ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪ್ರವೇಶಾತಿ ಆರಂಭ: ವಿಜ್ಞಾನ, ವಾಣಿಜ್ಯಕ್ಕೆ ಹೆಚ್ಚಿದ ಬೇಡಿಕೆ

ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ಹಲವು ಅವಕಾಶ
Last Updated 27 ಮೇ 2022, 5:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪಿಯು ಹಾಗೂ ತತ್ಸಮಾನ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ವಿಜ್ಞಾನದ ಜೊತೆಗೆ ವಾಣಿಜ್ಯ ವಿಭಾಗಕ್ಕೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಒಲವು ತೋರುತ್ತಿದ್ದಾರೆ.

ಕೆಲ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ತಲುಪಿದೆ. ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇರೆಗೆ ಸೀಟು ಹಂಚಿಕೆ ಮಾಡಲಾಗಿದೆ. ಕಾಲೇಜಿನ ಮೂಲಸೌಲಭ್ಯದ ಆಧಾರದ ಮೇರೆಗೆ ಸೀಟಿನ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಪ್ರವೇಶ ಬಯಸಿ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅವಕಾಶವಿದೆ.

ಜಿಲ್ಲೆಯ 136 ಪದವಿ ಪೂರ್ವ ಕಾಲೇಜುಗಳ ಪೈಕಿ 126 ಕಾಲೇಜುಗಳಲ್ಲಿ ಪ್ರವೇಶಾತಿಗೆ ಅವಕಾಶವಿದೆ. ಇದರಲ್ಲಿ 36 ಸರ್ಕಾರಿ, 46 ಅನುದಾನಿತ ಹಾಗೂ 44 ಅನುದಾನ ರಹಿತ ಕಾಲೇಜುಗಳಿವೆ. ಎಲ್ಲ ಕಾಲೇಜುಗಳಲ್ಲಿ ಅಂದಾಜು 16 ಸಾವಿರ ಸೀಟುಗಳು ಲಭ್ಯ ಇವೆ. ಡಿಪ್ಲೊಮಾ, ಜಿಟಿಟಿಸಿ, ಐಟಿಐ ಸೇರಿ ಇತರ ಕೋರ್ಸ್‌ಗಳತ್ತಲೂ ವಿದ್ಯಾರ್ಥಿಗಳು ಗಮನ ಹರಿಸುವುದರಿಂದ ಸೀಟು ಕೊರತೆ ಉಂಟಾಗದು ಎಂಬುದು ಅಧಿಕಾರಿಗಳ ಅಭಿಪ್ರಾಯ. 23,095 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೈಕಿ 21,780 ಮಕ್ಕಳು ಪಿಯು ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

‘ನಗರ ಹಾಗೂ ಪಟ್ಟಣ ಪ್ರದೇಶದಲ್ಲಿರುವ ಪಿಯು ಕಾಲೇಜುಗಳಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚು. ಗ್ರಾಮೀಣ ಪ್ರದೇಶದಲ್ಲಿ ಕಲಾ ವಿಭಾಗಕ್ಕೆ ಹೆಚ್ಚು ವಿದ್ಯಾರ್ಥಿಗಳು ಒಲವು ತೋರುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುತ್ತಿದೆ. ಎಲ್ಲರಿಗೂ ಪ್ರವೇಶಾತಿ ಕಲ್ಪಿಸಲಾಗುತ್ತಿದೆ’ ಎನ್ನುತ್ತಾರೆ ಪ್ರಭಾರ ಡಿಡಿಪಿಯು ಸುಧೀಂದ್ರ.

ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣದತ್ತ ಆಕರ್ಷಿತರಾದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಸೇರುತ್ತಿದ್ದಾರೆ. ಮೂಲ ವಿಜ್ಞಾನಕ್ಕೂ ಬೇಡಿಕೆ ಹೆಚ್ಚಾಗಿದ್ದರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವಿದೆ. ನರ್ಸಿಂಗ್‌ ಹಾಗೂ ಅರೆ ವೈದ್ಯಕೀಯ ಶಿಕ್ಷಣ ಪಡೆಯುವ ಹಾದಿಯೂ ಸುಗಮವಾಗುತ್ತದೆ. ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಪದವಿ, ಸ್ನಾತಕೋತ್ತರ ಪದವಿ ಸೇರಿ ಹಲವು ಕೋರ್ಸ್‌ಗಳ ಪ್ರವೇಶಾತಿಗೆ ಇದು ಅನುಕೂಲವಾಗಲಿದೆ. ಬ್ಯಾಂಕಿಂಗ್‌, ಮಾರ್ಕೆಟಿಂಗ್‌, ಉದ್ಯಮದತ್ತ ಒಲವು ಹೊಂದಿದವರು ವಾಣಿಜ್ಯ ಕೋರ್ಸ್‌ ಸೇರುವುದು ಸೂಕ್ತ.

ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಶುಲ್ಕ ವಿನಾಯಿತಿ ಕಲ್ಪಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಎಲ್ಲ ವರ್ಗದ ವಿದ್ಯಾರ್ಥಿನಿಯರಿಗೆ ₹ 250 ಶುಲ್ಕ ಮಾತ್ರ ನಿಗದಿಪಡಿಸಲಾಗಿದೆ. ಪಿಯು ಪ್ರಶ್ನೆಪತ್ರಿಕೆಯ ಮೌಲ್ಯಮಾಪನಕ್ಕೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ತೆರಳಿದ್ದರಿಂದ ಅನೇಕ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ತೊಡಕಾಗಿದೆ.

ತಾಂತ್ರಿಕ ಕೋರ್ಸ್‌ಗೆ ಅವಕಾಶ

ತಾಂತ್ರಿಕ ಕೋರ್ಸ್‌ಗಳ ಕಡೆಗೂ ವಿದ್ಯಾರ್ಥಿಗಳು ಚಿತ್ತ ಹರಿಸಲು ಜಿಲ್ಲೆಯಲ್ಲಿ ಹಲವು ಅವಕಾಶಗಳಿವೆ. ವೃತ್ತಿಪರ ಆಲೋಚನೆ ಹೊಂದಿದವರು, ಉದ್ಯೋಗದ ಅಗತ್ಯ ಇರುವವರಿಗೆ ಈ ಕೋರ್ಸ್‌ಗಳು ಸೂಕ್ತ.

ಎಸ್ಸೆಸ್ಸೆಲ್ಸಿ ಬಳಿಕ ವೃತ್ತಿ ಶಿಕ್ಷಣದತ್ತ ಹೊರಳುವ ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ನೀಡುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಚಿತ್ರದುರ್ಗ ಹಾಗೂ ಚಳ್ಳಕೆರೆಯಲ್ಲಿವೆ. ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಡಿಪ್ಲೊಮಾ ಇನ್‌ ಟೂಲ್‌ ಮೇಕಿಂಗ್ ಹಾಗೂ ಡಿಪ್ಲೊಮಾ ಇನ್‌ ಮೆಕಟ್ರಾನಿಕ್ಸ್‌ ಕೋರ್ಸ್‌ಗಳು ಲಭ್ಯ ಇವೆ. ಮೂರು ವರ್ಷದ ತರಗತಿ ಹಾಗೂ ಒಂದು ವರ್ಷದ ಕೈಗಾರಿಕಾ ತರಬೇತಿ ಕಡ್ಡಾಯ.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿಯ ಒಂಬತ್ತು ಡಿಪ್ಲೊಮಾ ಕಾಲೇಜುಗಳಿವೆ. ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದರೆ ಉದ್ಯೋಗ ಪಡೆಯುವುದು ಸುಲಭ. ಮೂರು ವರ್ಷದ ಕೋರ್ಸ್‌ ಮೊಟಕುಗೊಳಿಸಿದರೂ ಪ್ರಮಾಣ ಪತ್ರ ಲಭ್ಯವಾಗುತ್ತದೆ. ಎಲ್ಲ ಕಾಲೇಜುಗಳಲ್ಲಿ ಪ್ರವೇಶಾತಿ ಶುರುವಾಗಿದೆ.

ಖಾಸಗಿ ಕಾಲೇಜುಗಳಲ್ಲಿ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು 80ಕ್ಕೆ ಮಿತಿಗೊಳಿಸಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಬಯಸಿ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗುತ್ತದೆ.

-ಸುಧೀಂದ್ರ, ಪ್ರಭಾರ ಡಿಡಿಪಿಯು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT