ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯದಿಂದ ಹೊರಬನ್ನಿ, ಚಿಕಿತ್ಸೆ ಪಡೆಯಿರಿ: ಎಡಿಜಿಪಿ ಭಾಸ್ಕರರಾವ್

ಆರೋಗ್ಯ ತಪಾಸಣೆ ಶಿಬಿರ
Last Updated 5 ಜೂನ್ 2021, 5:41 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರಸ್ತೆಗೆ ಅನ್ನ ಚೆಲ್ಲಿ ವ್ಯರ್ಥ ಮಾಡುವುದರಿಂದ, ದೇವರಿಗೆ ಪ್ರಾಣಿ ಬಲಿ ಕೊಡುವುದರಿಂದ ಕೊರೊನಾ ಹೋಗಲ್ಲ. ಇಂತಹ ಮೌಢ್ಯ ಆಚರಣೆಗಳಿಂದ ಹೊರಬನ್ನಿ. ಸೋಂಕು ತಗುಲಿದರೆ, ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿ’ ಎಂದು ರೈಲ್ವೆ ಎಡಿಜಿಪಿ ಭಾಸ್ಕರರಾವ್ ಸಲಹೆ ನೀಡಿದರು.

ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಬೀದಿಯಲ್ಲಿ ಮಾಜಿ ಸಂಸದ ದಿ.ಮುಲ್ಕಾ ಗೋವಿಂದರೆಡ್ಡಿ ಕುಟುಂಬಸ್ಥರು, ಸರ್ವ ಪ್ರೇರಣ ಸಂಸ್ಥೆ, ಜಿಯೋ ವಾಟರ್ ಬೋರ್ಡ್‌ನಿಂದ ಶುಕ್ರವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ಕೊರೊನಾ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

‘ಕೋವಿಡ್ ವಿಶ್ವವನ್ನೇ ಸಂಕಷ್ಟಕ್ಕೆ ದೂಡಿದೆ. ದೇಶವಷ್ಟೇ ಅಲ್ಲದೆ, ರಾಜ್ಯದಲ್ಲೂ ಸಾವು–ನೋವು ಸಂಭವಿಸಿದೆ. ಮಾನಸಿಕ ಒತ್ತಡಕ್ಕೆ ಸಿಲುಕಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂದಿದ್ದನ್ನು ಧೈರ್ಯವಾಗಿ ಎದುರಿಸಲು ಮುಂದಾಗಬೇಕು. ಸರ್ಕಾರದ ಮಾರ್ಗಸೂಚಿ ಪಾಲಿಸಿ, ಕೋವಿಡ್‌ ಬಾರದಂತೆ ಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರಸ್ತುತ ದಿನಗಳಲ್ಲಿ ಕೋವಿಡ್ ಕುರಿತು ಪ್ರತಿ ಗ್ರಾಮಗಳಲ್ಲೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ನಿಯಂತ್ರಣ ಸಂಬಂಧ ಸರ್ಕಾರ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಜತೆಯಲ್ಲಿ ಅನೇಕ ಸಂಘ–ಸಂಸ್ಥೆಗಳು ಕೂಡ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿವೆ. ಆದ್ದರಿಂದ ಎಲ್ಲರೂ ಕೈಜೋಡಿಸಿ ಇದರ ನಿರ್ಮೂಲನೆಗೆ ಮುಂದಾಗಬೇಕಿದೆ’ ಎಂದರು.

‘ರೈಲ್ವೆ ನೌಕರರ ಪೈಕಿ ಬಹುತೇಕರು ಎರಡು ಡೋಸ್ ಲಸಿಕೆ ಈಗಾಗಲೇ ಪಡೆದಿದ್ದಾರೆ. 70 ಜನರಲ್ಲಿ ಕೋವಿಡ್ ದೃಢಪಟ್ಟಿತ್ತು. ಅದರಲ್ಲಿ 60 ಜನ ಸಂಪೂರ್ಣ ಗುಣಮುಖರಾಗಿ, 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಸಿಕೆ ಪಡೆಯದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಒಬ್ಬರು ಮೃತಪಟ್ಟಿದ್ದಾರೆ. ಆದ್ದರಿಂದ ಲಸಿಕೆ ಕುರಿತ ಊಹಾಪೋಹ ನಂಬದೇ ಹಾಕಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಧೈರ್ಯದಿಂದ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರನೇ ಬಾರಿ ಪಾಸಿಟಿವ್ ಬಂದು ಗುಣಮುಖರಾಗಿ ಕೆಲಸಕ್ಕೆ ಮರಳಿರುವ ಉದಾಹರಣೆ ಇವೆ. ಇಲಾಖೆ ನೌಕರರ ದಕ್ಷತೆ ಮೆಚ್ಚುವಂತದ್ದು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಎ.ರೇಖಾ, ಜಲತಜ್ಞ ಡಾ.ಎನ್.ಜೆ. ದೇವರಾಜರೆಡ್ಡಿ, ಪ್ರೊ. ಅಮರನಾರಾಯಣ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT