ ವಿದ್ಯಾವಂತರಾಗುವುದಿಲ್ಲ. ನಿರಂತರ ಕಲಿಕೆಯಿಂದ ಮಾತ್ರ ಯಶಸ್ಸು ಸಾಧ್ಯ. ಪುಸ್ತಕಗಳನ್ನು ಹೆಚ್ಚು ಓದಿದಂತೆ ಅನುಕೂಲವಾಗುತ್ತದೆ ಎಂದು ಇಸ್ರೊ ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದ ನಿರ್ದೇಶಕ ರಮೇಶ್ ವಿ.ನಾಯ್ಡು ಸಲಹೆ ನೀಡಿದರು.
ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಬಿಇ ಮತ್ತು ಎಂ.ಟೆಕ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಜೀವನದ ಪ್ರತಿ ಹಂತದಲ್ಲೂ ಕಲಿಕೆ ಮುಖ್ಯ. ಜೀವನ ಇರುವವರೆಗೂ ಕಲಿಕೆ ಇದ್ದೇ ಇರುತ್ತದೆ. ಚಿಕ್ಕ ಅನುಭವಗಳು ಪಾಠವನ್ನು ಹೇಳಿಕೊಡುತ್ತವೆ. ಜೀವನದ ಅನುಭವದಿಂದ ನಿಜವಾದ ವಿದ್ಯಾವಂತರಾಗುತ್ತೇವೆ. ಅತಿ ಸಣ್ಣ ವಿಚಾರ ಕೂಡ ನಮ್ಮನ್ನು ಪ್ರೋತ್ಸಾಹಿಸುತ್ತದೆ’ ಎಂದು ಹೇಳಿದರು.
‘ಗುರಿಯ ಕಡೆ ನಡೆಯುವಾಗ ಪ್ರೋತ್ಸಾಹಿಸುವವರು ಇರುವಂತೆ ಕಾಲೆಳೆಯುವವರೂ ಇರುತ್ತಾರೆ. ಪ್ರೋತ್ಸಾಹದ ಕಡೆ ಮಾತ್ರ ಗಮನಹರಿಸಿ ಯಶಸ್ಸು ಸಾಧಿಸಬೇಕು. ಬದುಕಿನ ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಬೇಕು. ಭವಿಷ್ಯದ ಕುರಿತು ಯೋಜನೆಗಳನ್ನು ರೂಪಿಸಿಕೊಳ್ಳಬೇಕು’ ಎಂದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿ ಪಿ.ಎಸ್.ವಸ್ತ್ರದ್, ‘ಹೆಚ್ಚು ತರಬೇತಿ ಪಡೆದವರು ಸಮಸ್ಯೆಗಳನ್ನು ನಿರ್ಭೀತಿಯಿಂದ ನಿಭಾಯಿಸಬಲ್ಲರು. ವಿದ್ಯಾರ್ಥಿಗಳು ತರಬೇತಿಯ ಕಡೆ ಗಮನ ಹರಿಸಬೇಕು. ಸವಾಲುಗಳನ್ನು ಎದುರಿಸಬೇಕು’ ಎಂದು ಹೇಳಿದರು.
‘ಸಮಾಜಕ್ಕೆ ಎಂಜಿನಿಯರುಗಳ ಕೊಡುಗೆ ಅಪಾರ. ಅಬ್ಬುಲ್ ಕಲಾಂ ಅವರಂತಹ ಮಹನೀಯರು ಸಮಾಜದ ಏಳಿಗೆಗೆ ಮನುಕುಲದ ಉದ್ಧಾರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಬೇಕು’ ಎಂದರು.
ಪ್ರಾಂಶುಪಾಲ ಡಾ.ಪಿ.ಬಿ.ಭರತ್ ಮಾತನಾಡಿ, ‘ಭಾರತೀಯ ಆರ್ಥಿಕ ವ್ಯವಸ್ಥೆ ಸ್ವಾತಂತ್ರ್ಯಾನಂತರ ಸದೃಢವಾಗಿ ಬೆಳೆಯುತ್ತಾ ಬಂದಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಕ್ಷೇತ್ರದ್ದೆ ಹೆಚ್ಚಿನ ಪಾಲು. ಇಂದಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಪಾಲು ನೀಡುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ಜಿಡಿಪಿ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.
‘ಆರ್ಥಿಕ ವ್ಯವಸ್ಥೆಯು ಡಿಜಿಲೀಕರಣವಾಗಲಿದೆ. ತಂತ್ರಜ್ಞಾನ ವ್ಯವಸ್ಥೆಯು ಅಭಿವೃದ್ಧಿಯಾಗಲಿದೆ. ಇಂತಹ ಸಂದರ್ಭದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುಂದುವರೆಯಬೇಕು. ಸರ್ಕಾರದ ವಿವಿಧ ಯೋಜನೆಗಳ ಅನುಕೂಲ ಪಡೆದು ಸ್ವ ಉದ್ಯೋಗ ಪ್ರಾರಂಭಿಸಿ ಉದ್ಯಮಿಗಳಾಗಬೇಕು’ ಎಂದು ನುಡಿದರು.
ಪ್ರಾಧ್ಯಾಪಕರಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಎನ್.ಜಗನ್ನಾಥ್, ಪ್ರೊ.ಪೋರಾಳ್ ನಾಗರಾಜ್, ಡಾ.ಸಿದ್ಧೇಶ್ ಕೆ.ಬಿ, ಡಾ.ಶ್ರೀಶೈಲ ಜೆ.ಎಂ, ಡಾ.ಲೋಕೇಶ್ ಎಚ್. ಜೆ, ಡಾ.ನಿರಂಜನ್ ಈ, ಪ್ರೊ.ಶಶಿಧರ ಎ.ಪಿ, ಸಂಚಾಲಕ ಪ್ರೊ.ಲವಕುಮಾರ್ ಟಿ.ಬಿ. ಇದ್ದರು. ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪದಕ ನೀಡಿ ಗೌರವಿಸಲಾಯಿತು. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದ 260 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.