ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನೋವಿಗೆ ಸ್ಪಂದಿಸುವವನೇ ನಿಜ ನೇತಾರ

ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Last Updated 8 ನವೆಂಬರ್ 2022, 5:01 IST
ಅಕ್ಷರ ಗಾತ್ರ

ಹೊಸದುರ್ಗ: ಜನರ ನೋವು–ನಲಿವಿಗೆ ಸ್ಪಂದಿಸುವವನೇ ನಿಜವಾದ ನೇತಾರ. ಆದರ್ಶಗಳನ್ನು ಗಾಳಿಗೆ ತೂರಿ, ತತ್ವಗಳನ್ನು ತಮಗೆ ಬೇಕಾದಂತೆ ಹೊಂದಿಸಿಕೊಳ್ಳಬಾರದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಾಣೇಹಳ್ಳಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ರಂಗಭೂಮಿ ಸಮಾಜಕ್ಕೆ ಹಿಡಿದ ಕನ್ನಡಿ. ಸಮಾಜದ ನೋವು ನಲಿವುಗಳನ್ನು ನಮ್ಮ ಮುಂದಿಡುತ್ತದೆ. ಅದರಿಂದ ನಾವು ಬದಲಾಗಬೇಕು. ಬದುಕಿನಲ್ಲಿ ಬದ್ಧತೆಯಿಲ್ಲದೆ ಹೊತ್ತು ಬಂದಂತೆ ಕೊಡೆ ಹಿಡಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಮನುಷ್ಯನಿಗೆ ಆತ್ಮಬಲದ ಜೊತೆಗೆ ಬದ್ಧತೆಯಿದ್ದರೆ ಏನು ಬೇಕಾದರೂ ಸಾಧಿಸಬಹುದು’ ಎಂದು ಹೇಳಿದರು.

ರಂಗಭೂಮಿ ಭಾಷೆ, ಸಂಗೀತ, ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಮಾನವೀಯತೆ ಬೆಳೆಸುವಂತದ್ದು. ಭಾಷೆ, ಸಂಗೀತ, ಭಾವನೆ, ಮಾನವೀಯತೆಯನ್ನು ಒಟ್ಟಾಗಿಸುವುದೇ ರಂಗಭೂಮಿ. ಪಂಡಿತಾರಾಧ್ಯ ಶ್ರೀ ಅವರು ಮುಂದೆ ಇಟ್ಟ ಹೆಜ್ಜೆಯನ್ನು ಎಂದೂ ಹಿಂದಿಡುವುದಿಲ್ಲ. ಇದಕ್ಕೆ 2019ರಲ್ಲಿ ಮಾಡಿದ ಮತ್ತೆ ಕಲ್ಯಾಣ ಕಾರ್ಯಕ್ರಮವೇ ಸಾಕ್ಷಿ ಎಂದು ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

ಮನುಷ್ಯ ಭಾಷೆ ಕಲಿಯುವ ಮೊದಲೇ ಅಭಿನಯ ಕಲಿತಿದ್ದಾನೆ. ಅಭಿನಯ ಮತ್ತು ಕುಣಿತ ರಂಗಭೂಮಿಯ ಮೂಲ ನೆಲೆಗಳು. ಭಾಷೆಗೂ ಮಿಗಿಲಾದ ಅಭಿವ್ಯಕ್ತಿ ಅಭಿನಯಕ್ಕಿದೆ. ಗ್ರೀಕ್‌ ರಂಗಭುಮಿಯೂ ಕುಣಿತದಿಂದಲೇ ಆರಂಭವಾಗಿದೆ. ಕುಣಿತದ ಜೊತೆ ಸಂಗೀತ, ಸಾಹಿತ್ಯದೊಂದಿಗೆ ಮಿಳಿತಗೊಂಡು ಈಗ ನೋಡುವ ಆಧುನಿಕ ನಾಟಕ ರೂಪಕಗಳಾಗಿವೆ. ಎಲ್ಲಾ ಕಲೆಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ ಏಕೈಕ ಕಲಾಪ್ರಕಾರ ರಂಗಭೂಮಿ. ಸರ್ಕಾರದ ಯೋಜನೆಗಳ ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಬೀದಿ ನಾಟಕಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ ಎಂದು ಎಚ್.‌ಎಲ್.‌ ಮಲ್ಲೇಶಗೌಡರು ತಿಳಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ನಾಟಕ ಕಲೆಯನ್ನು ಜೀವಂತವಾಗಿಡುವ ಅಗತ್ಯವಿದೆ. ನಾಟಕದಲ್ಲಿನ ನೀತಿ, ಇತಿಹಾಸ, ಶರಣರ ಬದುಕು ಬರಹ, ಕಾಯಕ ಶ್ರದ್ಧೆ, ಪರೋಪಕಾರಿ ಚಿತ್ರಣಗಳನ್ನು ನೋಡಿ ಕಲಿಯಬೇಕಾಗಿದೆ. ಸರಳ ಮತ್ತು ಸಮಾಧಾನಕರ ಜೀವನವನ್ನು ರಂಗಭೂಮಿ ಕಲಿಸುತ್ತದೆ’ ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.‌ ದಿವಾಕರ್‌, ಕೆಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಂ. ಸಂಜಯ್‌, ಉಜಿರೆ ಎಸ್.ಡಿ.ಎಂ.ಸಿ ಕಾಲೇಜಿನ ಸಹಾಯಕ ಪ್ರಾಧ್ಯಪಕ ಕೆ. ಗಿರೀಶ್‌ ಕುಮಾರ್‌ ಅವರನ್ನು ಅಭಿನಂದಿಸಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಗುರುಸ್ವಾಮಿ, ಜಗಳೂರಿನ ಶಾಸಕ ಎಸ್.ವಿ. ರಾಮಚಂದ್ರ, ಚಿಕ್ಕಜಾಜೂರಿನ ಕೆ.ಎಂ ಶಿವಕುಮಾರ್‌ ಇದ್ದರು. ಸಭಾ ಕಾರ್ಯಕ್ರಮದ ನಂತರ ಬಿ.ಆರ್.‌ ವೆಂಕಟರಮಣ ಐತಾಳ್‌ ನಿರ್ದೇಶನದ ಚಾಣುಕ್ಯ ಪ್ರಪಂಚ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT