ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಸನಮುಕ್ತ ರಾಜ್ಯಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿರುವ ಲಾವಣ್ಯಾ ಪ್ರಶ್ನೆ

ವ್ಯಸನಮುಕ್ತ ರಾಜ್ಯಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿರುವ ಲಾವಣ್ಯಾ ಪ್ರಶ್ನೆ
Last Updated 21 ಅಕ್ಟೋಬರ್ 2021, 20:51 IST
ಅಕ್ಷರ ಗಾತ್ರ

ಹಿರಿಯೂರು: ರಾಜ್ಯವನ್ನು ವ್ಯಸನಮುಕ್ತ ಮಾಡುವಂತೆ ಒತ್ತಾಯಿಸಿತಾಲ್ಲೂಕಿನ ಹೇಮದಳ ಗ್ರಾಮದ ವಿದ್ಯಾರ್ಥಿನಿ ಎಚ್.ಸಿ. ಲಾವಣ್ಯಾ ಹಿರಿಯೂರಿನಿಂದ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯವರೆಗೆ 40 ಕಿ.ಮೀ. ಪಾದಯಾತ್ರೆಯನ್ನು ಗುರುವಾರ ಆರಂಭಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪಾದಯಾತ್ರೆ ಆರಂಭಿಸಿದ ಅವರು, ‘ಮದ್ಯ ವ್ಯಸನದಿಂದ ಲಕ್ಷಾಂತರ ಕುಟುಂಬಗಳ ನೆಮ್ಮದಿ ಹಾಳಾಗಿದೆ. ಕುಡಿತದ ದಾಸ್ಯಕ್ಕೆ ಬಿದ್ದವರ ಆರೋಗ್ಯ ಹಾಳಾಗಿದೆ. ಮದ್ಯದಿಂದ ಆದಾಯ ಬರುತ್ತದೆ ಎಂದು ಮನುಷ್ಯರನ್ನು ಬಲಿಕೊಟ್ಟು, ಕುಟುಂಬದ ನೆಮ್ಮದಿ ಹಾಳು ಮಾಡಿ ಸರ್ಕಾರ ನಡೆಸಬೇಕೆ’ ಎಂದು ಪ್ರಶ್ನಿಸಿದರು.

‘ಮದ್ಯಪಾನ, ಧೂಮಪಾನ, ಗಾಂಜಾ–ಅಫೀಮು ಸೇವನೆಯಿಂದ ಎಷ್ಟೆಲ್ಲಾ ಕುಟುಂಬಗಳು ಹಾಳಾಗಿವೆ ಎಂಬ ಲೆಕ್ಕ ಸರ್ಕಾರದ ಬಳಿ ಇದ್ದೇ ಇರುತ್ತದೆ. ಆದರೂ ವ್ಯಸನಕಾರಕ ವಸ್ತುಗಳ ನಿಷೇಧಕ್ಕೆ ಮುಂದಾಗದಿರುವುದು ಆಳುವವರು ಜನಪರವಾಗಿರುವ ಬಗ್ಗೆ ಅನುಮಾನ ಹುಟ್ಟಿಸುತ್ತದೆ. ದೇಶದ ಕೆಲ ರಾಜ್ಯಗಳಲ್ಲಿ ಮದ್ಯಪಾನ ನಿಷೇಧವಿದೆ. ನಮ್ಮಲ್ಲಿಯೂ ಇಂತಹಕಾನೂನನ್ನು ತರುವಂತೆ ಬುದ್ಧಿಜೀವಿಗಳು, ಪ್ರಗತಿಪರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಆಗ್ರಹಿಸಿದರು.

‘ದುಶ್ಚಟಗಳ ಕಾರಣದಿಂದ ಕುಟುಂಬದ ಆರ್ಥಿಕ ಸ್ಥಿತಿ ಹಾಳಾಗಿ ಎಷ್ಟೋ ಹೆಣ್ಣುಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದಾರೆ. ಕುಡಿದ ಮತ್ತಿನಲ್ಲಿ ಲೆಕ್ಕವಿಲ್ಲದಷ್ಟು ಕೊಲೆ, ಸುಲಿಗೆ, ಅತ್ಯಾಚಾರಗಳು ನಡೆದಿವೆ. ಎಷ್ಟೆಲ್ಲ ಕಾನೂನುಗಳಿದ್ದರೂ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲ. ಬಹುತೇಕ ಹಳ್ಳಿಗಳಲ್ಲಿ ಕಾನೂನಿನ ಭಯವಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ನಮ್ಮ ಊರಿನಲ್ಲೂ ನಮ್ಮ ಮನೆಯ ಮುಂದೆಯೇ ಮದ್ಯಮಾರಾಟ ನಡೆಯುತ್ತಿತ್ತು. ನನ್ನ ಓದಿಗೆ ಅದರಿಂದ ತೊಂದರೆ ಆಗುತ್ತಿತ್ತು. ಎಷ್ಟು ಜನರಿಗೆ ಇಂತಹ ಅಕ್ರಮಗಳನ್ನು ಪ್ರಶ್ನಿಸುವ ಧೈರ್ಯವಿದೆ? ಕಾನೂನು ಕಾಪಾಡಬೇಕಾದವರೂ ಮೌನ ತಾಳಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವ್ಯಸನದ ದಾಸನಾಗುವ ಬದಲು ಶಿಕ್ಷಣದ ದಾಸನಾಗು’ ಎಂಬ ಧ್ಯೇಯ ವಾಕ್ಯದೊಂದಿಗೆ ನನ್ನ ತಂದೆ, ಸಹೋದರರ ಜೊತೆ ಪಾದಯಾತ್ರೆ ಆರಂಭಿಸಿದ್ದೇನೆ. ಸಮಾಜದಲ್ಲಿ ಶಾಂತಿ–ನೆಮ್ಮದಿ ನೆಲೆಸಲು ಮದ್ಯಮುಕ್ತ ರಾಜ್ಯ ನಮ್ಮದಾಗಬೇಕು. ಪ್ರತಿ ಕುಟುಂಬಕ್ಕೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣವಾಗಬೇಕು. ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಆರೋಗ್ಯಕ್ಕೆ ಪೂರಕವಾಗುವ ವಸ್ತುಗಳನ್ನು ಉತ್ಪಾದಿಸಿ, ಬಳಸುವುದಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು’ ಎಂದು ಲಾವಣ್ಯಾ ಪ್ರತಿಪಾದಿಸಿದರು.

ಪಾದಯಾತ್ರೆಗೆ ನಗರಸಭಾ ಅಧ್ಯಕ್ಷೆ ಷಂಶುನ್ನಿಸಾ ಚಾಲನೆ ನೀಡಿದರು. ಸಾಮಾಜಿಕ ಹೋರಾಟಗಾರ ಕಸವನಹಳ್ಳಿ ರಮೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಎಬಿವಿಪಿ ಮುಖಂಡ ಯೋಗೇಶ್, ಶ್ರೀನಿವಾಸ್ ಮಸ್ಕಲ್, ಅಬ್ದುಲ್ ಅಜೀಜ್, ಜಿ. ದಾದಾಪೀರ್, ಲಾವಣ್ಯಾ ತಂದೆ ಚನ್ನಕೇಶವಪ್ಪ ಇದ್ದರು.

ಪ್ರಸ್ತುತ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ಬಿ.ಎಸ್‌ಸಿ ವ್ಯಾಸಂಗ ಮಾಡುತ್ತಿರುವ ಲಾವಣ್ಯಾ, 2016ರಲ್ಲಿ 8ನೇ ತರಗತಿ ಓದುತ್ತಿದ್ದಾಗ ಜಿಲ್ಲೆಯನ್ನು ಬಯಲು ಶೌಚಮುಕ್ತ ಮಾಡುವಂತೆ ಒತ್ತಾಯಿಸಿ ಸತ್ಯಾಗ್ರಹ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT