ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಕೊರತೆ: ಕಾರ್ಮಿಕರ ಶೋಷಣೆ

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ
Last Updated 1 ಮೇ 2019, 10:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಕ್ಕು ಹಾಗೂ ಸೌಲಭ್ಯಗಳಿಗೆ ಸಂಬಂಧಿಸಿದ ಅರಿವಿನ ಕೊರತೆಯಿಂದ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ವಕೀಲರ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ‘ವಿಶ್ವ ಕಾರ್ಮಿಕರ ದಿನಾಚರಣೆ’ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು, ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿರುವ ಶೇ 65ರಷ್ಟು ಜನರು ಕಾರ್ಮಿಕರು. ಕಾರ್ಮಿಕ ಎಂಬ ಪದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಸ್ವರೂಪ ನೀಡಿದೆ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೆಲಸ ಮಾಡುವವರನ್ನು ಕಾರ್ಮಿಕರು ಎಂದು ಪರಿಗಣಿಸಲಾಗಿದೆ. ಆದರೆ, ಬಹುತೇಕರಿಗೆ ಇದರ ಪರಿವೇ ಇಲ್ಲ’ ಎಂದರು.

‘ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅನನ್ಯ. ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆಯೂ ಅಪಾರ. ವೃತ್ತಿ ಆಧಾರಿತ ಸಂಘಟನೆಗಳಲ್ಲಿ ಒಗ್ಗಟ್ಟು ಗೋಚರಿಸುತ್ತದೆ. ಆದರೆ, ಕಾರ್ಮಿಕ ವರ್ಗದಲ್ಲಿ ಒಗ್ಗಟ್ಟು ಇಲ್ಲ. ಇದರಿಂದ ಶೋಷಣೆ ತಪ್ಪುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕಟ್ಟಡ ಕಾರ್ಮಿಕರಿಗೆ ಸರ್ಕಾರ ಹಲವು ಸೌಲಭ್ಯ ಒದಗಿಸಿದೆ. ನಿರ್ಮಾಣವಾಗುವ ಪ್ರತಿ ಕಟ್ಟಡದಿಂದ ಶೇ 2ರಷ್ಟು ಸೆಸ್‌ ಸಂಗ್ರಹಿಸಲಾಗುತ್ತಿದೆ. ಹೀಗೆ ಸಂಗ್ರಹಿಸಿದ ಕರದ ಮೊತ್ತ ಸಾಕಷ್ಟಿದ್ದು, ಸದ್ಬಳಕೆ ಆಗುತ್ತಿಲ್ಲ. ಕಾರ್ಮಿಕರು ದುಡಿಯುತ್ತ ಕಾಲಗರ್ಭದಲ್ಲಿ ಹೂತು ಹೋಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾರ್ಮಿಕರ ರಕ್ಷಣೆಗೆ ಸರ್ಕಾರ ಹಲವು ಕಾಯ್ದೆಗಳನ್ನು ರೂಪಿಸಿದೆ. ಕನಿಷ್ಠ ಕೂಲಿ ಕಾಯ್ದೆ, ಕಾರ್ಮಿಕ ಕಾಯ್ದೆಗಳು ಹಲವು ಹಕ್ಕುಗಳನ್ನು ನೀಡಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಒದಗಿಸಬಹುದಾದ ಸೌಲಭ್ಯಗಳಿಗೆ ಸಂಬಂಧಿಸಿದಂತೆ ವಿವರವಾಗಿ ಉಲ್ಲೇಖಿಸಲಾಗಿದೆ. ಊಟ ಒದಗಿಸಿ, ಆರೋಗ್ಯ ಕಾ‍ಪಾಡುವ ಹೊಣೆ ಮಾಲೀಕರ ಮೇಲಿದೆ’ ಎಂದು ಹೇಳಿದರು.

‘ಬಹುತೇಕ ಕಾರ್ಮಿಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ದುಡಿದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವನ್ನು ದುಶ್ಚಟಗಳಿಗೆ ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಕೌಟುಂಬಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮದ್ಯ, ಧೂಮಪಾನ ತ್ಯಜಿಸಿದರೆ ಬದುಕು ಹಸನವಾಗುತ್ತದೆ’ ಎಂದು ಸಲಹೆ ನೀಡಿದರು.

‘ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುತ್ತಿರುವುದು ಕಳವಳಕರಿ ಸಂಗತಿ. ಶಿಕ್ಷಣವನ್ನು ಮೊಟಕುಗೊಳಿಸಿ ಕೆಲಸಕ್ಕೆ ಕಳುಹಿಸುವುದು ಕಾನೂನು ಪ್ರಕಾರ ಅಪರಾಧ. ಸಿಗರೇಟು, ಬೀಡಿ, ಪಟಾಕಿ ತಯಾರಿಕೆ ಸೇರಿ ಅಪಾಯಕಾರಿ ಸ್ಥಳದಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ತಪ್ಪಬೇಕು’ ಎಂದರು.

‘ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತಿದೆ. 60 ವರ್ಷ ತುಂಬಿದ ಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ ಕೂಡ ಜಾರಿಗೆ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರಿಂದ ರಸ್ತೆ ಕೆಲಸ ಮಾಡುವ ಕಾರ್ಮಿಕರಿಗೂ ಈ ಸೌಲಭ್ಯ ಸಿಗುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ನ್ಯಾಯಾಧೀಶರಾದ ಡಿ.ವೀರಣ್ಣ, ಟಿ.ಶಿವಣ್ಣ, ಎಸ್‌.ಆರ್‌.ದಿಂಡಲಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್‌.ವಿಜಯಕುಮಾರ್‌, ಉಪಾಧ್ಯಕ್ಷ ಟಿ.ನಾಗೇಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್‌, ಕಾರ್ಮಿಕ ಇಲಾಖೆ ಅಧಿಕಾರಿ ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT