ಮಂಗಳವಾರ, ಜೂನ್ 28, 2022
26 °C
ಗುಡುಗು–ಮಿಂಚು, ಗಾಳಿ ಸಹಿತ ಕೆಲವೆಡೆ ಹದ ಮಳೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಇದರಿಂದಾಗಿ ಹೊಂಡ-ವಡ್ಡು, ಬಾವಿ-ಕಲ್ಯಾಣಿಗಳಿಗೂ ನೀರು ಹರಿದಿದೆ. ಗುರುವಾರ ರಾತ್ರಿ, ಶುಕ್ರವಾರ ಮಧ್ಯಾಹ್ನ ಕೂಡ ಕೆಲವೆಡೆ ಉತ್ತಮ ಮಳೆಯಾಗಿದೆ.

ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧೆಡೆ ಬಿಸಿಲಿನ ತಾಪಮಾನ ಹೆಚ್ಚಿತ್ತು. ಮಧ್ಯಾಹ್ನ 1.30ರ ನಂತರ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಚಿತ್ರದುರ್ಗದಲ್ಲಿ 2.30ಕ್ಕೆ ಆರಂಭವಾದ ಮಳೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮಧ್ಯಾಹ್ನ 3ರ ಬಳಿಕ ಮಳೆಯ ರಭಸ ಹೆಚ್ಚಾಯಿತು. ತಾಲ್ಲೂಕಿನ ಕೆಲ ಭಾಗಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ.

ಭಯಾನಕ ಗುಡುಗು–ಮಿಂಚು, ಗಾಳಿ ಸಹಿತ ಸುರಿದ ಮಳೆಯಿಂದಾಗಿ ಕೆಲವೆಡೆ ತೆಂಗಿನ ಮರಗಳಿಂದ ಕಾಯಿಗಳು ನೆಲಕ್ಕುರುಳಿದವು. ಜೋರಾಗಿ ಮರಗಳು ಅಲುಗಾಡಿದ್ದರಿಂದ ರೆಂಬೆ, ಕೊಂಬೆ ಎಲ್ಲಿ ಮುರಿದು ಕಾರುಗಳ ಮೇಲೆ ಬೀಳುತ್ತದೋ ಎಂಬ ಆತಂಕ ಕೂಡ ಕೆಲವರಲ್ಲಿ ಉಂಟು ಮಾಡಿತು.

ಮಳೆಯಿಂದಾಗಿ ನಗರದಲ್ಲಿನ ಹೊಂಡಗಳಿಗೂ ನೀರು ಹರಿಯಲಾರಂಭಿಸಿದೆ. ಕೆಲ ಬಡಾವಣೆಗಳಲ್ಲಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆಲ್ಲ ನೀರು ಹರಿಯಿತು. ಕೆಲವೆಡೆ ಸ್ವಚ್ಛ ಕೂಡ ಆದವು. ನಗರ ವ್ಯಾಪ್ತಿಯ ತಗ್ಗು ಪ್ರದೇಶಗಳ ಹಲವು ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕುವಲ್ಲಿ ಕುಟುಂಬಸ್ಥರು ಹೈರಾಣಾಗಿದ್ದಾರೆ.

ಜಿಲ್ಲೆಯ ಹಲವು ಗ್ರಾಮಗಳಲ್ಲೂ ಉತ್ತಮ ಮಳೆಯಾಗುತ್ತಿರುವ ಕಾರಣ ಕೃಷಿ ಚಟುವಟಿಕೆ ಇನ್ನಷ್ಟೂ ಗರಿಗೆದರಿದೆ. ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳಲು ರೈತರಿಗೆ ಅನುಕೂಲವಾಗಿದೆ. ಈಗಾಗಲೇ ಅನೇಕ ರೈತರು ಜಮೀನು, ತೋಟದ ಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ಮಳೆ ಆರಂಭವಾದಾಗಿನಿಂದಲೂ ರೈತರಲ್ಲಿ ಒಂದಿಷ್ಟು ಭರವಸೆ ಮೂಡಿಸಿದೆ.

ಚಿತ್ರದುರ್ಗ ನಗರದಲ್ಲಿ ಗುರುವಾರ ರಾತ್ರಿ 11ರಿಂದ ಆರಂಭವಾದ ಬಿರುಸಿನ ಮಳೆ 11.30ರವರೆಗೂ ಸುರಿಯಿತು. ಕಳೆದ ಎರಡು–ಮೂರು ದಿನಗಳಿಂದಲೂ ಆಗಾಗ ಮಳೆ ಸುರಿಯುತ್ತಿರುವ ಕಾರಣ ಧರೆ ತಂಪಾಗಿದೆ.

ಇಕ್ಕನೂರಿನಲ್ಲಿ 70.4 ಮಿ.ಮೀ ಮಳೆ
ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ ಗುರುವಾರ ರಾತ್ರಿ 70.4 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತಿ ಹೆಚ್ಚು ಮಳೆ ಸುರಿದ ಪ್ರದೇಶವಾಗಿದೆ.

ಚಿತ್ರದುರ್ಗದಲ್ಲಿ 9.6 ಮಿ.ಮೀ, ತುರುವನೂರು 6.4 ಮಿ.ಮೀ, ಐನಹಳ್ಳಿ 7.8 ಮಿ.ಮೀ, ಚಳ್ಳಕೆರೆ 32 ಮಿ.ಮೀ, ಪರಶುರಾಂಪುರ 18.2 ಮಿ.ಮೀ, ತಳಕು 7.2 ಮಿ.ಮೀ, ನಾಯಕನಹಟ್ಟಿ 45.4 ಮಿ.ಮೀ, ಡಿ.ಮರಿಕುಂಟೆ 58.2 ಮಿ.ಮೀ, ಮೊಳಕಾಲ್ಮುರು 7 ಮಿ.ಮೀ, ರಾಯಾಪುರ 15.2 ಮಿ.ಮೀ, ಬಿ.ಜಿ.ಕೆರೆ 6.2 ಮಿ.ಮೀ, ಹಿರಿಯೂರು 54.6 ಮಿ.ಮೀ, ಬಬ್ಬೂರು 63.2 ಮಿ.ಮೀ, ಈಶ್ವರಗೆರೆ 54.8 ಮಿ.ಮೀ, ಸೂಗೂರು 25.2 ಮಿ.ಮೀ, ಹೊಸದುರ್ಗ 32.2 ಮಿ.ಮೀ, ಬಾಗೂರು 10.3 ಮಿ.ಮೀ, ಶ್ರೀರಾಂಪುರ 11 ಮಿ.ಮೀ, ಮಾಡದಕೆರೆ 28 ಮಿ.ಮೀ, ಹೊಳಲ್ಕೆರೆ 9.2 ಮಿ.ಮೀ, ರಾಮಗಿರಿ 15.4 ಮಿ.ಮೀ, ಚಿಕ್ಕಜಾಜೂರು 6.4 ಮಿ.ಮೀ, ಬಿ.ದುರ್ಗ 8.2 ಮಿ.ಮೀ, ಎಚ್.ಡಿ.ಪುರ 3.6 ಮಿ.ಮೀ, ತಾಳ್ಯ 6.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು