ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

7ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಡ

ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಎಂ.ಚಂದ್ರಪ್ಪ ಭರವಸೆ
Published 29 ಜೂನ್ 2024, 16:23 IST
Last Updated 29 ಜೂನ್ 2024, 16:23 IST
ಅಕ್ಷರ ಗಾತ್ರ

ಹೊಳಲ್ಕೆರೆ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿಯಲ್ಲಿರುವ ಸೌಲಭ್ಯಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ನಾಯಕತ್ವ ಗುಣಗಳ ಕಾರ್ಯಾಗಾರ, ಸರ್ವ ಸದಸ್ಯರ ಮಹಾಸಭೆ ಹಾಗೂ ಉತ್ತಮ ಸೇವಾ ನೌಕರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ 7ನೇ ವೇತನ ಆಯೋಗ ರಚಿಸಲಾಗಿತ್ತು. ವರದಿ ಸಲ್ಲಿಕೆ ಆಗುವ ಮುನ್ನವೇ ಸರ್ಕಾರದ ಅವಧಿ ಮುಗಿಯುತ್ತಿದ್ದರಿಂದ ಸರ್ಕಾರಿ ನೌಕರರಿಗೆ ಶೇ 17ರಷ್ಟು ಮಧ್ಯಂತರ ಪರಿಹಾರ ನೀಡಲಾಗಿತ್ತು. ಈಗ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದರೂ, ಸೌಲಭ್ಯ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಸರ್ಕಾರ ಶೀಘ್ರವೇ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸು ಮಾಡಿರುವ ಸೌಲಭ್ಯಗಳನ್ನು ನೀಡಬೇಕು. ಈ ಬಗ್ಗೆ ಜುಲೈ 15ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಹಾಗೆಯೇ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಲಾಗುವುದು’ ಎಂದರು.

‘ಸರ್ಕಾರಿ ನೌಕರರು ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ತಮಗೆ ಸಿಕ್ಕಿರುವ ಅಮೂಲ್ಯ ಅವಕಾಶವನ್ನು ಬಳಸಿಕೊಂಡು ಜನರ ಸೇವೆ ಮಾಡಬೇಕು. ನಾನು ಇಲ್ಲಿ ಮೂರು ಬಾರಿ ಶಾಸಕನಾಗಿದ್ದು, ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ನನ್ನ ವೇಗಕ್ಕೆ ನೌಕರರು ಕೆಲಸ ಮಾಡಿದ್ದರಿಂದ ಇಷ್ಟು ಕೆಲಸಗಳಾಗಿವೆ. ಕರ್ತವ್ಯದಲ್ಲಿ ಅಸಡ್ಡೆ ತೋರುವ ನೌಕರರನ್ನು ಕಡ್ಡಾಯ ನಿವೃತ್ತಿ ಮಾಡುವುದಾಗಿ ನಿಯಮ ರೂಪಿಸಲಾಗುತ್ತಿದೆ’ ಎಂದು ಎಚ್ಚರಿಸಿದರು.

ಹೊಸದುರ್ಗದ ವ್ಯಕ್ತಿತ್ವ ವಿಕಸನ ತರಬೇತುದಾರ ಎಚ್.ಎಸ್.ನವೀನ್ ಕುಮಾರ್ ಉಪನ್ಯಾಸ ನೀಡಿದರು. ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಸದಸ್ಯ ಆರ್.ಅಶೋಕ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ, ಉಪ ತಹಶೀಲ್ದಾರ್ ಸುನಿಲ್ ಕುಮಾರ, ತಿಪ್ಪೇಶಪ್ಪ, ಅಣ್ಣಪ್ಪ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು, ಸರ್ಕಾರಿ ನೌಕರರು ಇದ್ದರು.

Quote - ಸರ್ಕಾರ ಹಾಗೂ ನೌಕರರು ಒಂದು ರಥದ ಎರಡು ಚಕ್ರಗಳಿದ್ದಂತೆ. ಸರ್ಕಾರ ರೂಪಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂ.ಚಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT