ಹೊಸದುರ್ಗ: ತಾಲ್ಲೂಕಿನಾದ್ಯಂತ ಸಾವೆ ಇಳುವರಿ ಉತ್ತಮವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಹೆಚ್ಚಿನ ಪ್ರಮಾಣದ ಆವಕವಾಗುತ್ತಿದೆ. ಆದರೆ ದರ ದಿಢೀರ್ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಮಾರುಕಟ್ಟೆ ಧಾರಣೆಯಲ್ಲಿ ಏರಿಳಿತ ಕಂಡುಬಂದಿದೆ. ಕ್ವಿಂಟಲ್ ಸಾವೆಗೆ ಆರಂಭದಲ್ಲಿ ₹3700 ದರ ಇತ್ತು. ಅದು ₹3300ಕ್ಕೆ ಇಳಿದು, ಅಲ್ಲಿಂದ ₹3100ಕ್ಕೆ ಕುಸಿಯಿತು. ಸದ್ಯ ₹2,621 ದರವಿದೆ. ಕ್ರಮೇಣವಾಗಿ ಬೆಲೆಯಲ್ಲಿ ಕುಸಿತವಾಗುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ತಾಲ್ಲೂಕಿನಾದ್ಯಂತ ಈ ಬಾರಿ 26,829 ಹೆಕ್ಟೇರ್‌ನಲ್ಲಿ ಸಾವೆ ಬಿತ್ತನೆಯಾಗಿದೆ. ಹದ ಮಳೆ, ಪೂರಕ ವಾತಾವರಣದ ಪರಿಣಾಮವಾಗಿ ಎಕರೆಗೆ ಸರಾಸರಿ 5 ರಿಂದ 6 ಕ್ವಿಂಟಲ್ ಇಳುವರಿ ಬಂದಿದೆ. ಈ ಬಾರಿ ಶೇ 30ರಷ್ಟು ಬಿತ್ತನೆ ಹೆಚ್ಚಾಗಿದೆ. ಹೀಗಾಗಿ ಎಪಿಎಂಸಿಗೆ ಬರುತ್ತಿರುವ ಸಾವೆ ಪ್ರಮಾಣ ಅಧಿಕವಾಗಿದೆ. ಕಳೆದ ಒಂದು ತಿಂಗಳಿನಿಂದ 27,479 ಕ್ವಿಂಟಲ್ ಸಾವೆ ಆವಕವಾಗಿದೆ. ಇನ್ನೂ 3.75 ಲಕ್ಷ ಕ್ವಿಂಟಲ್ ಸಾವೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
‘ಒಣಗಿಸಿದ ಬಳಿಕ ತನ್ನಿ’:
‘ಮಾರುಕಟ್ಟೆಗೆ ತೇವಾಂಶಯುಕ್ತ ಸಾವೆ ಬರುತ್ತಿದೆ. ಆದರೆ ಚೆನ್ನಾಗಿ ಒಣಗಿಸಿದ ಮೇಲೆಯೇ ಅದನ್ನು ಮಾರುಕಟ್ಟೆಗೆ ತರಬೇಕು’ ಎಂದು ಎಪಿಎಂಸಿ ಕಾರ್ಯದರ್ಶಿ ಟಿ. ಗೌತಮ್ ರೈತರಿಗೆ ಸಲಹೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಾವೆ ಹೆಚ್ಚಾಗಿ ಮಹಾರಾಷ್ಟ್ರ ಹಾಗೂ ತಮಿಳುನಾಡಿಗೆ ರವಾನೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಇರುವುದರಿಂದ ಖರೀದಿ ವಿಳಂಬವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೊರ ರಾಜ್ಯದಿಂದಲೂ ಖರೀದಿದಾರನನ್ನು ಕರೆಯಿಸಲಾಗುವುದು. ದಲ್ಲಾಳಿಗಳ ಸಭೆ ನಡೆಸಿ, ಸೂಕ್ತ ಬೆಲೆಯಲ್ಲಿ ಖರೀದಿ ನಡೆಸಲು ಸೂಚಿಸಲಾಗುವುದು ಎಂದು ಗೌತಮ್ ಹೇಳಿದರು.
ಸಾವೆಗೆ ಉತ್ತಮ ಬೆಲೆ ನೀಡುವಂತೆ ಹಾಗೂ ಬೆಂಬಲ ಬೆಲೆ ನಿಗದಿ ಮಾಡುವಂತೆ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್ ಈಶ ಹೇಳಿದರು.
ಯಂತ್ರದಿಂದ ಕಟಾವು ಮಾಡಿದ ನಂತರ ನೇರವಾಗಿ ಮಾರುಕಟ್ಟೆಗೆ ತರಬೇಡಿ. ಧಾರಣೆ ಕಡಿಮೆಯಾಗುತ್ತದೆ. ಚೆನ್ನಾಗಿ ಒಣಗಿಸಿದ ನಂತರ ಸ್ವಚ್ಛಗೊಳಿಸಿ ಉತ್ತಮ ಗುಣಮಟ್ಟದ ಸಾವೆಯನ್ನು ಮಾರುಕಟ್ಟೆಗೆ ತನ್ನಿಸಿ.ಎಸ್ ಈಶ ಸಹಾಯಕ ಕೃಷಿ ನಿರ್ದೇಶಕ
ಸಾವೆ ಬೆಲೆ ದಿಢೀರ್ ಕುಸಿತ: ಆಕ್ರೋಶ
‘ಸಾವೆ ಮಾರುಕಟ್ಟೆಗೆ ಬರುವ ಮುನ್ನ ಕ್ವಿಂಟಲ್‌ಗೆ ₹3500ರಿಂದ ₹4000 ದರ ಇತ್ತು. ಆದರೆ ಸೋಮವಾರದ ಮಾರುಕಟ್ಟೆಯ ಧಾರಣೆ ಕ್ವಿಂಟಲ್‌ಗೆ ₹2800ಕ್ಕೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ಹೀಗಾದರೆ ರೈತರ ಬದುಕು ಹೇಗೆ? ಸಾವೆಗೆ ಸೆ. 9ರೊಳಗೆ ಬೆಲೆ ನಿಗದಿ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರೈತ ಸಂಘದ ಅಧ್ಯಕ್ಷ ಡಿ. ಬೋರೇಶ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಸ್ವಲ್ಪ ತೇವಾಂಶವಿರುವ ಹಾಗೂ ಸಂಪೂರ್ಣ ಒಣಗಿರುವ ಸಾವೆಗೆ ಭಿನ್ನ ದರವಿದೆ. ವರ್ತಕರು ಸಾವೆ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡಬೇಕು. ಆದರೆ ದಲ್ಲಾಳಿಗಳು ಮನಬಂದಂತೆ ದರ ನಿಗದಿ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು. ‘ಕಟಾವಿನ ಸಮಯದಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಸಾವೆ ನೆಲಕ್ಕುರುಳಿದೆ. ಕಟಾವಿನ ನಂತರ ಅದನ್ನು ಒಣಗಿಸಲು ಸಾಕಷ್ಟು ಬಿಸಿಲಿನ ವಾತಾವರಣ ಇಲ್ಲ. ಬೆಲೆ ನಿಗದಿಯಾಗುವವರಿಗೂ ಮನೆಯಲ್ಲಿ ಇಟ್ಟುಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಎಕರೆ ಸಾವೆ ಕಟಾವಿಗೆ ₹2500ರಿಂದ ₹3000 ವ್ಯಯಿಸಬೇಕಾಕಿದೆ. ರೈತರಿಗೆ ಖರ್ಚು ಮಾಡಿದಷ್ಟು ಹಣ ಬಂದರೆ ಸಾಕು ಎನ್ನುವ ಸ್ಥಿತಿ ಇದೆ’ ಎಂದು ಅವರು ವಿವರಿಸಿದರು. ಸರ್ಕಾರ ಕೂಡಲೇ ಸಾವೆ ಕ್ವಿಂಟಲ್‌ಗೆ ₹3500ರಿಂದ ₹4000 ದರ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ರೈತ ಸಂಘದ ಗೌರವಾಧ್ಯಕ್ಷ ಕೆ.ಸಿ. ಮಹೇಶ್ವರಪ್ಪ ಪ್ರಧಾನ ಕಾರ್ಯದರ್ಶಿ ಶಶಿಧರ್ ಪದಾಧಿಕಾರಿಗಳು ಹಾಗೂ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.