ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲು ಆಗ್ರಹ

Last Updated 21 ಸೆಪ್ಟೆಂಬರ್ 2020, 12:01 IST
ಅಕ್ಷರ ಗಾತ್ರ

ಹಿರಿಯೂರು: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಸೋಮವಾರ ನಗರದ ತಾಲ್ಲೂಕು ಕಚೇರಿ ಎದುರು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.

‘ಈ ಎರಡೂ ಕಾಯ್ದೆಗಳು ರೈತರಿಗೆ ಮರಣ ಶಾಸನದಂತಿವೆ. ಕಾರ್ಪೊರೇಟ್ ವಲಯದವರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಕಾಯ್ದೆ ಜಾರಿಗೆ ಹೊರಟಿವೆ. ಕೆಲವೇ ವರ್ಷಗಳಲ್ಲಿ ಜಮೀನಿನ ಮಾಲೀಕ ತನ್ನದೇ ಜಮೀನಿನಲ್ಲಿ ಕೂಲಿ ಕೆಲಸ ಮಾಡಬೇಕಾಗಿ ಬರುತ್ತದೆ. ಅದೇ ರೀತಿ ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ದಶಕಗಳಿಂದ ಹೋರಾಟ ನಡೆಸುತ್ತ ಬಂದಿರುವ ರೈತರು ಎಪಿಎಂಸಿ ಕಾಯ್ದೆ ಜಾರಿಯಿಂದ ತನ್ನ ಪ್ರಶ್ನಿಸುವ ಹಕ್ಕು ಕಳೆದುಕೊಳ್ಳುತ್ತಾರೆ’ ಎಂದು ಧರಣಿ ನಿರತರು ಆರೋಪಿಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹೊಸದುರ್ಗ ತಾಲ್ಲೂಕುಗಳಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಬೆಲೆ ಕುಸಿತದಿಂದ ರೈತರನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹ 7,500 ದರ ನಿಗದಿಪಡಿಸಿ ತಕ್ಷಣ ಖರೀದಿ ಕೇಂದ್ರ ಆರಂಭಿಸಬೇಕು. ಈಚೆಗೆ ಬಿದ್ದ ಮಳೆಗೆ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದ್ದು, ಬೆಳೆ ನಷ್ಟ ಪರಿಹಾರ ಕೊಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಹೂವು–ಹಣ್ಣು–ತರಕಾರಿ ಬೆಳೆಗಳಿಗೆ ಘೋಷಿಸಿದ್ದ ಪರಿಹಾರದ ಹಣ ತಲುಪದೇ ಇರುವ ರೈತರ ಖಾತೆಗಳಿಗೆ ಪರಿಹಾರದ ಮೊತ್ತವನ್ನು ಜಮಾ ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಭೂಮಿ ಸಾಗುವಳಿ ಮಾಡಿರುವ ರೈತರಿಗೆ ಸಾಗುವಳಿ ಪತ್ರ ಕೊಡಬೇಕು. ಧರ್ಮಪುರ ಹೋಬಳಿಯ ಕೆರೆಗಳಿಗೆ ವಿವಿ ಸಾಗರದಿಂದ ನೀರು ತುಂಬಿಸಬೇಕು. ಹಿರಿಯೂರು ತಾಲ್ಲೂಕಿಗೆ ಗ್ರಾಮೀಣ ಸಾರಿಗೆ ಮಂಜೂರು ಮಾಡಬೇಕು. ಅಕ್ಟೋಬರ್ ಮೊದಲ ವಾರದಲ್ಲಿ ತಾಲ್ಲೂಕಿನಲ್ಲಿ ಕಡಲೆ ಬಿತ್ತನೆ ಮಾಡುವ ಕಾರಣ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಕಡಲೆ ಬೀಜ, ಯೂರಿಯಾ ಗೊಬ್ಬರ ದಾಸ್ತಾನು ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷ ತಿಮ್ಮಾರೆಡ್ಡಿ, ಕಸವನಹಳ್ಳಿ ರಮೇಶ್, ವೀರಣ್ಣಗೌಡ, ಬಿ. ರಂಗಸ್ವಾಮಿ, ವಿರೂಪಾಕ್ಷಪ್ಪ, ಕೆ.ಎಂ. ಸುರೇಶ್, ಕೆ.ಎಂ. ನರಸಿಂಹಮೂರ್ತಿ, ಎಂ.ಆರ್. ತಿಪ್ಪೇಸ್ವಾಮಿ, ಸಣ್ಣನಾಗಪ್ಪ, ದಾದಾಪೀರ್, ಮೊಹಿದೀನ್, ರಂಗಸ್ವಾಮಿ, ಶಶಿಕಲಾ, ತಿಮ್ಮಕ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT