ಬುಧವಾರ, ಜನವರಿ 20, 2021
17 °C
ಕಾಯಕಲ್ಪಕ್ಕೆ ಕಾಯುತ್ತಿರುವ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ; ಬೆಳೆದು ನಿಂತ ಮುಳ್ಳುಗಿಡಗಳು

ಹಂದಿ ಗೂಡುಗಳಾಗಿರುವ ಮನೆಗಳು

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಕುಡಿಯಲು ನೀರಿಲ್ಲ. ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ, ಎತ್ತ ನೋಡಿದರೂ ಕಾಣಸಿಗದ ಬೀದಿ ದೀಪಗಳು, ಸೇವೆಯಿಂದ ದೂರವಾಗಿರುವ ವಸತಿ ಯೋಜನೆ ಮನೆಗಳಲ್ಲಿ ಹಂದಿಗಳ ಹಿಂಡು, ರಾತ್ರಿ ವೇಳೆ ಹಾವುಗಳ ಕಾಟ.

- ಇದು ಪಟ್ಟಣದ ರಾಯದುರ್ಗ ರಸ್ತೆಯಲ್ಲಿರುವ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆಯ ಚಿತ್ರಣ.

15 ವರ್ಷಗಳ ಹಿಂದೆ ಪಟ್ಟಣದಲ್ಲಿ ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಪಟ್ಟಣ ಪಂಚಾಯಿತಿ ಈ ಬಡಾವಣೆಯನ್ನು ನಿರ್ಮಾಣ ಮಾಡಿತು. ಇದಕ್ಕೆ ಪಲ್ಲಳ್ಳಿ ತಿಮ್ಮಪ್ಪ ಎಂಬುವವರು ಸ್ಥಳ ವ್ಯವಸ್ಥೆ ಮಾಡಿದ ಕಾರಣ ಅವರ ಹೆಸರನ್ನು ಬಡಾವಣೆಗೆ ಇಡಲಾಗಿದೆ. ಶಾಸಕ ಎನ್.ವೈ.ಗೋಪಾಲಕೃಷ್ಣ ಅವಧಿಯಲ್ಲಿ ಬಡಾವಣೆ ಲೋಕಾರ್ಪಣೆಯಾಗಿತ್ತು.

ಬಡಾವಣೆಯಲ್ಲಿ ಸುಮಾರು 400 ಮನೆಗಳಿವೆ. ಭೂಸೇನಾ ನಿಗಮ ನಿರ್ಮಾಣ ಹೊಣೆ ಹೊತ್ತಿತ್ತು. ತೀರಾ ಬೆರಳೆಣಿಕೆಯಷ್ಟು ಫಲಾನುಭವಿಗಳು ಮಾತ್ರ ಇಲ್ಲಿ ವಾಸ ಮಾಡುತ್ತಿದ್ದಾರೆ. ಪರಿಣಾಮ ಬಹುತೇಕ ಮನೆಗಳು ಖಾಲಿ ಉಳಿದಿಕೊಂಡಿವೆ. ನಿರ್ವಹಣೆ ಇಲ್ಲದಿರುವುದು ಸಹ ಮನೆಗಳು ಹಾಳಾಗಲು, ಬಡಾವಣೆ ವ್ಯರ್ಥವಾಗಲು ಕಾರಣವಾಗಿದೆ ಎಂದು ನಿವಾಸಿ ರಾಮಕ್ಕ ದೂರಿದರು.

ಫಲಾನುಭವಿಗಳ ಆಯ್ಕೆ ಮಾಡುವಾಗ ಸರಿಯಾದ ನಿಯಮ ಪಾಲನೆಯಾಗಿಲ್ಲ. ಕೆಲವರು ಆಂಧ್ರದವರು ಇಲ್ಲಿ ಮನೆಗಳನ್ನು ಪಡೆದಿದ್ದಾರೆ. ಇನ್ನೂ ಕೆಲವರು ಎರಡು, ಮೂರು ಮನೆಗಳನ್ನು
ಒಬ್ಬರೇ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

‘ಮನೆ ವ್ಯರ್ಥವಾಗುತ್ತಿರುವುದನ್ನು ಅರಿತ ಪಟ್ಟಣ ಪಂಚಾಯಿತಿ ಮರು ಸಮೀಕ್ಷೆ, ಮರು ಹಂಚಿಕೆ ಕೆಲಸ ಮಾಡಿತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಾಜ್ಯ ಹಣಕಾಸು ಯೋಜನೆಗಳಲ್ಲಿ ಬಡಾವಣೆಗೆ ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆ ಮಾಡಿತು. ಆದರೆ, ಫಲಾನುಭವಿಗಳು ವಾಸ ಮಾಡದ ಕಾರಣ ಬಡಾವಣೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ’ ಎಂದು ಬಡಾವಣೆಯ ಹೊನ್ನೂರಪ್ಪ, ಯಲ್ಲಮ್ಮ ಹೇಳಿದರು.

‘ಇಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ವ್ಯವಸ್ಥೆ ಇಲ್ಲ. ಗುಡ್ಡದ ಪಕ್ಕದಲ್ಲಿದ್ದು, ಬಡಾವಣೆಯಲ್ಲಿ ಮುಳ್ಳುಗಂಟಿಗಳು ಬೆಳೆದಿರುವ ಕಾರಣ ವಿಷಜಂತುಗಳ ವಾಸಸ್ಥಳವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಮನವಿ ಸಲ್ಲಿಸಿದಾಗ, ಚುನಾವಣೆ ಸಮಯದಲ್ಲಿ ಪರಿಹರಿಸುವ ಭರವಸೆ ಸಿಗುತ್ತದೆ. ನಂತರ ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದು ನಿವಾಸಿಗಳು ದೂರುತ್ತಾರೆ.

ಈಚೆಗೆ ಪಟ್ಟಣ ಪಂಚಾಯಿತಿಯಲ್ಲಿ ಹೊಸ ಸದಸ್ಯರು ಅಧಿಕಾರ ವಹಿಸಿಕೊಂಡಿದ್ದು ಇತ್ತ ಗಮನಹರಿಸಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು