ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಮೀಸಲಾತಿಗೆ ಆಗ್ರಹಿಸಿ ಹೆದ್ದಾರಿ ತಡೆ

Last Updated 6 ಫೆಬ್ರುವರಿ 2021, 5:55 IST
ಅಕ್ಷರ ಗಾತ್ರ

ಹಿರಿಯೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಧಿವೇಶನದಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ನಿತ್ಯಾನಂದ ಆಶ್ರಮದ ಬಳಿ ಶುಕ್ರವಾರ ರಸ್ತೆತಡೆ ನಡೆಸಲಾಯಿತು.

‘ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವ ಕಾರಣಕ್ಕೆ ಬುದ್ಧಿ ಸ್ಥಿಮಿತದಲ್ಲಿಲ್ಲ. ಗುರುವಾರ ಸಂಧಾನಕ್ಕೆ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿ.ಸಿ. ಪಾಟೀಲ ಅವರನ್ನು ಕಳುಹಿಸಿ, ಎರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಶುಕ್ರವಾರ ಸದನದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಕೇಳಿದ ಪ್ರಶ್ನೆಗೆ, ಮೀಸಲಾತಿ ಕೊಡುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಗುರುವಾರ ಸಿಹಿ ಕೊಟ್ಟು, ಶುಕ್ರವಾರ ವಿಷ ಉಣಿಸಿದ್ದಾರೆ. ಯಡಿಯೂರಪ್ಪ ಅವರ ಗರ್ವದ ಕೋಟೆಯನ್ನು ಕೆಡವುತ್ತೇವೆ. ಅವರನ್ನು ಇಳಿಸಿ ಬೇರೊಬ್ಬ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

‘ಜವನಗೊಂಡನಹಳ್ಳಿಗೆ ಸಚಿವರಾದ ನಿರಾಣಿ, ಸಿ.ಸಿ. ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಬರಲಿದ್ದು, ಅವರ ಜತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

‘ಸಮುದಾಯವನ್ನು 2 ‘ಎ’ಗೆ ಸೇರಿಸುವ ಆದೇಶದೊಂದಿಗೆ ಮರಳುತ್ತೇವೆ ಎಂದು ಭಕ್ತರಿಗೆ ಮಾತು ಕೊಟ್ಟಿದ್ದೇವೆ. ಅದನ್ನು ಪಡೆಯುವ ತನಕ ಮಠಕ್ಕೆ ಹಿಂದಿರುಗುವುದಿಲ್ಲ. ಹೋರಾಟವನ್ನು ಹಗುರವಾಗಿ ಪರಿಗಣಿಸಬೇಡಿ. ಭರವಸೆ ನೀಡಿದ ಪ್ರಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಗೆಜೆಟ್ ಪ್ರಕಟಣೆ ಹೊರಡಿಸಿ. ಎಲ್ಲ ಜಿಲ್ಲಾಧಿಕಾರಿಗಳಿಗೆ 2 ‘ಎ’ ಪ್ರಮಾಣಪತ್ರ ನೀಡಲು ಆದೇಶ ಮಾಡಿ. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.

ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಿಂದ ಪಾದಯಾತ್ರೆ ಹೊರಟಾಗ ನೂರಿನ್ನೂರು ಸಂಖ್ಯೆಯಲ್ಲಿದ್ದ ಪಾದಯಾತ್ರಿಗಳ ಸಂಖ್ಯೆ ಕೆ.ಆರ್. ಹಳ್ಳಿ ಸಮೀಪದ ನಿತ್ಯಾನಂದ ಆಶ್ರಮ ತಲುಪುವ ವೇಳೆಗೆ ಸಾವಿರ ದಾಟಿತ್ತು. ಜವನಗೊಂಡನಹಳ್ಳಿ ಕಡೆ ಹೆಜ್ಜೆ ಹಾಕುವ ಸಮಯದಲ್ಲಿ ಇದ್ದಕ್ಕಿದ್ದಂತೆ ಹೆದ್ದಾರಿಯ ಎರಡೂ ಬದಿಯಲ್ಲಿ ಸುಮಾರು 20 ನಿಮಿಷ ರಸ್ತೆ ಬಂದ್ ಮಾಡಲಾಯಿತು. ಪೊಲೀಸರು ಮನವೊಲಿಸಿದ ನಂತರ ರಸ್ತೆ ತಡೆ ಬಿಟ್ಟು ಪಾದಯಾತ್ರೆ ಮುಂದುವರಿಸಲಾಯಿತು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮುಖಂಡರಾದ ಎಂ. ತಿಪ್ಪೇಸ್ವಾಮಿ, ಯಶವಂತರಾಜು, ಅರುಣ್ ಕುಮಾರ್ ಇದ್ದರು.

ಪಾದಯಾತ್ರೆ ಜವನಗೊಂಡನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದು, ಶನಿವಾರ ಬೆಳಿಗ್ಗೆ ತುಮಕೂರು ಜಿಲ್ಲೆ ಪ್ರವೇಶಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT