ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲಾಭಿವೃದ್ಧಿ ಕೇಂದ್ರಕ್ಕೆ ಹೈಟೆಕ್‌ ಕಟ್ಟಡ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶಿಕ್ಷಕರಿಗೆ ತರಬೇತಿ
Last Updated 26 ಜುಲೈ 2019, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಜ್ಞಾನ ಹಾಗೂ ಗಣಿತ ಬೋಧನೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಾರಂಭಿಸಲಿರುವ ಕೌಶಲಾಭಿವೃದ್ಧಿ ಕೇಂದ್ರಕ್ಕೆ (ಎಸ್‌ಡಿಸಿ) ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿ ಹೈಟೆಕ್‌ ಕಟ್ಟಡ ನಿರ್ಮಾಣವಾಗುತ್ತಿದೆ.

ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್‌) ಸುಮಾರು ₹ 35 ಕೋಟಿ ಅನುದಾನ ನೀಡಿದೆ. ಅಂದಾಜು 2,400 ಚದರ ಅಡಿಯ ಸುಸಜ್ಜಿತ ಕಟ್ಟಡದ ನಿರ್ಮಾಣ ಮುಕ್ತಾಯ ಹಂತ ತಲುಪಿದ್ದು, ಸೆಪ್ಟೆಂಬರ್‌ಗೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ. ಈವರೆಗೂ ಈ ಕೇಂದ್ರವನ್ನು ಟ್ಯಾಲೆಂಟ್‌ ಡೆವಲಪ್‌ಮೆಂಟ್‌ ಸೆಂಟರ್‌ (ಟಿಡಿಸಿ) ಎಂದು ಕರೆಯಲಾಗುತ್ತಿತ್ತು.

ಕುದಾಪುರ ಕ್ಯಾಂಪಸ್‌ ಎರಡನೇ ಮನೆ ಎಂಬ ಅಭಿಮಾನವನ್ನು ಭಾರತೀಯ ವಿಜ್ಞಾನ ಸಂಸ್ಥೆ ಹೊಂದಿದೆ. 1,500 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಒಂದೊಂದೆ ಕಟ್ಟಡ, ಸೌಲಭ್ಯಗಳು ಲಭ್ಯವಾಗುತ್ತಿವೆ. ಕರ್ನಾಟಕ ಸೇರಿ ದೇಶದ ಎಲ್ಲ ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಇಲ್ಲಿ ತರಬೇತಿ ಪಡೆದಿದ್ದಾರೆ. ಸಾವಿರಾರು ಮಕ್ಕಳು ಭೇಟಿ ನೀಡಿ ವಿಜ್ಞಾನ ಹಾಗೂ ಗಣಿತದ ಬಗೆಗೆ ಜ್ಞಾನ ಹೆಚ್ಚಿಸಿಕೊಂಡಿದ್ದಾರೆ.

2011ರಿಂದ ಆರಂಭವಾದ ಈ ಕೇಂದ್ರ, ಪ್ರೌಢಶಾಲೆ, ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರಿಗೆ ತರಬೇತಿ ನೀಡುತ್ತಿದೆ. 10 ದಿನಗಳ ತರಬೇತಿಗೆ ವಸತಿ ವ್ಯವಸ್ಥೆಯೂ ಇದೆ. ಪದವಿ ಪೂರ್ವ ಶಿಕ್ಷಣ, ಬಿ.ಎಸ್ಸಿ, ಎಂ.ಎಸ್ಸಿ, ನವೋದಯ ವಿದ್ಯಾಶಾಲೆ ಹಾಗೂ ಕೇಂದ್ರೀಯ ವಿದ್ಯಾಲಯದ ಶಿಕ್ಷಕರು ಕೂಡ ತರಬೇತಿಗೆ ಹಾಜರಾಗುತ್ತಾರೆ. ದೇಶದ ಎಲ್ಲ ರಾಜ್ಯಗಳಿಂದ ಬರುವ ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರಿಗೆ 21 ದಿನ ತರಬೇತಿ ನೀಡಲಾಗುತ್ತದೆ.

ಆರು ಸುಸಜ್ಜಿತ ಕೊಠಡಿಗಳು ನೂತನ ಕಟ್ಟಡದಲ್ಲಿವೆ. ಅಂತರರಾಷ್ಟ್ರೀಯ ಮಾನದಂಡ ಆಧರಿಸಿ ತರಗತಿ ಕೊಠಡಿ ನಿರ್ಮಿಸಲಾಗಿದೆ. ರಸಾಯನ ವಿಜ್ಞಾನ, ಭೌತವಿಜ್ಞಾನ, ಜೀವವಿಜ್ಞಾನಕ್ಕೆ ಪ್ರತ್ಯೇಕ ಪ್ರಯೋಗಾಲಯಗಳಿವೆ. ವೀಕ್ಷಣೆಗೆ ಬರುವ ಮಕ್ಕಳನ್ನು ವಿಜ್ಞಾನದತ್ತ ಸೆಳೆಯಲು ಮತ್ತೊಂದು ಪ್ರಯೋಗಾಲಯವಿದೆ. ಏರೊನಾಟಿಕ್ಸ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಎಲೆಕ್ಟ್ರಿಕಲ್‌ ವಿಭಾಗದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ವರ್ಕ್‌ಶಾಪ್‌ ಕೂಡ ಇವೆ.

ಕಟ್ಟಡದ ಮೊದಲ ಮಹಡಿಯಲ್ಲಿ ಸುಸಜ್ಜಿತ ಸಭಾಂಗಣವಿದೆ. ಅಂತರರಾಷ್ಟ್ರೀಯ ಸಮ್ಮೇಳನ ನಡೆಸಲು ಸಾಧ್ಯವಿರುವ ಸೌಕರ್ಯ ಇದರಲ್ಲಿವೆ. ಸಭಾಂಗಣದಲ್ಲಿ 250 ಆಸನಗಳಿದ್ದು, ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಗ್ರಂಥಾಲಯವನ್ನು ಅತ್ಯುತ್ತಮವಾಗಿ ವಿನ್ಯಾಸ ಮಾಡಲಾಗಿದೆ. ಚಳ್ಳಕೆರೆ ಕ್ಯಾಂಪಸ್‌ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಪ್ರೊ.ಬಿ.ಎನ್‌.ರಂಘುನಂದನ್‌ ಹಾಗೂ ಟಿಡಿಸಿ ಸಂಚಾಲಕ ಎಂ.ಎಸ್‌.ಹೆಗ್ಡೆ ಉಸ್ತುವಾರಿಯಲ್ಲಿ ಉತ್ತಮ ಸ್ವರೂಪ ಪಡೆಯುತ್ತಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಹಯೋಗದೊಂದಿಗೆ ಹವಮಾನ ಸಂಶೋಧಣಾ ಕೇಂದ್ರ ಆರಂಭವಾಗಲಿದೆ. ಸೌರ ವಿದ್ಯುತ್‌ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆಗಳು ನಡೆಯುತ್ತಿದೆ. ಜೈವಿಕ ಇಂಧನ ಹಾಗೂ ಕಡಿಮೆ ಹೊಗೆ ತಂತ್ರಜ್ಞಾನ ಕೇಂದ್ರ (ಸಿಬೆಲ್ಟ್‌) ಸ್ಥಳೀಯರಿಗೆ ತರಬೇತಿ ನೀಡುತ್ತಿದೆ. ಕಡಿಮೆ ಹೊಗೆಯ ಒಲೆ ಪರಿಚಯಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವ ಬಗೆಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT